ADVERTISEMENT

ಉಚಿತ ಕೊಡುಗೆಗಳ ಉಸಾಬರಿ ಸುಪ್ರೀಂ ಕೋರ್ಟ್‌ಗೆ ಏಕೆ? ಕೇರಳದ ಸಂಸದ ಪ್ರಶ್ನೆ

‘ಜನಶಕ್ತಿ ಉತ್ಸವ’ದಲ್ಲಿ ಸಂಸದ ಜಾನ್‌ ಬ್ರಿಟ್ಟಾಸ್‌ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2022, 16:07 IST
Last Updated 21 ಆಗಸ್ಟ್ 2022, 16:07 IST
ಕಾರ್ಯಕ್ರಮದಲ್ಲಿ ಜಾನ್‌ ಬ್ರಿಟ್ಟಾಸ್‌ (ಎಡದಿಂದ ಐದನೆಯವರು) ಅವರು ಜನಶಕ್ತಿ ಪತ್ರಿಕೆಯ ‘ಅಮೃತ ಕರ್ನಾಟಕ’ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕೆಯ ಸಂಪಾದಕ ಡಾ.ಕೆ.ಪ್ರಕಾಶ್‌, ಉತ್ಸವದ ಸ್ವಾಗತ ಸಮಿತಿಯ ಎನ್‌.ಕೆ.ವಸಂತರಾಜ್‌, ಸಾಹಿತಿ ಬಿ.ಎಂ.ರೋಹಿಣಿ, ಸಾಹಿತಿ ಪುರುಷೋತ್ತಮ ಬಿಳಿಮಲೆ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ, ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ, ಪ್ರಕಾಶಕ ಯು.ಬಸವರಾಜು, ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ಎಸ್‌.ವೈ.ಗುರುಶಾಂತ್‌, ಸ್ವಾಗತ ಸಮಿತಿಯ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್ ಇದ್ದಾರೆ  – ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ಜಾನ್‌ ಬ್ರಿಟ್ಟಾಸ್‌ (ಎಡದಿಂದ ಐದನೆಯವರು) ಅವರು ಜನಶಕ್ತಿ ಪತ್ರಿಕೆಯ ‘ಅಮೃತ ಕರ್ನಾಟಕ’ ಸಂಚಿಕೆಯನ್ನು ಬಿಡುಗಡೆ ಮಾಡಿದರು. ಪತ್ರಿಕೆಯ ಸಂಪಾದಕ ಡಾ.ಕೆ.ಪ್ರಕಾಶ್‌, ಉತ್ಸವದ ಸ್ವಾಗತ ಸಮಿತಿಯ ಎನ್‌.ಕೆ.ವಸಂತರಾಜ್‌, ಸಾಹಿತಿ ಬಿ.ಎಂ.ರೋಹಿಣಿ, ಸಾಹಿತಿ ಪುರುಷೋತ್ತಮ ಬಿಳಿಮಲೆ, ಹಂಪಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ, ಪತ್ರಿಕೆಯ ಸಂಪಾದಕ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ, ಪ್ರಕಾಶಕ ಯು.ಬಸವರಾಜು, ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ಎಸ್‌.ವೈ.ಗುರುಶಾಂತ್‌, ಸ್ವಾಗತ ಸಮಿತಿಯ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್ ಇದ್ದಾರೆ  – ಪ್ರಜಾವಾಣಿ ಚಿತ್ರ   

ಮಂಗಳೂರು: ‘ಜನರಿಗೆ ಉಚಿತ ಕೊಡುಗೆಗಳನ್ನು ಘೋಷಿಸುವ ಬಗ್ಗೆ ತೀರ್ಮಾನ ಮಾಡಬೇಕಾದುದು ಸಂಸತ್ ಮಾತ್ರ. ಉಚಿತ ಕೊಡುಗೆ ನಿಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ಯಾವ ನೆಲೆಯಲ್ಲಿ ತಾನೆ ಹೇಳಲು ಸಾಧ್ಯ. ಅಷ್ಟಕ್ಕೂ ಈ ಸುಪ್ರೀಂ ಕೋರ್ಟ್‌ಗೆ ಈ ಉಸಾಬರಿ ಏಕೆ? ದೇಶದಲ್ಲಿ ಹತ್ಯಾಕಾಂಡಗಳು ನಡೆದಾಗ, ಅವುಗಳನ್ನು ತಡೆಯಲು ಸುಪ್ರೀಂ ಕೋರ್ಟ್‌ ಏನಾದರೂ ಕ್ರಮ ಕೈಗೊಂಡಿದೆಯೇ’ ಎಂದು ಕೇರಳದ ಸಂಸದ ಜಾನ್‌ ಬ್ರಿಟ್ಟಾಸ್‌ ಪ್ರಶ್ನಿಸಿದರು.

