ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜನಪ್ರತಿನಿಧಿಗಳಿಗೆ ರಕ್ಷಣೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆಯ ಭಯವೇ ಇಲ್ಲದ ಗೂಂಡಾಗಳು ಬಿಜೆಪಿ ಶಾಸಕರನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.
ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿಯ ಸುವರ್ಣಸೌಧದಲ್ಲಿ ಶಾಸಕ ಸಿ.ಟಿ. ರವಿ ಅವರ ಮೇಲೆ ನಡೆದ ಹಲ್ಲೆಯ ಪ್ರಕರಣವನ್ನು ಲಘುವಾಗಿ ತೆಗೆದುಕೊಂಡಿದ್ದ ಸರ್ಕಾರದ ಧೋರಣೆಯಿಂದ ಕಾಂಗ್ರೆಸ್ ಗೂಂಡಾಗಳು ಪ್ರೇರಣೆ ಪಡೆದಿದ್ದಾರೆ. ಬಿಜೆಪಿ ಶಾಸಕ ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿದ ಘಟನೆ ಖಂಡನೀಯ. ಜನರಿಗೆ ರಕ್ಷಣೆ ನೀಡಬೇಕಾದ ಜನಪ್ರತಿನಿಧಿಗಳಿಗೇ ರಕ್ಷಣೆ ಇಲ್ಲವಾಗಿದೆ. ರಾಜ್ಯ ಅರಾಜಕತೆಯತ್ತ ಸಾಗುತ್ತಿದೆ ಎಂದು ದೂರಿದರು.
ಶಾಸಕ ಮುನಿರತ್ನ ಅವರ ಮೇಲೆ ಆಪಾದನೆ ಏನೇ ಇರಲಿ, ಅದಕ್ಕೆ ನ್ಯಾಯದ ಪರಿಧಿಯಲ್ಲಿ ಉತ್ತರ ಸಿಗುತ್ತದೆ. ಮುನಿರತ್ನ ಅವರ ಮೇಲೆ ಹಲ್ಲೆ ನಡೆಸಿರುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳದಿದ್ದರೆ ಬಿಜೆಪಿ ಹೋರಾಟ ಕೈಗೆತ್ತಿಕೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಮಿತಿ ಮೀರಿದ ದುರಾಡಳಿತ:
ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ ಈ ಕುರಿತು ಮಾತನಾಡಿ, ಕಾಂಗ್ರೆಸ್‌ನವರ ದುರಾಡಳಿತ ಮಿತಿ ಮೀರಿದೆ. ಕಾನೂನು ಕೈಗೆ ತೆಗೆದುಕೊಳ್ಳಬಾರದು ಎನ್ನುವ ಕನಿಷ್ಠ ಜ್ಞಾನವೂ ಇವರಿಗೆ ಇಲ್ಲ. ಇವರು ನೂರು ವರ್ಷ ಆಚರಣೆ ಮಾಡಿ ಏನು ಪ್ರಯೋಜನ ಎಂದು ಪ್ರಶ್ನಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.