ADVERTISEMENT

ವಿಜಯೋತ್ಸವಕ್ಕೆ ಚುನಾವಣಾ ಆಯೋಗದ ನಿಷೇಧ

ಎಣಿಕೆ ಕೇಂದ್ರದ ಸಭಾಂಗಣದಲ್ಲಿನ ಆಸನ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ

ಪಿಟಿಐ
Published 27 ಏಪ್ರಿಲ್ 2021, 22:04 IST
Last Updated 27 ಏಪ್ರಿಲ್ 2021, 22:04 IST
   

ನವದೆಹಲಿ: ವಿಧಾನಸಭೆ ಚುನಾವಣೆಯ ಮತ ಎಣಿಕೆ ನಡೆದ ಬಳಿಕ ವಿಜಯೋತ್ಸವ ಆಚರಿಸುವುದನ್ನು ನಿಷೇಧಿಸಿ ಚುನಾವಣಾ ಆಯೋಗವು ಮಂಗಳವಾರ ಆದೇಶ ಹೊರಡಿಸಿದೆ. ಕೋವಿಡ್‌ ಹರಡುವಿಕೆಯನ್ನು ತಡೆಯುವುದಕ್ಕಾಗಿ ಈ ಕ್ರಮ ಕೈಗೊಳ್ಳಲಾಗಿದೆ.

ತಮಿಳುನಾಡು, ಕೇರಳ, ಪುದುಚೇರಿ, ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭೆ ಚುನಾವಣೆಯ ಮತ ಎಣಿಕೆ ಮೇ 2ರಂದು ನಡೆಯಲಿದೆ.

ಪಶ್ಚಿಮ ಬಂಗಾಳದ ಎಂಟನೆಯ ಮತ್ತು ಕೊನೆಯ ಹಂತದ ಮತದಾನ ಗುರುವಾರ (ಏ.29) ನಡೆಯಲಿದೆ. ಉಳಿದೆಡೆಗಳಲ್ಲಿ ಮತದಾನ ಪೂರ್ಣಗೊಂಡಿದೆ.

ADVERTISEMENT

ಗೆದ್ದ ಅಭ್ಯರ್ಥಿಯು ಚುನಾವಣಾಧಿಕಾರಿಯಿಂದ ಪ್ರಮಾಣಪತ್ರ ಪ‍ಡೆದುಕೊಳ್ಳಲು ಹೋಗುವಾಗ, ಅಭ್ಯರ್ಥಿಯ ಜತೆಗೆ ಇಬ್ಬರಿಗೆ ಮಾತ್ರ ಅವಕಾಶ ಇದೆ ಎಂದೂ ಆಯೋಗದ ಆದೇಶದಲ್ಲಿ ಹೇಳಲಾಗಿದೆ.

ಎಣಿಕೆ ಕೇಂದ್ರದ ಸಭಾಂಗಣದಲ್ಲಿನ ಟೇಬಲ್‌ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ. ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಸಂದರ್ಭದಲ್ಲಿ ಇಂತಹ ವ್ಯವಸ್ಥೆ ಜಾರಿಗೆ ತರಲಾಗಿತ್ತು.ಸಭಾಂಗಣದಲ್ಲಿನ ಆಸನ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ಇದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕೋವಿಡ್‌ ತಡೆ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಲ್ಲಿ ಆಯೋಗವು ವಿಫಲವಾಗಿದೆ ಎಂದು ಮದ್ರಾಸ್‌ ಹೈಕೋರ್ಟ್‌ ಸೋಮವಾರ ತರಾಟೆಗೆ ತೆಗೆದುಕೊಂಡಿತ್ತು. ಕೋವಿಡ್‌ ಹರಡಲು ಆಯೋಗ ಏಕೈಕ ಕಾರಣ. ಚುನಾವಣಾ ಆಯೋಗವು ಇತ್ತೀಚಿನ ದಿನಗಳಲ್ಲಿ ಅತ್ಯಂತ ಬೇಜವಾಬ್ದಾರಿ ಸಂಸ್ಥೆಯಾಗಿದೆ ಎಂದು ತೀಕ್ಷ್ಣವಾಗಿ ಹೇಳಿತ್ತು. ಮತ ಎಣಿಕೆಯ ಸಂದರ್ಭದಲ್ಲಿ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲನೆ ಆಗುವಂತೆ ಯೋಜನೆ ರೂಪಿಸಿ ಸಲ್ಲಿಸಲು ಆಯೋಗಕ್ಕೆ ಹೈಕೋರ್ಟ್‌ ಸೂಚಿಸಿತ್ತು.