ಸ್ವಾತಂತ್ರ್ಯದ 75ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ಭಾನುವಾರ ಆಯೋಜಿಸಿದ್ದ ‘ಜನಶಕ್ತಿ ಉತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಐದಾರು ವರ್ಷಗಳಲ್ಲಿ ಕಾರ್ಪೊರೇಟ್‌ ಉದ್ಯಮಿಗಳ ₹10 ಲಕ್ಷ ಕೋಟಿಗೂ ಅಧಿಕ ಸಾಲ ರೈಟ್‌ ಆಫ್‌ ಮಾಡಿದಾಗ ಯಾರೂ ಚಕಾರ ಎತ್ತಿಲ್ಲ. ಬಡವರ ಮನೆಗೆ ಪೂರೈಸುವ ನೀರಿಗೆ ಸಬ್ಸಿಡಿ ನೀಡುವಂತಹ ವಿಚಾರಕ್ಕೆ ತಕರಾರು ತೆಗೆಯಲಾಗುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

‘ಗುಜರಾತ್‌ನ ಬಿಲ್ಕಿಸ್‌ ಬಾನು ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಸಜೆ ಅನುಭವಿಸುತ್ತಿದ್ದ ಅಪರಾಧಿಗಳ ಶಿಕ್ಷೆಯನ್ನು ಮೊಟಕುಗೊಳಿಸಿ, ಅವರನ್ನು ಬಿಡುಗಡೆ ಮಾಡಲಾಯಿತು. ಘೋರ ಅಪರಾಧಿಗಳ ಬಿಡುಗಡೆಯ ‌ನಿರ್ಧಾರ ಕೈಗೊಂಡ ಸಮಿತಿಯಲ್ಲಿದ್ದ ಐಎಎಸ್‌ ಅಧಿಕಾರಿಗಳೂ ಇದಕ್ಕೆ ಆಕ್ಷೇಪ ದಾಖಲಿಸಿಲ್ಲ. ಬಿಡುಗಡೆಯಾದ ಅಪರಾಧಿಗಳಿಗೆ ಹಾರ ಹಾಕಿ ಬರಮಾಡಿಕೊಳ್ಳಲಾಯಿತು. ‘ಬಿಡುಗಡೆಗೊಂಡ ಅಪರಾಧಿಗಳು ಬ್ರಾಹ್ಮಣರು. ಅವರು ಅಪರಾಧ ನಡೆಸಲು ಸಾಧ್ಯವಿಲ್ಲ’ ಎಂದು ಬಿಜೆಪಿ ಶಾಸಕರೊಬ್ಬರು ಹೇಳಿಕೆ ನೀಡುತ್ತಾರೆ. ಇದಕ್ಕಿಂತ ಲಜ್ಜೆಗೇಡು ನಡವಳಿಕೆ ಇದೆಯೇ’ ಎಂದು ಪ್ರಶ್ನಿಸಿದರು.

