ADVERTISEMENT

ಮೇಕೆದಾಟು ಯೋಜನೆ ಜಾರಿಗಾಗಿ ಹೆದ್ದಾರಿಯಲ್ಲಿ ಮಲಗಿ ವಾಟಾಳ್‌ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 12:35 IST
Last Updated 31 ಡಿಸೆಂಬರ್ 2018, 12:35 IST
ಐಜೂರು ವೃತ್ತದಲ್ಲಿ ಸೋಮವಾರ ವಾಟಾಳ್ ನಾಗರಾಜು ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು
ಐಜೂರು ವೃತ್ತದಲ್ಲಿ ಸೋಮವಾರ ವಾಟಾಳ್ ನಾಗರಾಜು ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು   

ರಾಮನಗರ: ಮೇಕೆದಾಟು ಅಣೆಕಟ್ಟೆ ನಿರ್ಮಾಣಕ್ಕೆ ಒತ್ತಾಯಿಸಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜು ಸೋಮವಾರ ಬೆಂಗಳೂರು–ಮೈಸೂರು ಹೆದ್ದಾರಿಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ತಮ್ಮ ಬೆಂಬಲಿಗರೊಂದಿಗೆ ಸಮಾವೇಶಗೊಂಡ ವಾಟಾಳ್‌, ರಸ್ತೆ ಮೇಲೆಯೇ ಹಾಸಿಗೆ ಹಾಸಿ, ದಿಂಬು, ಚೆಂಬು ಮುಂದಿಟ್ಟು ಅಸಮಾಧಾನ ವ್ಯಕ್ತಪಡಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಅವರು ಯೋಜನೆಗೆ ಕೂಡಲೇ ಚಾಲನೆ ನೀಡುವಂತೆ ಒತ್ತಾಯಿಸಿದರು.

‘ಮೇಕೆದಾಟು ಯೋಜನೆಗೆ ಸರ್ಕಾರ ಯಾಕೆ ತಡ ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇದಕ್ಕೆ ತಮಿಳುನಾಡು ಸ್ವಭಾವತಃ ತನ್ನ ವಿರೋಧ ವ್ಯಕ್ತಪಡಿಸಿದೆ. ಆದರೆ, ಕೇಂದ್ರ ಸರ್ಕಾರವಾಗಲಿ, ಸುಪ್ರೀಂ ಕೋರ್ಟ್ ಆಗಲಿ ಯೋಜನೆಗೆ ತಡೆಯೊಡ್ಡಿಲ್ಲ. ಹೀಗಿದ್ದರೂ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ಕಾಲಾಹರಣ ಮಾಡುತ್ತಿದೆ’ ಎಂದು ದೂರಿದರು.

ADVERTISEMENT

‘ಸರ್ಕಾರವು ಜನವರಿ 15ರೊಳಗೆ ಶ್ವೇತಪತ್ರವನ್ನು ಹೊರಡಿಸುವ ಮೂಲಕ ಯೋಜನೆಗೆ ಎಷ್ಟು ಹಣವನ್ನು ಇಟ್ಟಿದ್ದೀರಿ, ಯಾವ ಏಜೆನ್ಸಿಗೆ ಕಾಮಗಾರಿಯನ್ನು ನೀಡಿದ್ದೀರಿ, ಶಂಕು ಸ್ಥಾಪನೆ ಯಾವಾಗ ಮಾಡುತ್ತೀರಿ ಎಂಬುದನ್ನು ತಿಳಿಸಬೇಕು. ಇಲ್ಲವಾದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಬಂದ್‌ಗೆ ಕರೆ ನೀಡಲಾಗುವುದು’ ಎಂದು ಎಚ್ಚರಿಸಿದರು.

‘ಸಮ್ಮಿಶ್ರ ಸರ್ಕಾರ ಯಾವಾಗಲಾದರೂ ಬೀಳಬಹುದು. ಮುಂದೆ ಹೊಸ ಸರ್ಕಾರ ಬಂದರೆ ಯೋಜನೆ ವಿಳಂಬವಾಗುತ್ತದೆ. ಹೀಗಾಗಿ ಕೂಡಲೇ ಶಂಕುಸ್ಥಾಪನೆ ಮಾಡಿ’ ಎಂದು ಆಗ್ರಹಿಸಿದರು.

ವರ್ಷಪೂರ್ತಿ ಚಳವಳಿ: ಮೇಕೆದಾಟು ಯೋಜನೆಯ ಅನುಷ್ಠಾನ, ರಾಜ್ಯದಲ್ಲಿ 23 ಸಾವಿರ ಸರ್ಕಾರಿ ಕನ್ನಡ ಶಾಲೆಗಳನ್ನು ಮುಚ್ಚುವ ಸರ್ಕಾರ ನಿರ್ಧಾರ ವಿರೋಧಿಸಿ 2019ರ ವರ್ಷ ಪೂರ್ತಿ 150 ಚಳವಳಿ ಹಮ್ಮಿಕೊಳ್ಳುವುದಾಗಿ ಅವರು ತಿಳಿಸಿದರು.

ಗಿರೀಶ್‌, ಜಗದೀಶ್, ರಾಜು. ಪಾರ್ಥ, ಮಂಜುನಾಥ್‌, ಗಾಯತ್ರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.