ಟಿಎಂಸಿ ಮುಖಂಡನ ಮೇಲೆ ತೀವ್ರ ನಿಗಾ
ಕೋಲ್ಕತ್ತ: ಟಿಎಂಸಿಯ ಬಿರ್‌ಭೂಮ್‌ ಘಟಕದ ಅಧ್ಯಕ್ಷ ಅನುವ್ರತ ಮಂಡಲ್‌ ಅವರ ಮೇಲೆ ಮಂಗಳವಾರ ಸಂಜೆ 5ರಿಂದ ಶುಕ್ರವಾರ ಸಂಜೆ 7ರವರೆಗೆ ಕಟ್ಟುನಿಟ್ಟಿನ ನಿಗಾ ಇರಿಸುವಂತೆ ಚುನಾವಣಾ ಆಯೋಗವು ಆದೇಶಿಸಿದೆ. ಅವರ ವಿರುದ್ಧ ಹಲವಾರು ದೂರುಗಳು ಬಂದ ಕಾರಣಕ್ಕೆ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮತ್ತು ವಿವಿಧ ಮೂಲಗಳಿಂದ ಮಾಹಿತಿ ಪಡೆಯಲಾಗಿದೆ. ಜಿಲ್ಲಾಧಿಕಾರಿ ಮತ್ತು ಸಿಎಪಿಎಫ್‌ನ ಕಟ್ಟುನಿಟ್ಟು ನಿಗಾದಲ್ಲಿ ಮಂಡಲ್‌ ಅವರನ್ನು ಇರಿಸಲಾಗುವುದು. ಮುಕ್ತ ಮತ್ತು ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಇದು ಅಗತ್ಯ’ ಎಂದು ಅಧಿಕಾರಿ ಹೇಳಿದ್ದಾರೆ.

2019ರ ಲೋಕಸಭಾ ಚುನಾವಣೆ ಮತ್ತು 2016ರ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿಯೂ ಮಂಡಲ್‌ ಅವರನ್ನು ಇದೇ ರೀತಿಯ ನಿಗಾದಲ್ಲಿ ಇರಿಸಲಾಗಿತ್ತು. ಬಿರ್‌ಭೂಮ್‌ನಲ್ಲಿ ಗುರುವಾರ ಮತದಾನ ನಡೆಯಲಿದೆ.

ತಾರಾ ಪ್ರಚಾರಕರಿಗೆ ದಂಡ: ಹೈಕೋರ್ಟ್‌ಗೆ ಅರ್ಜಿ
ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಕೋವಿಡ್‌ ತಡೆ ಮಾರ್ಗಸೂಚಿ ಪಾಲಿಸದ ವಿವಿಧ ಪಕ್ಷಗಳ ತಾರಾ ಪ್ರಚಾರಕರು ಮತ್ತು ನಾಯಕರಿಗೆ ದಂಡ ವಿಧಿಸಿ, ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಚುನಾವಣಾ ಆಯೋಗಕ್ಕೆ ಸೂಚಿಸಬೇಕು ಎಂದು ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ.

ಪಶ್ಚಿಮ ಬಂಗಾಳದಲ್ಲಿ ಕಳೆದ ಒಂದು ವಾರದಲ್ಲಿ ಪ್ರಚಾರ ನಡೆಸಿದ ನಾಯಕರನ್ನು ಕಡ್ಡಾಯ ಪ್ರತ್ಯೇಕವಾಸಕ್ಕೆ ಒಳಪಡಿಸಬೇಕು ಎಂದೂ ಕೋರಲಾಗಿದೆ. ಉತ್ತರ ಪ್ರದೇಶದ ಮಾಜಿ ಡಿಜಿಪಿ ವಿಕ್ರಮ್‌ ಸಿಂಗ್‌ ಈ ಅರ್ಜಿ ಸಲ್ಲಿಸಿದ್ದಾರೆ.

***

ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಈ ನಿರ್ಧಾರವನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಬಿಜೆಪಿಯ ಎಲ್ಲ ರಾಜ್ಯ ಘಟಕಗಳಿಗೆ ಸೂಚನೆ ನೀಡಿದ್ದೇನೆ.
-ಜೆ.ಪಿ. ನಡ್ಡಾ, ಬಿಜೆಪಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.