'ಬೆಳಿಗ್ಗೆ ಮಸೀದಿಯಲ್ಲಿ ನಮಾಜ್‌ ಮಾಡಿ ಸಂಜೆ ವೇಳೆ ದೇವಸ್ಥಾನಗಳಲ್ಲಿ ಸಂಗೀತದ ಆಲಾಪನೆ ಮಾಡುತ್ತಿದ್ದ, ‘ಗಂಗೆಯೇ ನನ್ನ ತಾಯಿ’ ಎಂದು ಕರೆದ ಬಿಸ್ಮಿಲ್ಲಾ ಖಾನ್‌ ಅಂತವರ ದೇಶವಿದು. ಇಂದು ವಾರಾಣಸಿಯಲ್ಲೇನಾಗಿದೆ ಎಲ್ಲರಿಗೂ ತಿಳಿದಿದೆ. ಗಂಗೆಯಲ್ಲಿ ಸಾಲು ಸಾಲು ಹೆಣಗಳು ತೇಲಿದರೂ ಅದು ಸುದ್ದಿಯಾಗದ ಸನ್ನಿವೇಶವನ್ನು ಸೃಷ್ಟಿಸಲಾಗಿದೆ. ಕೋವಿಡ್‌ ನೆಪ ಹೇಳಿ ಮಾಧ್ಯಮಗಳನ್ನು ಸಂಸತ್ತಿನಿಂದಲೂ ದೂರ ಇಡಲಾಗಿದೆ. ಅದರ ವಿರುದ್ಧ ಧ್ವನಿ ಎತ್ತುವ ಸ್ಥಿತಿಯಲ್ಲೂ ಮಾಧ್ಯಮಗಳಿಲ್ಲ‘ ಎಂದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಅತಿಥಿಗಳ ತೆರದಲ್ಲಿ ಅಪರೂಪಕ್ಕೊಮ್ಮೊಮ್ಮೆ ಸಂಸತ್ತಿಗೇ ಬರುತ್ತಾರೆ. ಸಂಸತ್‌ ಕಲಾಪ ನಡೆಯುವುದು ಅವರಿಗೆ ಬೇಕಿಲ್ಲ. ವರ್ಷದಲ್ಲಿ 30ರಿಂದ 40 ದಿನಗಳ ಕಲಾಪವೂ ನಡೆಯುತ್ತಿಲ್ಲ‘ ಎಂದು ಬೇಸರ ವ್ಯಕ್ತಪಡಿಸಿದರು.

‘ಮಾಧ್ಯಮ ಎಂಬ ಮನಸ್ಸಿನ ಉದ್ದಿಮೆ ಮಿದುಳುಗಳನ್ನು ಪ್ರಭಾವಿಸುತ್ತದೆ. ಮಾಧ್ಯಮ ಬಿತ್ತುವ ಬಯಕೆಗಳೇ ನಮಗೇನು ಬೇಕು ಎಂಬುದನ್ನು ನಿರ್ಧರಿಸುತ್ತವೆ. ದ್ವೇಷ ಹರಡುವವರ ಸಿದ್ಧಾಂತವನ್ನು ಮಣಿಸಲು ಸಾಧ್ಯವಿರುವುದು ಮಾಧ್ಯಮಗಳಿಗೆ ಮಾತ್ರ. ದ್ವೇಷ ಹರಡುವಿಕೆಗೆ ಇತಿಶ್ರಿ ಹಾಡಲು ಜನರನ್ನು ಸಂಘಟಿಸದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ‘ ಎಂದು ಎಚ್ಚರಿಸಿದರು.

ನವದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ, ‘ಕೇವಲ ಮೂರು ಸಾವಿರ ಜನ ಮಾತನಾಡುವ ಸಂಸ್ಕೃತ ಭಾಷೆಯನ್ನು ರಾಷ್ಟ್ರಭಾಷೆಯನ್ನಾಗಿ ರೂಪಿಸುವ ಸಂಚು ನಡೆದಿದೆ. 2023ರ ಜನಗಣತಿಯಲ್ಲಿ ದೇಶದಲ್ಲಿ ಸಂಸ್ಕೃತ ತಿಳಿದವರ ಸಂಖ್ಯೆ 30 ಕೋಟಿಗಳಷ್ಟಾದರೂ ಇದೆ ಎಂದು ಬಿಂಬಿಸುವ ಪ್ರಯತ್ನ ನಡೆದಿದೆ. ತಾಯಿಯನ್ನು ತಾಯಿಯಲ್ಲ ಎಂದು ಯಾವತ್ತೂ ಹೇಳಬಾರದು. ಹಾಗೆಯೇ ಗಣತಿ ಸಂದರ್ಭದಲ್ಲಿ ಜನರು ತಮ್ಮ ನಿಜವಾದ ತಾಯಿ ನುಡಿಯನ್ನೇ ನಮೂದಿಸಬೇಕು’ ಎಂದರು.

‘ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1971ರ ಗಣತಿಯಲ್ಲಿ ‌58ಸಾವಿರದಷ್ಟಿದ್ದ ಕೊರಗ ಸಮುದಾಯದ ಸಂಖ್ಯೆ 2011ರ ವೇಳೆಗೆ 11 ಸಾವಿರಕ್ಕೆ ಕುಸಿದಿದೆ. ಒಂದು ಜನಸಮುದಾಯವೇ ನಾಶವಾಗುತ್ತಿದ್ದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ’ ಎಂದರು.

