ADVERTISEMENT

ಥೂ ಅಂತಾರಲ್ಲಾ, ನಾನೇನು ಮಾಡಿದ್ದೇನೆ?: ಲಕ್ಷ್ಮಿ ಹೆಬ್ಬಾಳಕರ

ಲಿಂಗಾಯತ ಮಹಿಳೆಗೆ ಅವಮಾನ ಮಾಡಿದ್ದಾರೆ: ಆರೋಪ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2021, 20:00 IST
Last Updated 27 ನವೆಂಬರ್ 2021, 20:00 IST
ಲಕ್ಷ್ಮಿ ಹೆಬ್ಬಾಳಕರ
ಲಕ್ಷ್ಮಿ ಹೆಬ್ಬಾಳಕರ   

ಬೆಳಗಾವಿ: ‘ಲಿಂಗಾಯತ ಸಮಾಜದ ಹೆಣ್ಣುಮಗಳು ನಾನು. ಥೂ ಅಂತಾರಲ್ಲ, ನಾನೇನು ಮಾಡಿದ್ದೇನೆ? ಬಸವಣ್ಣನ ತತ್ವದ ಮೇಲೆ ಜೀವನ ನಡೆಸುತ್ತಿರುವ ಹೆಣ್ಣು ಮಗಳೊಬ್ಬಳ ಬಗ್ಗೆ ಮಾತನಾಡಿ ಸ್ತ್ರೀಕುಲಕ್ಕೆ ಅವಮಾನ ಮಾಡಿದ್ದಾರೆ..’

– ಕಾಂಗ್ರೆಸ್‌ ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರು ಗೋಕಾಕ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೆಸರು ಪ್ರಸ್ತಾಪಿಸದೆ ಮೇಲಿನಂತೆ ಟೀಕಿಸಿದರು.

ಬೈಲಹೊಂಗಲದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಲಕ್ಷ್ಮಿಯನ್ನು ಸೋಲಿಸುವುದೇ ಗುರಿಯಂತೆ. ನೀವು ನಿಮ್ಮ ಪಕ್ಷದಲ್ಲಿ ಬೆಳೆಯಬಹುದು; ನಾನು ನನ್ನ ಪಕ್ಷದಲ್ಲಿ ಬೆಳೆಯಬಾರದಾ?ಪಕ್ಷದ ವರಿಷ್ಠರು ಆಶೀರ್ವದಿಸಿದ್ದರಿಂದ ತಮ್ಮ ಚನ್ನರಾಜ ಹಟ್ಟಿಹೊಳಿ ವಿಧಾನಪರಿಷತ್‌ ಚುನಾವಣೆ ಕಣಕ್ಕಿಳಿದಿದ್ದಾನೆ. ಬಿಜೆಪಿಯವರೂ ಅಭ್ಯರ್ಥಿ ಘೋಷಿಸಿದ್ದಾರೆ. ಹೀಗಿರುವಾಗ, ಮೂರನೇಯವರಿಗೆ ಏನು ಕೆಲಸ?’ ಎಂದು ತಿರುಗೇಟು ನೀಡಿದರು.

ADVERTISEMENT

‘ಸದಸ್ಯರಿಗಾಗಿ ಗಾಡಿಗಳನ್ನು ಕಳುಹಿಸ್ತಾರಂತೆ. ಚುನಾವಣೆ ಮುಗಿದ ಮೇಲೂ ಆ ಗಾಡಿಗಳು ಇರುತ್ತವೆಯೇ? ಜಾರಕಿಹೊಳಿ ಕುಟುಂಬದ ಮಾಸ್ಟರ್‌ ಮೈಂಡ್ ಆಗಿರುವ ಸತೀಶ ಜಾರಕಿಹೊಳಿ ನಮ್ಮ ಜೊತೆಗಿದ್ದಾರೆ. ಇಲ್ಲಿರುವವರು ನಾವು. ನಿಮಗೆ ನೆರವಾಗುವವರು ನಾವು. ಕಳೆದ ಸಲ ನಮ್ಮ ಪಕ್ಷದಲ್ಲೇ ಇದ್ದು ನಮ್ಮವರನ್ನೇ ಸೋಲಿಸಿ ಅನ್ಯಾಯ ಮಾಡಿದರು. ಈ ಬಾರಿ ಬಿಜೆಪಿಗೆ ಹೋಗಿ ಅವರಿಗೂ ಅನ್ಯಾಯ ಮಾಡುತ್ತಿದ್ದಾರೆ’ ಎಂದರು.

‘ಮತ ಹಾಕದಿದ್ದರೂ, ಸ್ವಾಭಿಮಾನ ಮಾರಿಕೊಳ್ಳಬೇಡಿ. ಮುಂದೆ ಮಂತ್ರಿಯಾಗ್ತಾರೆ ನೋಡ್ಕೊಳ್ತೀವಿ ಎಂದು ಬೆದರಿಸುತ್ತಿದ್ದಾರಂತೆ. ತಾಯಿ ಕಿತ್ತೂರು ರಾಣಿ ಚನ್ಮಮ್ಮ, ಸಂಗೊಳ್ಳಿ ರಾಯಣ್ಣ, ಪುನೀತ್‌ ರಾಜ್‌ಕುಮಾರ್ ಅಂಥವರೇ ಬದುಕಲಿಲ್ಲ. ಇನ್ನು ನಾವೆಲ್ಲರೂ ಯಾವ ಲೆಕ್ಕ?’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.