ಬೆಂಗಳೂರು: ‘ರಾಜ್ಯ ಸರ್ಕಾರ ಮುಂಬರುವ ಬಜೆಟ್‌ನಲ್ಲಿ ವಾಲ್ಮೀಕಿ ಸಮುದಾಯಕ್ಕೆ ತಲಾ ಒಂದು ವೈದ್ಯಕೀಯ ಮತ್ತು ಎಂಜಿನಿಯರಿಂಗ್ ಕಾಲೇಜು ಘೋಷಿಸಬೇಕು’ ಎಂದು ವಾಲ್ಮೀಕಿ ಸಮಾಜದ ಸಮಾನ ಮನಸ್ಕರ ವಿಶೇಷ ಸಭೆ ಒಕ್ಕೊರಲಿನಿಂದ ಆಗ್ರಹಿಸಿದೆ.
ಮಾಜಿ ಸಂಸದ ವಿ.ಎಸ್. ಉಗ್ರಪ್ಪ ನೇತೃತ್ವದಲ್ಲಿ ಶಾಸಕರ ಭವನದಲ್ಲಿ ಭಾನುವಾರ ಈ ಸಭೆ ನಡೆಯಿತು. ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಉಗ್ರಪ್ಪ, ‘ವಾಲ್ಮೀಕಿ ಸಮುದಾಯದಲ್ಲಿ ಅತಿ ಹೆಚ್ಚು ಶಾಸಕರು, ಸಂಸದರಿದ್ದರೂ ಸಮುದಾಯದ ಶಿಕ್ಷಣದ ಕಡೆಗೆ ಒಬ್ಬರೂ ಗಮನಹರಿಸುತ್ತಿಲ್ಲ’ ಎಂದರು.
‘ಜಾತಿ ಜನಗಣತಿ ವರದಿಯನ್ನು ಸರ್ಕಾರ ತಕ್ಷಣ ಬಿಡುಗಡೆ ಮಾಡಬೇಕು. ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್ ಮಂಡನೆ ಮಾಡಬೇಕು’ ಎಂದು ಆಗ್ರಹಿಸಿದ ಅವರು, ‘ವಾಲ್ಮೀಕಿ ಸಮುದಾಯ ಉತ್ತರ ಭಾರತದಲ್ಲಿ ಪರಿಶಿಷ್ಟ ಜಾತಿಯಲ್ಲಿದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಎಸ್‌ಟಿಗೆ ಸೇರಿದೆ. ತೆಲಂಗಾಣ, ಆಂಧ್ರಪ್ರದೇಶದಲ್ಲಿ ಒಬಿಸಿ ಪಟ್ಟಿಯಲ್ಲಿದೆ. ಆದರೆ, ಕರ್ನಾಟಕದಲ್ಲಿ ಈಗ ನಾಯಕ ಜನಾಂಗದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣಪತ್ರಗಳು ಹೆಚ್ಚಾಗಿವೆ’ ಎಂದರು.
‘ಎಸ್‌ಟಿ ಜನಾಂಗ ಹೆಚ್ಚಿರುವ ಜಿಲ್ಲೆಗಳಲ್ಲಿ ಕೆಐಎಡಿಬಿಯಿಂದ ವಾಲ್ಮೀಕಿ ಕೈಗಾರಿಕಾ ಪ್ರದೇಶ ನಿರ್ಮಿಸಿ, 50 ಜನರಿಗೆ ಕೈಗಾರಿಕೆ ಸ್ಥಾಪನೆಗೆ ತಲಾ ಎರಡು ಎಕರೆ ಜಾಗದ ಜೊತೆಗೆ ₹ 10 ಕೋಟಿ ಭದ್ರತೆ ನೀಡಬೇಕು. ಎಸ್‌ಟಿ ಸಮುದಾಯದ ಜನರಿಗೆ ಕನಿಷ್ಠ 50 ಕ್ಷೇತ್ರದಲ್ಲಿ 100 ಎಕರೆ ಕೃಷಿ ಭೂಮಿ ನೀಡಿ, ವಾಲ್ಮೀಕಿ ಕೃಷಿ ಕೇಂದ್ರ ಎಂದು ನಾಮಕರಣ ಮಾಡಬೇಕು ಎಂದೂ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು’ ಎಂದರು.
ಸಭೆಯಲ್ಲಿ ರಾಜನಹಳ್ಳಿ ಪ್ರಸನ್ನಾನಂದಪುರಿ ಸ್ವಾಮೀಜಿ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದರು. ‘ಪ್ರಸನ್ನಾನಂದಪುರಿ ಸ್ವಾಮೀಜಿ ಜನರನ್ನು ದಿಕ್ಕುತಪ್ಪಿಸಿ ಜಾತ್ರಾ ಸಂಸ್ಕೃತಿ ಬಿತ್ತುತ್ತಿದ್ದಾರೆ. ಸಮಾಜದ ಏಳಿಗೆಯ ಬಗ್ಗೆ ಗಮನಹರಿಸುತ್ತಿಲ್ಲ. ಅವರ ವಿರುದ್ಧ ಧ್ವನಿ ಎತ್ತಿದವರ ಮೇಲೆ ದೂರು ಕೊಡಿಸುವ ಕೆಲಸ ಮಾಡುತ್ತಿದ್ದಾರೆ’ ಎಂದು ಕೆಲವರು ದೂರಿದರು.
ವಾಲ್ಮೀಕಿ ಮಹಾಸಭಾದ ಮಾಜಿ ಅಧ್ಯಕ್ಷ ಎಂ. ನರಸಿಂಹಯ್ಯ, ವಾಲ್ಮೀಕಿ ಸಮುದಾಯದ ವಿವಿಧ ಮಠಗಳ ಮಠಾಧೀಶರು, ವಿವಿಧ ಸಂಘಟನೆಗಳು ಮುಖಂಡರು, ಬುದ್ದಿಜೀವಿಗಳು, ಸಾಹಿತಿಗಳು ಸಭೆಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.