‘ಬಂದವರೆಲ್ಲರನ್ನು ಬರ ಸೆಳೆದು ತಮ್ಮವರನ್ನಾಗಿಸಿಕೊಳ್ಳುವ ಕಡಲ ತಡಿಯ ಸಂಸ್ಕೃತಿ ವಿಭಿನ್ನವಾದುದು. ಅದೇ ರೀತಿ ಕರ್ನಾಟಕವೂ ಎಲ್ಲ ಸಿದ್ಧಾಂತಗಳನ್ನೂ ಸ್ವೀಕರಿಸಿ ಎಲ್ಲರನ್ನು ಒಳಗೊಂಡು ಬೆಳೆದ ನಾಡು. ಈ ಸೌಹಾರ್ದ ಪರಂಪರೆಯನ್ನು ಉಳಿಸಬೇಕಿದೆ’ ಎಂದರು.

‘ಮಲ್ಪೆ ಬಂದರಿನಿಂದ ಅನೇಕ ದೇಶಗಳಿಗೆ ಕ್ರಿಸ್ತಪೂರ್ವ 4ನೇ ಶತಮಾನದಲ್ಲೇ ತೆಂಗಿನ ನಾರಿನ ಹಗ್ಗ ರಫ್ತಾಗುತ್ತಿತ್ತು. ಹಡಗಿನ ಹಾಯಿಗಳನ್ನು ಕಟ್ಟಲು ಈ ಗುಣಮಟ್ಟದ ಹಗ್ಗಕ್ಕೆ ಭಾರಿ ಬೇಡಿಕೆ ಇತ್ತು. ಈ ಹಗ್ಗದ ವ್ಯಾಪಾರಕ್ಕಾಗಿ ಬಂದ ಅನೇಕ ವಿದೇಶಿಗರು ಇಲ್ಲಿನ ಹೆಣ್ಣುಮಕ್ಕಳು ವರಿಸಿದ್ದಾರೆ. ಕೆಲವು ವಿದೇಶಿಗರು ಇಲ್ಲೇ ನೆಲೆ ನಿಂತು ಇಲ್ಲಿನವರೇ ಆಗಿಬಿಟ್ಟಿದ್ದಾರೆ. ಕ್ರಿಸ್ತ ಪೂರ್ವದಲ್ಲೇ ಗ್ರೀಕ್‌ ಯುವಕ ಇಲ್ಲಿನ ಯುವತಿಯನ್ನು ವರಿಸಿ ಅಥೆನ್ಸ್‌ಗೆ ಕರೆದೊಯ್ದ ದಾಖಲೆಗಳಿವೆ. ಗ್ರೀಕ್‌ ಭಾಷೆಯಲ್ಲೂ ಕನ್ನಡದ ಅಲ್, ಅಕ್ಕ ಮೊದಲಾದ ಪದಗಳು ಇರುವುದನ್ನು ಮಂಜೇಶ್ವರ ಗೋವಿಂದ ಪೈ ಅವರು ಸಂಶೋಧಿಸಿದ್ದಾರೆ’ ಎಂದರು.

