ಸಿದ್ದರಾಮಯ್ಯ
ಬೆಂಗಳೂರು: ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಸೇರಿದಂತೆ 11 ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ವಿಶ್ವಕರ್ಮ ಮಹಾ ಒಕ್ಕೂಟವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಮನವಿ ಸಲ್ಲಿಕೆಯ ನಂತರ ಈ ಕುರಿತು ಮಾಹಿತಿ ನೀಡಿದ ಒಕ್ಕೂಟದ ಅಧ್ಯಕ್ಷ ವಿಜಯ ಕುಮಾರ ಪತ್ತಾರ, ‘ವಿಶ್ವಕರ್ಮ ಸಮಾಜದ ಧಾರ್ಮಿಕ ಕ್ಷೇತ್ರಗಳಾದ ತಿಂಥಣಿ, ವರವಿ ಮೌನೇಶ್ವರ ಕ್ಷೇತ್ರಗಳು, ಬೆಳಗಾವಿ ಜಿಲ್ಲೆಯ ಶಿರಸಂಗಿ, ಚಾಮರಾಜನಗರ ಜಿಲ್ಲೆಯ ಚಿಕ್ಕಲ್ಲೂರಿನ ಸಿದ್ದಪ್ಪಾಜಿ ಕ್ಷೇತ್ರ, ವೀರ ಬ್ರಹ್ಮೇಂದ್ರ ಸ್ವಾಮಿಗಳ ಜನ್ಮಸ್ಥಳ ಚಿಕ್ಕಬಳ್ಳಾಪುರ ಜಿಲ್ಲೆಯ ಪಾಪಾಗ್ನಿ ಮಠ, ಅಮರಶಿಲ್ಪಿ ಜಕಣಾಚಾರಿ ಅವರ ಜನ್ಮಸ್ಥಳ ತುಮಕೂರು ಜಿಲ್ಲೆಯ ಕೈದಾಳ ಸೇರಿ ಏಳು ಪುಣ್ಯಕ್ಷೇತ್ರಗಳಲ್ಲಿ ಸಮುದಾಯ ಭವನ ಸೇರಿದಂತೆ ಅಗತ್ಯ ನಾಗರಿಕ ಸೌಲಭ್ಯಗಳನ್ನು ಅಭಿವೃದ್ಧಿ ಪಡಿಸಬೇಕು. ಈ ಕ್ಷೇತ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ವಿಶ್ವಕರ್ಮ ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲು ವಿನಂತಿಸಲಾಗಿದೆ’ ಎಂದರು.
‘ಮುಂಬರುವ ವಿಧಾನಪರಿಷತ್ ಚುನಾವಣೆಯಲ್ಲಿ ವಿಶ್ವಕರ್ಮ ಸಮುದಾಯದ ಒಬ್ಬರಿಗೆ ಅವಕಾಶ ನೀಡಬೇಕು. ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಕ್ಕೆ ಅಧಿಕ ಅನುದಾನ ನೀಡಬೇಕು. ಅಸಂಘಟಿತ ಕಾರ್ಮಿಕರಾಗಿರುವ ಚಿನ್ನ, ಬೆಳ್ಳಿ ಆಭರಣ ತಯಾರಿಸುವ ಬಡ ಸ್ವರ್ಣಕಾರರಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ ರಚಿಸಿ, ರಾಜ್ಯದಲ್ಲಿ ಮಾರಾಟವಾಗುವ ಸಿದ್ಧ ಆಭರಣಗಳ ಮೇಲೆ ಸೆಸ್ ವಿಧಿಸಬೇಕು. ಬರುವ ಆದಾಯದಿಂದ ಕುಶಲಕರ್ಮಿಗಳಿಗೆ ಸಾಮಾಜಿಕ ಭದ್ರತಾ ಸೌಲಭ್ಯ ಒದಗಿಸಲು ವಿನಂತಿಸಲಾಗಿದೆ’ ಎಂದರು.
ವಿಶ್ವಕರ್ಮ ಮಹಾ ಒಕ್ಕೂಟದ ಪದಾಧಿಕಾರಿಗಳಾದ ಶಿವಪ್ರಸಾದ, ಚಂದ್ರಶೇಖರ ಪತ್ತಾರ, ಮಹಾದೇವ ಪಾಂಚಾಳ, ಸರ್ವೇಶ ಆಚಾರ, ಚಂದ್ರಕಾಂತ ಸೋನಾರ, ಮಲ್ಲೇಶ, ರಾಮಾಚಾರ, ಮೌನೇಶ, ಕೆ.ಎಂ.ಮಂಜುನಾಥ ಸೋಮಶೇಖರ, ಹರೀಶ ಆಚಾರ, ದಮರುಗೇಶ, ಕಾಶೀನಾಥ ಪತ್ತಾರ, ಮೋಹನ ನರಗುಂದ, ಸಿ.ಪಿ.ಮಾಯಾಚಾರಿ ನಿಯೋಗದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.