ADVERTISEMENT

ನೀರಾವರಿ: ₹1,123 ಕೋಟಿ ಹೆಚ್ಚುವರಿ ಅನುಮೋದನೆ ನೀಡಿದ ಮೈತ್ರಿ ಸರ್ಕಾರ

ಮಂಜೂರಾದ ಮೊತ್ತಕ್ಕಿಂತ ಹೆಚ್ಚು ಅನುದಾನ ಕೊಟ್ಟ ಮೈತ್ರಿ ಸರ್ಕಾರ l 46 ಕಾಮಗಾರಿಗಳಿಗೆ ಹೆಚ್ಚುವರಿ ಹಣ

ಮಂಜುನಾಥ್ ಹೆಬ್ಬಾರ್‌
Published 24 ಆಗಸ್ಟ್ 2019, 20:00 IST
Last Updated 24 ಆಗಸ್ಟ್ 2019, 20:00 IST
   

ಬೆಂಗಳೂರು: ಮೈತ್ರಿ ಸರ್ಕಾರ 2019–20ನೇ ಆರ್ಥಿಕ ವರ್ಷದ ಮೊದಲ 3 ತಿಂಗಳಲ್ಲಿ ರಾಜ್ಯದ ನಾಲ್ಕು ನೀರಾವರಿ ನಿಗಮಗಳಿಗೆ ಸಂಬಂಧಿಸಿದ 46 ಕಾಮಗಾರಿಗಳಿಗೆ ಮಂಜೂರಾದ ಮೊತ್ತಕ್ಕಿಂತ ಒಟ್ಟು ₹1,123 ಕೋಟಿ ಹೆಚ್ಚುವರಿ ಹಣ ಭರಿಸಲು ಅನುಮೋದನೆ ನೀಡಿದೆ.

‘ಪ್ರಜಾವಾಣಿ’ಗೆ ಲಭ್ಯವಾದ ದಾಖಲೆಗಳ ಪ್ರಕಾರ ಕೆಲವು ಕಾಮಗಾರಿಗಳಿಗೆ ಮಂಜೂರಾದ ಮೊತ್ತಕ್ಕಿಂತ ಶೇ 93ರಷ್ಟು ಹಾಗೂ ಶೇ 88.3ರಷ್ಟು ಹೆಚ್ಚುವರಿ ಆರ್ಥಿಕ ಹೊರೆ (ಇಎಫ್‌ಐ) ಬೇಡಿಕೆಗೂ ಅನುಮೋದನೆ ನೀಡಿರುವುದು ಗೊತ್ತಾಗಿದೆ. ಹೆಚ್ಚುವರಿ ಆರ್ಥಿಕ ಹೊರೆ ಪ್ರಮಾಣ ಅತ್ಯಂತ ಜಾಸ್ತಿ ಇರುವುದು ವಿಶ್ವೇಶ್ವರಯ್ಯ ಜಲನಿಗಮದ (ವಿಜೆಎನ್ಎಲ್‌) ಕಾಮಗಾರಿಗಳಲ್ಲಿ. ಈ ನಿಗಮದಲ್ಲಿ ಕೇವಲ ನಾಲ್ಕು ಕಾಮಗಾರಿಗಳಿಗೆ ಮಂಜೂರಾದ ಮೊತ್ತಕ್ಕಿಂತ ₹ 937.37 ಕೋಟಿ ಹೆಚ್ಚು ಖರ್ಚು ಮಾಡಲು ಅನುಮತಿ ನೀಡಲಾಗಿದೆ.

‘ಮೈತ್ರಿ ಸರ್ಕಾರವು ಒಂದು ವರ್ಷದ ಅವಧಿಯಲ್ಲಿ ನೀರಾವರಿ ಯೋಜನೆಗಳ ಕಾಮಗಾರಿ ಸಂಬಂಧ ಮಂಜೂರಾದ ಮೊತ್ತಕ್ಕಿಂತ ಹೆಚ್ಚು ಅನುದಾನ ಬಳಕೆಗೆ ಅನುಮೋದನೆ ನೀಡಿರುವ ಮೊತ್ತ ₹3 ಸಾವಿರ ಕೋಟಿಗೂ ಅಧಿಕ’ ಎಂದು ಉನ್ನತ ಮೂಲಗಳು ತಿಳಿಸಿವೆ.

