ADVERTISEMENT

ಮಳೆ ಅಬ್ಬರ: ಮಲಪ್ರಭಾ, ಕೃಷ್ಣಾ ನೀರಿನ ಪ್ರಮಾಣ ಏರಿಕೆ

ಮನೆ ಕುಸಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 1:12 IST
Last Updated 20 ಜೂನ್ 2020, 1:12 IST
ಮಂಗಳೂರಿನ ಸೋಮೇಶ್ವರದಲ್ಲಿ ಶುಕ್ರವಾರ ಕಡಲ್ಕೊರೆತ ಹೆಚ್ಚಿದೆ
ಮಂಗಳೂರಿನ ಸೋಮೇಶ್ವರದಲ್ಲಿ ಶುಕ್ರವಾರ ಕಡಲ್ಕೊರೆತ ಹೆಚ್ಚಿದೆ   
""

ಬೆಂಗಳೂರು: ಕರಾವಳಿ ಮತ್ತು ಮಲೆನಾಡಿನ ವಿವಿಧ ಜಿಲ್ಲೆಗಳಲ್ಲಿ ಮಳೆ ಮುಂದುವರಿದಿದೆ. ದಕ್ಷಿಣ ಕನ್ನಡದಲ್ಲಿ ಮಳೆ ಕಡಿಮೆ ಆಗಿದ್ದರೆ, ಸಮುದ್ರದ ಅಬ್ಬರ ತೀವ್ರಗೊಂಡಿದೆ. ಹರಪನಳ್ಳಿ ತಾಲ್ಲೂಕಿನಲ್ಲಿ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿಗೆ ಒಳಹರಿವು ಹೆಚ್ಚಳವಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಮುದ್ರದ ಅಬ್ಬರ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಉಳ್ಳಾಲದ ಸೋಮೇಶ್ವರ– ಉಚ್ಚಿಲ ಪ್ರದೇಶದಲ್ಲಿ ಎರಡು ಮನೆಗಳು ಸಮುದ್ರ ಪಾಲಾಗುವ ಸ್ಥಿತಿ ತಲುಪಿದ್ದು, ಎರಡೂ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ಸಮುದ್ರದ ಅಂಚಿನಲ್ಲಿರುವ ಸೋಮೇಶ್ವರದ ಮೋಹನ್‌ ಮತ್ತು ಉಚ್ಚಿಲದ ವಸಂತ್‌ ಎಂಬುವವರ ಮನೆಗಳು ಕೊಚ್ಚಿಕೊಂಡು ಕಡಲು ಸೇರುವ ಅಪಾಯ ಎದುರಾಗಿದೆ.ಸೋಮೇಶ್ವರ– ಉಚ್ಚಿಲದಲ್ಲಿ 15 ತೆಂಗಿನ ಮರಗಳು ಸಮುದ್ರದ ಪಾಲಾಗಿವೆ.ಜಿಲ್ಲೆಯಲ್ಲಿ ಶುಕ್ರವಾರ ಸರಾಸರಿ 1.7 ಸೆಂಟಿ ಮೀಟರ್‌ ಮಳೆ ಬಿದ್ದಿದೆ.

ADVERTISEMENT

ಉಡುಪಿ ಜಿಲ್ಲೆಯ ಕುಂದಾಪುರ, ಬೈಂದೂರು, ಕಾಪು, ಬ್ರಹ್ಮಾವರ, ಹೆಬ್ರಿ, ಉಡುಪಿ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.ಬೈಂದೂರು ತಾಲ್ಲೂಕಿನ ಹೆರೂರಿನಲ್ಲಿ ಸಿಡಿಲಿಗೆ ಮನೆ ಭಾಗಶಃ ಹಾನಿಯಾಗಿದೆ.ಕಾಪು, ಬೈಂದೂರು ಭಾಗದಲ್ಲಿ ಕಡಲ್ಕೊರೆತ ಶುರುವಾಗಿದೆ. ಸ್ವರ್ಣಾ, ಸೀತಾ ನದಿಗಳ ಒಳಹರಿವು ಹೆಚ್ಚಿದೆ.

ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಸಾಧಾರಣ ಮಳೆಯಾಗಿದೆ. ಚಿಕ್ಕಮಗಳೂರು, ಎನ್‌.ಆರ್‌.ಪುರ, ಬಾಳೆಹೊನ್ನೂರು, ಶೃಂಗೇರಿ ಭಾಗದಲ್ಲಿ ತುಂತುರು, ಕೊಪ್ಪ ಭಾಗದಲ್ಲಿ ಸಾಧಾರಣ ಮಳೆಯಾಗಿದೆ.ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲ್ಲೂಕಿನ ಹಲವಾಗಲು ಗ್ರಾಮದಲ್ಲಿ ಮಳೆಗೆ ಮನೆ ಕುಸಿದು ಮನೆಯಲ್ಲಿದ್ದ ಮಹಿಳೆಯೊಬ್ಬರು ಶುಕ್ರವಾರ ಮೃತಪಟ್ಟಿದ್ದಾರೆ. ಆರುಂಡಿ ನಾಗರತ್ನಮ್ಮ (50) ಮೃತಪಟ್ಟವರು. ಎರಡು ದಿನಗಳಿಂದ ಮಳೆಯಾಗಿದ್ದು, ಮನೆಯ ಗೋಡೆಗಳು ಶಿಥಿಲಗೊಂಡಿದ್ದವು. ಪ್ರಕರಣ ದಾಖಲಾಗಿದೆ.ದಾವಣಗೆರೆ ನಗರ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ತ್ಯಾವಣಿಗೆಯಲ್ಲಿ ಸಾಧಾರಣ, ಮಾಯಕೊಂಡದಲ್ಲಿ ತುಂತುರು ಮಳೆಯಾಗಿದೆ.

ಶಿವಮೊಗ್ಗ ಜಿಲ್ಲೆಯ ಶಿವಮೊಗ್ಗ, ಸಾಗರ, ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನ ಹಲವೆಡೆ ವಿವಿಧೆಡೆ ಶುಕ್ರವಾರ ಸಾಧಾರಣ ಮಳೆಯಾಗಿದೆ. ಚಿತ್ರದುರ್ಗದ ಹೊಳಲ್ಕೆರೆಯಲ್ಲಿ ಸೋನೆ ಮಳೆ, ಚಿಕ್ಕಜಾಜೂರಿನಲ್ಲಿ ಸಾಧಾರಣ ಮಳೆಯಾಗಿದೆ.

ಕೃಷ್ಣಾ ನದಿ ಹರಿವು ಹೆಚ್ಚಳ: ಉತ್ತರ ಕನ್ನಡದ ಕಾರವಾರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಮಳೆ ಇಳಿಮುಖವಾಗಿದ್ದು ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಶುಕ್ರವಾರ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆಯಾಗಿದೆ.ಬೆಳಗಾವಿ ಜಿಲ್ಲೆಯಲ್ಲಿ ಮಲಪ್ರಭಾ ನದಿಗೆ ಹರಿವು ಹೆಚ್ಚಳವಾಗಿದೆ. ಜಿಲ್ಲೆಯ ಇತರೆಡೆ ಮಳೆಯ ರಭಸ ಕಡಿಮೆಯಾಗಿದೆ.

ನೆರೆಯ ಮಹಾರಾಷ್ಟ್ರದಿಂದ ಹರಿದು ಬರುತ್ತಿರುವ ನೀರಿನ ಪ್ರಮಾಣದಲ್ಲಿ ಹೆಚ್ಚಳವಾಗಿದೆ. ರಾಜಾಪುರ ಬ್ಯಾರೇಜ್‌ ಮೂಲಕ 48,250 ಕ್ಯುಸೆಕ್‌ ಹಾಗೂ ದೂಧ್‌ಗಂಗಾ ನದಿಯ 15 ಸಾವಿರ ಕ್ಯುಸೆಕ್ಸ್‌ ಸೇರಿದಂತೆ ಚಿಕ್ಕೋಡಿಯ ಕಲ್ಲೋಳ ಬಳಿ ಕೃಷ್ಣಾ ನದಿಗೆ 63,250 ಕ್ಯುಸೆಕ್‌ ನೀರು ಸೇರಿಕೊಳ್ಳುತ್ತಿದೆ.

ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ನೀರು ಬಿಡುತ್ತಿರುವ ಕಾರಣ ರಬಕವಿ ಬನಹಟ್ಟಿ ಸಮೀಪದ ಹಿಪ್ಪರಗಿ ಜಲಾಶಯಕ್ಕೆ ಶುಕ್ರವಾರ 55,800 ಕ್ಯುಸೆಕ್‍ ನೀರು ಹರಿದು ಬಂದಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಿದ್ದು ಶುಕ್ರವಾರ ಒಂದೇ ದಿನ ಜಲಾಶಯ ಕ್ಕೆ 3.6 ಟಿಎಂಸಿ ಅಡಿ ನೀರು ಹರಿದು ಬಂದಿದೆ.

ರಾಜ್ಯದ ಅಣೆಕಟ್ಟೆಗಳ ನೀರಿನ ಮಟ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.