ADVERTISEMENT

ವಿಜೆಎನ್‌ಎಲ್‌ಗೆ ‘ಐಐಎನ್ ಪ್ಲಾಟಿನಂ–2025’ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2025, 15:58 IST
Last Updated 17 ಜೂನ್ 2025, 15:58 IST
ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮತ್ತು ಅಧಿಕಾರಿಗಳ ತಂಡವು ‘ಐಐಎನ್ ಪ್ಲಾಟಿನಂ’ ಪ್ರಶಸ್ತಿಯ ಜೊತೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿತು
ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮತ್ತು ಅಧಿಕಾರಿಗಳ ತಂಡವು ‘ಐಐಎನ್ ಪ್ಲಾಟಿನಂ’ ಪ್ರಶಸ್ತಿಯ ಜೊತೆ ಜಲಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮಂಗಳವಾರ ಭೇಟಿ ಮಾಡಿತು   

ಬೆಂಗಳೂರು: ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯಲ್ಲಿ ಅಕ್ವಡಕ್ಟ್ ಎಂಜಿನಿಯರಿಂಗ್ ತಂತ್ರಜ್ಞಾನ ಬಳಸಿ ಯಶಸ್ವಿಯಾಗಿರುವ ಕಾರಣಕ್ಕೆ ವಿಶ್ವೇಶ್ವರಯ್ಯ ಜಲ ನಿಗಮಕ್ಕೆ (ವಿಜೆಎನ್‌ಎಲ್‌) 2025ನೇ ಸಾಲಿನ ಪ್ರತಿಷ್ಠಿತ ‘ಐಐಎನ್ ಪ್ಲಾಟಿನಂ’ ರಾಷ್ಟ್ರೀಯ ಪ್ರಶಸ್ತಿ ಲಭಿಸಿದೆ.

ಮೂಲಸೌಕರ್ಯ ಕ್ಷೇತ್ರದಲ್ಲಿ ಕೌಶಲಾಭಿವೃದ್ಧಿ, ತಂತ್ರಜ್ಞಾನ ಆವಿಷ್ಕಾರಕ್ಕೆ ಆದ್ಯತೆ ನೀಡುವ ಉದ್ದೇಶದಿಂದ ರಚನೆಯಾಗಿರುವ ಇನ್ಫ್ರಾಸ್ಟ್ರಕ್ಚರ್ ಸ್ಕಿಲ್ ಡೆವಲ್‌ಮೆಂಟ್‌ ಅಕಾಡೆಮಿಯು ಇತ್ತೀಚೆಗೆ ನವದೆಹಲಿಯಲ್ಲಿ ಈ ಪ್ರಶಸ್ತಿಯನ್ನು ನೀಡಿದೆ. ಜಲ ಸಂಪನ್ಮೂಲ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ವಿಜೆಎನ್ಎಲ್ ವ್ಯವಸ್ಥಾಪಕ ನಿರ್ದೇಶಕ ಸಣ್ಣಚಿತ್ತಯ್ಯ ಮತ್ತು ಅಧಿಕಾರಿಗಳ ತಂಡವು ಪ್ರಶಸ್ತಿಯ ಜೊತೆ ಮಂಗಳವಾರ ಭೇಟಿ ಮಾಡಿತು.

ವಿಶ್ವೇಶ್ವರಯ್ಯ ಜಲ ನಿಗಮವು ಎತ್ತಿನಹೊಳೆ ಸಮಗ್ರ ಕುಡಿಯುವ ನೀರಿನ ಯೋಜನೆಯ ಭಾಗವಾಗಿ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ಚೇಳೂರು ಸಮೀಪ 10.47 ಕಿ.ಮೀಟರ್‌ ಉದ್ದದ 3,300 ಕ್ಯುಸೆಕ್‌ ಸಾಮರ್ಥ್ಯದ ಬೃಹತ್ ಮೇಲ್ಗಾಲುವೆ ನಿರ್ಮಾಣ ಕಾಮಗಾರಿಯನ್ನು 2018ರಲ್ಲಿ ಆರಂಭಿಸಿ 2023ರಲ್ಲಿ ಪೂರ್ಣಗೊಳಿಸಿದೆ. ಅಕ್ವಡಕ್ಟ್ (ಬೃಹತ್ ಮೇಲ್ಗಾಲುವೆ) ಎಂಜಿನಿಯರಿಂಗ್ ತಂತ್ರಜ್ಞಾನದ ಮೂಲಕ ಇದನ್ನು ನಿರ್ಮಿಸಲಾಗಿದೆ. ಈ ಕಾಮಗಾರಿಗೆ ₹ 1,162.69 ಕೋಟಿ ಮತ್ತು ಭೂಸ್ವಾಧೀನಕ್ಕೆ ₹ 40.99 ಕೋಟಿ ಸೇರಿ ಒಟ್ಟು ₹ 1203.68 ಕೋಟಿ ‌ವೆಚ್ಚವಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.