ADVERTISEMENT

‘ಕೃಷ್ಣಭಾಗ್ಯ ಜಲ ನಿಗಮ (ಕೆಬಿಜೆಎನ್ಎಲ್‌), ಕರ್ನಾಟಕ ನೀರಾವರಿ ನಿಗಮ (ಕೆಎನ್‌ಎನ್‌ಎಲ್‌), ವಿಶ್ವೇಶ್ವರಯ್ಯ ನೀರಾವರಿ ನಿಗಮ (ವಿಜೆಎನ್‌ಎಲ್‌) ಹಾಗೂ ಕಾವೇರಿ ನೀರಾವರಿ ನಿಗಮಕ್ಕೆ (ಸಿಎನ್‌ಎನ್‌ಎಲ್‌) ಮುಖ್ಯಮಂತ್ರಿಯೇ ಅಧ್ಯಕ್ಷರು. ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲೇ ಈ ಅನುಮೋದನೆ ನೀಡಲಾಗಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿ ‘ಪ್ರಜಾವಾಣಿ’ಗೆ ತಿಳಿಸಿದರು.

ಜುಲೈ ತಿಂಗಳ ಕೊನೆಯಲ್ಲಿ ಇಎಫ್‌ಐಗೆ ಅನುಮೋದನೆ ನೀಡಿದ್ದನ್ನು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ತಡೆ ಹಿಡಿದಿದ್ದರು.

ಕಾಮಗಾರಿಗಳಿಗೆ ಸಚಿವ ಸಂಪುಟದ ಒಪ್ಪಿಗೆಯೇ ಇಲ್ಲ!

ಇಎಫ್‌ಐ ಪ್ರಮಾಣ ₹ 1 ಕೋಟಿವರೆಗೆ ಇದ್ದರೆ ಆಯಾ ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ಅನುಮೋದನೆ ನೀಡಬಹುದು. ₹ 1.5 ಕೋಟಿವರೆಗಿನ ಮೊತ್ತಕ್ಕೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನುಮೋದನೆ ನೀಡಬಹುದು. ₹ 3 ಕೋಟಿವರೆಗಿನ ಮೊತ್ತಕ್ಕೆ ನಿಗಮದ ಆಡಳಿತ ಮಂಡಳಿ ಒಪ್ಪಿಗೆ ನೀಡಬಹುದು. ಅದಕ್ಕಿಂತ ಹೆಚ್ಚಿನ ಇಎಫ್‌ಐಗೆ ಸಚಿವ ಸಂಪುಟದ ಅನುಮೋದನೆ ಅಗತ್ಯ ಎಂಬುದು ನಿಯಮ.‘2019–20ನೇ ಸಾಲಿನಲ್ಲಿ ಇಎಫ್‌ಐಗೆ ಸಂಪುಟ ಅನುಮೋದನೆ ಪಡೆದಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಸಚಿವ ಸಂಪುಟದ ಒಪ್ಪಿಗೆಯೇ ಇಲ್ಲ!

ಇಎಫ್‌ಐ ಪ್ರಮಾಣ ₹ 1 ಕೋಟಿವರೆಗೆ ಇದ್ದರೆ ಆಯಾ ನಿಗಮದ ವ್ಯವಸ್ಥಾಪಕ ನಿರ್ದೇಶಕರೇ ಅನುಮೋದನೆ ನೀಡಬಹುದು. ₹ 1.5 ಕೋಟಿವರೆಗಿನ ಮೊತ್ತಕ್ಕೆ ಜಲಸಂಪನ್ಮೂಲ ಇಲಾಖೆಯ ಕಾರ್ಯದರ್ಶಿ ಅನುಮೋದನೆ ನೀಡಬಹುದು. ₹ 3 ಕೋಟಿವರೆಗಿನ ಮೊತ್ತಕ್ಕೆ ನಿಗಮದ ಆಡಳಿತ ಮಂಡಳಿ ಒಪ್ಪಿಗೆ ನೀಡಬಹುದು. ಅದಕ್ಕಿಂತ ಹೆಚ್ಚಿನ ಇಎಫ್‌ಐಗೆ ಸಚಿವ ಸಂಪುಟದ ಅನುಮೋದನೆ ಅಗತ್ಯ ಎಂಬುದು ನಿಯಮ.

