ADVERTISEMENT

ಉಪರಾಷ್ಟ್ರಪತಿಯಿಂದ ಮೋದಿ ಗುಣಗಾನ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 20:15 IST
Last Updated 22 ಏಪ್ರಿಲ್ 2019, 20:15 IST
   

ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ 54ನೇ ಘಟಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು ತಮ್ಮ ಭಾಷಣದಲ್ಲಿ ಪದೇ ಪದೇ ಪ್ರಧಾನಿ ನರೇಂದ್ರ ಮೋದಿ ಅವರ ಹೆಸರನ್ನು ಹಾಗೂ ಅವರ ಸರ್ಕಾರದ ಕಾರ್ಯಕ್ರಮಗಳನ್ನು ಉಲ್ಲೇಖಿಸಿದರು.

‘ಬೇಟಿ ಬಚಾವೊ, ಬೇಟಿ ಪಢಾವೊ’, ಸ್ವಚ್ಛ ಭಾರತ, ಜನಧನ್‌, ಆಧಾರ್‌ ಯೋಜನೆಗಳನ್ನೂ ಭಾಷಣದ ನಡುನಡುವೆ ಪ್ರಸ್ತಾಪಿಸಿದರು.

‘ಉನ್ನತ ಶಿಕ್ಷಣದ ಡಿಜಿಟಲೀಕರಣಕ್ಕೆ ಒತ್ತು ನೀಡಬೇಕು. ಆನ್‌ಲೈನ್ ಕೋರ್ಸ್‌ಗಳ ಸಂಖ್ಯೆ ಹೆಚ್ಚಬೇಕು. ಎಲ್ಲರಿಗೂ ಸುಲಭದಲ್ಲಿ ವಿದ್ಯಾಭ್ಯಾಸ ಕೈಗೆಟಕುವಂತಾಗಬೇಕು’ ಎಂಬ ಆಶಯ ವ್ಯಕ್ತಪಡಿಸಿದರು. ಇದಕ್ಕೆ ಜನ್‌ಧನ್‌ ಹಾಗೂ ಆಧಾರ್‌ ಜೋಡಣೆಯಂತಹ ಕಾರ್ಯಕ್ರಮಗಳನ್ನು ಉದಾಹರಣೆಯಾಗಿ ನೀಡಿದರು.

ADVERTISEMENT

‘ಮೋದಿಯವರು ಸ್ವಚ್ಛ ಭಾರತ ಯೋಜನೆ ತಂದರು. ಆದರೆ, ಅದನ್ನು ಕಾರ್ಯರೂಪಕ್ಕೆ ತರುವ ಹೊಣೆ ಸರ್ಕಾರಕ್ಕೆ ಸೀಮಿತವಲ್ಲ. ಸಾರ್ವಜನಿಕರ ಸಹಭಾಗಿತ್ವವೂ ಅಗತ್ಯ’ ಎಂದು ಅವರು ಹೇಳಿದರು.

‘ರೈತರ ಮಗಳೊಬ್ಬಳು ಐದು ಚಿನ್ನದ ಪದಕ ಪಡೆದಿದ್ದಾರೆ. ಇಂದು ಚಿನ್ನದ ಪದಕ ಪಡೆದವರಲ್ಲಿ ಶೇ 65ರಷ್ಟು ಮಂದಿ ಹೆಣ್ಣುಮಕ್ಕಳೇ ಇದ್ದಾರೆ.‘ಬೇಟಿ ಬಚಾವೊ, ಬೇಟಿ ಪಢಾವೊ’ ಇಲ್ಲಿ ನಿಜವಾಗಿ ಸಾಕಾರಗೊಂಡಿದೆ. ಮಹಿಳೆ ಎಲ್ಲ ಕ್ಷೇತ್ರಗಳಲ್ಲೂ ಇದ್ದಾರೆ. ಹೆಣ್ಣುಮಕ್ಕಳು ಓದಿ ಏನು ಮಾಡಬೇಕು ಎಂಬ ಕಾಲ ಹೋಯಿತು’ ಎಂದರು.

‘ಸಮೃದ್ಧ ಆಹಾರ ಪರಂಪರೆ ನಮ್ಮಲ್ಲಿದೆ. ಅದನ್ನು ಬಿಟ್ಟು ನಾವು ಪಾಶ್ಚಾತ್ಯ ಆಹಾರದ ಹಿಂದೆ ಬಿದ್ದಿರುವುದು ಸರಿಯಲ್ಲ. ಮೋದಿಗಾಗಿ ಅಲ್ಲ, ನಿಮ್ಮ ದೇಹಕ್ಕಾಗಿಯಾದರೂ ಸತ್ವಯುತ ಆಹಾರವನ್ನೇ ಸೇವಿಸಿ’ ಎಂದು ಕಿವಿಮಾತು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.