ಬೆಂಗಳೂರು: ಮತದಾರರ ನೋಂದಣಿಗೆ ಕೇಂದ್ರೀಕೃತ ಆನ್‌ಲೈನ್ ವ್ಯವಸ್ಥೆ ಮಾ. 1ರಿಂದ ಜಾರಿಗೆ ಬಂದಿದೆ.
ಕೇಂದ್ರೀಕೃತ ಮತದಾರರ ಪಟ್ಟಿ ನಿರ್ವಹಣಾ ವ್ಯವಸ್ಥೆ (ಇಆರ್‌ಒ ನೆಟ್)ನ್ನು ಅನುಷ್ಠಾನಕ್ಕೆ ತರಲಾಗಿದೆ. ನೋಂದಣಿಗೆ ಇದುವರೆಗೆ ಇದ್ದ ಆನ್‌ಲೈನ್ ಅರ್ಜಿ ಸಲ್ಲಿಕೆಯ ವೆಬ್ ಪೋರ್ಟಲ್ www.voterreg.kar.nic.inನ್ನು ಸ್ಥಗಿತಗೊಳಿಸಲಾಗುವುದು. ಮುಂದೆ ರಾಷ್ಟ್ರಮಟ್ಟದಲ್ಲಿ ಒಂದೇ ವೆಬ್ ಪೋರ್ಟಲ್ nvsp.in ಇರಲಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ತಿಳಿಸಿದರು.
ಇ– ಅಟ್ಲಾಸ್:‘ರಾಜ್ಯದ ಎಲ್ಲ 58,186 ಮತಗಟ್ಟೆಗಳ ಪ್ರದೇಶದಲ್ಲಿ ನಡೆಯುತ್ತಿರುವ ಚುನಾವಣಾ ಚಟುವಟಿಕೆಯನ್ನು ಭೌಗೋಳಿಕ ಮಾಹಿತಿ ವ್ಯವಸ್ಥೆ (ಜಿಐಎಸ್) ಮೂಲಕ ಗಮನಿಸಲಾಗುವುದು. ಆಯಾ ಪ್ರದೇಶದ ನಕ್ಷೆವಾರು ಮತಗಟ್ಟೆಗಳನ್ನು ಗುರುತಿಸಿ ನಿಗಾ ವಹಿಸಲಾಗುವುದು. ಈ ಮಾಹಿತಿಯನ್ನು ಚುನಾವಣಾ ಆಯೋಗದ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗುವುದು’ ಎಂದರು.
ಸುವಿಧಾ ವ್ಯವಸ್ಥೆ:'ಚುನಾವಣೆಯ ಪ್ರಚಾರಸಭೆ, ರ‍್ಯಾಲಿ, ವಾಹನ ಪರವಾನಗಿ, ರಾಜಕೀಯ ಪಕ್ಷಗಳು ತಾತ್ಕಾಲಿಕ ಚುನಾವಣಾ ಕಚೇರಿ ಸ್ಥಾಪನೆ, ಧ್ವನಿವರ್ಧಕ ಬಳಕೆ ಸಂಬಂಧಿಸಿದ ಎಲ್ಲ ಪರವಾನಗಿಗಳನ್ನು ಒಂದೇ ಕಡೆ ಸಿಗುವಂತಾಗಲು ಏಕಗವಾಕ್ಷಿ ವ್ಯವಸ್ಥೆ ಮಾಡಲಾಗಿದೆ. ಆಯಾ ಚುನಾವಣಾಧಿಕಾರಿ ಮಟ್ಟದಲ್ಲಿ ಈ ವ್ಯವಸ್ಥೆ ಇರುತ್ತದೆ. ಹೆಲಿಕಾಪ್ಟರ್‌ಗಳನ್ನು ಬಳಕೆ ಮಾಡುವುದಿದ್ದಲ್ಲಿ 36 ಗಂಟೆಗಳ ಮೊದಲು ಅರ್ಜಿ ಸಲ್ಲಿಸಬೇಕು’.
‘ಸೇನೆಯಲ್ಲಿರುವ ಮತದಾರರಿಗೆ ಮತಪತ್ರಗಳನ್ನು ಆನ್‌ಲೈನ್ ಮೂಲಕ ಕಳುಹಿಸಲಾಗುವುದು. ಅವರು ಅಲ್ಲಿನ ಮುಖ್ಯ ಅಧಿಕಾರಿಯ ಮೂಲಕ ಡೌನ್‌ಲೋಡ್ ಮಾಡಿಸಿಕೊಂಡು ಮತ ಚಲಾಯಿಸಿ ಅಂಚೆ ಮೂಲಕ ಕಳುಹಿಸಬಹುದು’ ಎಂದರು.
ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭಾವಚಿತ್ರವೂ ಇರಲಿದೆ. ಮತದಾನದ ಖಾತ್ರಿಗಾಗಿ ವಿವಿ ಪ್ಯಾಟ್ ಯಂತ್ರಗಳು ಏಳು ಸೆಕೆಂಡ್ ಕಾಲ ಮತ ಯಾರಿಗೆ ಹೋಯಿತು ಎಂಬ ಬಗ್ಗೆ ಮತದಾರರಿಗೆ ಪುಟ್ಟ ಪರದೆಯ ಮೂಲಕ ಪ್ರದರ್ಶಿಸಲಿವೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.