‘2019–20ನೇ ಸಾಲಿನಲ್ಲಿ ಇಎಫ್‌ಐಗೆ ಸಚಿವ ಸಂಪುಟ ಅನುಮೋದನೆ ಪಡೆದಿಲ್ಲ’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

₹ 10 ಕೋಟಿಗಿಂತ ಹೆಚ್ಚು ಇಎಫ್‌ಐಗೆ ಅನುಮೋದನೆ ಪಡೆದ ಕಾಮಗಾರಿಗಳು

ನಿಗಮ; ಕಾಮಗಾರಿ; ಮಂಜೂರಾದ ಮೊತ್ತ (₹ ಕೋಟಿ); ಇಎಫ್‌ಐ ಮೊತ್ತ (₹ ಕೋಟಿ); ಶೇಕಡಾವಾರು ಹೆಚ್ಚಳ

ಕೆಬಿಜೆಎನ್ಎಲ್‌; ನಾರಾಯಣಪುರ ಬಲದಂಡೆ ಮುಖ್ಯ ಕಾಲುವೆ ನಿರ್ಮಾಣ ( 150.70 – 153.14 ಕಿ.ಮೀ–ಸೇತುವೆ ಸೇರಿ); 19.50; 16.30; 83.60‌

ಕೆಎನ್‌ಎನ್ಎಲ್‌; ತುಬಚಿ– ಬಬಲೇಶ್ವರ ಏತ ನೀರಾವರಿ ವಿತರಣಾ ತೊಟ್ಟಿ 2ರಲ್ಲಿ ಆಕ್ವಿಡಕ್ಟ್‌ ನಿರ್ಮಾಣ; 309.04; 24.58; 7.36

ಸಿಎನ್‌ಎನ್‌ಎಲ್‌; ದೇವರಾಯ ಅಣೆಕಟ್ಟು ಕಾಲುವೆ ಆಧುನೀಕರಣ; 23.73; 10.88; 45.87

ವಿಜೆಎನ್‌ಎಲ್‌; ಉಬ್ರಾಣಿ– ಅಮೃತಾಪುರ ಏತ ನೀರಾವರಿ ಯೋಜನೆ ಕೆರೆ ನಿರ್ಮಾಣ; 294; 94.76; 32.14

ವಿಜೆಎನ್‌ಎಲ್‌; ಭದ್ರಾ ಮೇಲ್ದಂಡೆ ಯೋಜನೆ ಚಿತ್ರದುರ್ಗ ಶಾಖಾ ಕಾಲುವೆಯಲ್ಲಿ ಸುರಂಗ ನಿರ್ಮಾಣ; 7,207; 503; 6.99

ಹೊಸದುರ್ಗ ತಾಲ್ಲೂಕಿನಲ್ಲಿ ವೇದಾವತಿ ನದಿಗೆ ಸೇತುವೆ ಕಂ ಬ್ಯಾರೇಜ್‌ ನಿರ್ಮಾಣ; 1010; 188; 18.59

ವಿಜೆಎನ್‌ಎಲ್‌; ಸಕಲೇಶಪುರ– ಮೂಡಿಗೆರೆ ರಸ್ತೆಯಿಂದ ನಡಹಳ್ಳಿ ಗ್ರಾಮಕ್ಕೆ ರಸ್ತೆ ನಿರ್ಮಾಣ 390.11; 151.04; 38.72

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.