ADVERTISEMENT

ಖಾಸಗೀಕರಣದ ವಿರುದ್ಧ ಕೇರಳದಲ್ಲಿ ಹೋರಾಟ, ಬೆಂಬಲ ಕೊಡುವುದಿಲ್ಲ ಎಂದ ಸಚಿವ

ಕೇರಳದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್‌ ಮಾಸ್ಟರ್‌ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 28 ಆಗಸ್ಟ್ 2021, 12:17 IST
Last Updated 28 ಆಗಸ್ಟ್ 2021, 12:17 IST
‘ನರೇಗಾ–2005 ಮತ್ತು ಗ್ರಾಮೀಣ ಕೆಲಸಗಾರರು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇರಳದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್‌ ಮಾಸ್ಟರ್‌ ಮಾತನಾಡಿದರು
‘ನರೇಗಾ–2005 ಮತ್ತು ಗ್ರಾಮೀಣ ಕೆಲಸಗಾರರು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಕೇರಳದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್‌ ಮಾಸ್ಟರ್‌ ಮಾತನಾಡಿದರು   

ಮಂಡ್ಯ: ‘ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಕೇರಳದಲ್ಲಿ ಬೆಂಬಲ ದೊರೆಯುವುದಿಲ್ಲ. ಕೇಂದ್ರದ ಖಾಸಗೀಕರಣ ನೀತಿಗಳ ವಿರುದ್ಧ ಕೇರಳ ಸರ್ಕಾರ ಹೋರಾಟ ನಡೆಸಲಿದೆ’ ಎಂದು ಕೇರಳದ ಗ್ರಾಮೀಣಾಭಿವೃದ್ಧಿ ಮತ್ತು ಅಬಕಾರಿ ಖಾತೆ ಸಚಿವ ಎಂ.ವಿ.ಗೋವಿಂದನ್‌ ಮಾಸ್ಟರ್‌ ಎಚ್ಚರಿಸಿದರು.

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘ (ಎಐಎಡಬ್ಲ್ಯುಯು), ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ವತಿಯಿಂದ ನಗರದ ಕರ್ನಾಟಕ ಸಂಘದ ಆವರಣದಲ್ಲಿ ಶನಿವಾರ ನಡೆದ ‘ನರೇಗಾ–2005 ಮತ್ತು ಗ್ರಾಮೀಣ ಕೆಲಸಗಾರರು’ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

‘ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರ ಕೃಷಿ ಕಾರ್ಮಿಕರು, ರೈತರು ಹಾಗೂ ಬಡಜನರಿಗೆ ವಿರೋಧಿಯಾಗಿದೆ. ಸಾಮಾನ್ಯ ಜನರಿಗೆ ಅವಶ್ಯಕವಾಗಿರುವ ಸಂಸ್ಥೆಗಳನ್ನು ಖಾಸಗೀರಣ ಮಾಡಲು ಹೊರಟಿದ್ದು ಅದಕ್ಕೆ ಕೇರಳದಲ್ಲಿ ಯಾವುದೇ ಸಹಾಯ ಸಿಗುವುದಿಲ್ಲ. ಕೇರಳದಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ನಾವು ಬಿಡುವುದಿಲ್ಲ’ ಎಂದರು.

ADVERTISEMENT

‘ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಪಿಣರಾಯಿ ವಿಜಯನ್‌ ಸರ್ಕಾರ ಕೇರಳದಲ್ಲಿ 2ನೇ ಬಾರಿಗೆ ಅಧಿಕಾರ ಹಿಡಿದಿದೆ. ಬಡವರು, ದಲಿತರು, ಕಾರ್ಮಿಕರ ಪರವಾಗಿ ಕೆಲಸ ಮಾಡಿದ ಕಾರಣದಿಂದಲೇ ಈ ದಾಖಲೆ ನಿರ್ಮಾಣವಾಗಿದೆ. ಕೇರಳ ಸರ್ಕಾರ ಕೋವಿಡ್‌ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿದೆ. ಕೋವಿಡ್‌ ಸಾವಿನ ಪ್ರಮಾಣ ದೇಶದಲ್ಲೇ ಕಡಿಮೆ ಇದೆ’ ಎಂದರು.

ಎಐಎಡಬ್ಲ್ಯುಯು ಸಂಘದ ಮುಖಂಡ ಸುನೀತ್‌ ಚೋಪ್ರಾ ಮಾತನಾಡಿ ‘ಕೇಂದ್ರ ಸರ್ಕಾರ ಮಹತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯನ್ನು ರದ್ದುಗೊಳಿಸುವ ಹುನ್ನಾರ ನಡೆಸಿದೆ. ಪ್ರಧಾನಿ ನರೇಂದ್ರ ಮೋದಿ ಅವರು ನರೇಗಾ ಯೋಜನೆಯನ್ನು ನಿಷ್ಪ್ರಯೋಜಕ ಯೋಜನೆ ಎಂದಿದ್ದರು. ಆದರೆ ಕೋವಿಡ್‌ 2ನೇ ಅಲೆಯ ವೇಳೆ ಕೂಲಿ ಹೆಚ್ಚಳ ಮಾಡಿದರು. ಮತ್ತೆ ಅವರು ಯೋಜನೆಯನ್ನು ನಿಷ್ಪ್ರಯೋಜಕ ಎಂದರೆ ಅವರೇ ನಿಷ್ಪ್ರಯೋಜಕರಾಗಲಿದ್ಧಾರೆ’ ಎಂದರು.

ಎಐಎಡಬ್ಲ್ಯುಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ವೆಂಕಟ್‌ ಮಾತನಾಡಿ ‘ಬಡಜನರ ಕೈಗೆ ಕೆಲಸ ಕೊಡುವ ಯೋಜನೆ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಂಬಿಕೆ ಇಲ್ಲ. ಯೋಜನೆಯ ಅನುದಾನವನ್ನು ಶೇ 2ಕ್ಕೆ ಇಳಿಸಿದೆ. ಕೆಲಸಗಾರರಲ್ಲಿ ವೇತನ ತಾರತಮ್ಯ, ಜಾತಿ ಸಂಘರ್ಷವನ್ನು ತಂದಿಟ್ಟಿದೆ. ಇದರ ವಿರುದ್ಧ ಸೆ.25ರಂದು ಭಾರತ ಬಂದ್‌ ಆಚರಣೆ ಮಾಡಲಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.