‘ಕ್ರಿಸ್ತಪೂರ್ವ 3ನೇ ಶತಮಾನದಲ್ಲೇ ಕೊಪ್ಪಳದ ಗವಿಮಠ, ಮಸ್ಕಿ ಸೇರಿದಂತೆ ಬೌದ್ಧರ ಹಲವಾರು ಸ್ಥಳಗಳು ರಾಜ್ಯದಲ್ಲಿದ್ದವು. ಕರ್ನಾಟಕವು ಹೊರಗಿನಿಂದ ಬಂದ ಅದ್ವೈತ ಪಂಥದ ಶಂಕರಾಚಾರ್ಯರಿಗೂ ನೆಲೆ ಕಲ್ಪಿಸಿದೆ. ವಿಶಿಷ್ಟಾದ್ವೈತ ಪಂಥದ ರಾಮಾನುಜಾಚಾರ್ಯ ಅವರು ಅರಸಿಕೊಂಡಿದ್ದೂ ನಮ್ಮ ರಾಜ್ಯದ ಮೇಲುಕೋಟೆಯನ್ನು. ಬಾಸೆಲ್‌ ಮಿಷನ್‌ನವರನ್ನೂ ಇಲ್ಲಿನ ಜನ ನಮ್ಮವರೆಂದು ಸ್ವೀಕರಿಸಿದರು. ಇರಾನ್‌ ಆದಿಲ್‌ ಶಾಹಿಯೂ ಇಲ್ಲಿ ನೆಲೆಸಿದ. ಕ್ರಿಸ್ತ ಶಕ ಏಳನೇ ಶತಮಾನದಲ್ಲೇ ಇಲ್ಲಿ ಮುಸ್ಲಿಮರು ವ್ಯಾಪಕವಾಗಿ ನೆಲೆಸಿದ್ದರು. ಜಗತ್ತಿನ ಬಹುತೇಕ ಎಲ್ಲ ಭಾಷೆಗಳ ಪುಸ್ತಕಗಳೂ ಕನ್ನಡಕ್ಕೆ ಅನುವಾದಗೊಂಡಿವೆ. ಇಂತಹ ಸ್ಥಿತಿ ದೇಶದ ಬೇರೆ ಭಾಷೆಗಳಲ್ಲಿಲ್ಲ. ಕನ್ನಡಿಗರಲ್ಲಿ ಹೃದಯ ವೈಶಾಲ್ಯ ಇದ್ದುದರಿಂದಲೇ ಇದೆಲ್ಲ ಸಾಧ್ಯವಾಗಿದೆ. ಎಲ್ಲರನ್ನೂ ಒಳಗೊಳ್ಳುವ ಗುಣ ಕನ್ನಡಿಗರಲ್ಲಿ ಇದ್ದಷ್ಟು ಬೇರೆ ಭಾಷೆಗಳಲ್ಲಿ ಕಾಣಸಿಗದು’ ಎಂದರು.

‘1936ರಲ್ಲಿ ಜಿಲ್ಲೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೊದಲ ಶಾಖೆ ಆರಂಭವಾಯಿತು. ಆ ಬಳಿಕ ಸೌಹಾರ್ದದ ಪರಂಪರೆಗೆ ಧಕ್ಕೆ ಉಂಟಾಗಲು ಶುರುವಾಯಿತು. ಕರಾವಳಿಯಲ್ಲಿ ಒಂದೇ ವಾರದಲ್ಲಿ ಮೂರು ಭೀಕರ ಕೊಲೆಗಳನ್ನು ಇತ್ತೀಚೆಗೆ ಕಂಡೆ. ಚಿಕ್ಕಮಕ್ಕಳಲ್ಲೂ ದ್ವೇಷ ತುಂಬಲಾಗುತ್ತಿದೆ. ಇದರ ವಿರುದ್ಧ ಹೋರಾಟ ಸುಲಭವಲ್ಲ. ಜನರಲ್ಲಿ ಮತ್ತೆ ಸೌಹಾರ್ದದ ಹಂಬ‌ಲವನ್ನು ಹಬ್ಬಿಸಬೇಕಿದೆ‘ ಎಂದರು.

‘ರಾಜ್ಯ ಸರ್ಕಾರವು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ನೀಡಿದ ಜಾಹೀರಾತಿನಲ್ಲಿ ದೇಶದ ಮೊದಲ ಪ್ರಧಾನಿ ಜವಾಹರಲಾಲ್‌ ನೆಹರೂ ಅವರ ಭಾವಚಿತ್ರವನ್ನು ಉದ್ದೇಶಪೂರ್ವಕವಾಗಿ ಕೈಬಿಟ್ಟಿದ್ದು ನೀಚತನ. ಇತಿಹಾಸ ಮತ್ತು ವರ್ತಮಾನದ ಬಗ್ಗೆ ನಮಗೆ ಬದ್ಧತೆ ಇರಬೇಕು. ಇತಿಹಾಸದ ಬಗ್ಗೆ ಅಸಹನೆ ಹೊಂದಿರುವವರು ಸುಳ್ಳುಗಳ ಮೂಲಕ ಇತಿಹಾಸ ಕಟ್ಟಲು ಹೊರಟಿರುವುದು ವಿಪರ್ಯಾಸ‘ ಎಂದರು.

‘ಸ್ವಾತಂತ್ರ್ಯ ಹೋರಾಟದಲ್ಲಿ ತೊಡಗಿದ್ದ ಭಾರಿ ಸಂಖ್ಯೆಯ ಹೋರಾಟಗಾರರು ಅಂಡಮಾನ್‌ ಜೈಲಿನಲ್ಲಿ ಕಠಿಣ ಕಾರಾಗೃಹ ಶಿಕ್ಷೆ ಅನುಭವಿಸುತ್ತಿದ್ದಾಗ ಸಾವರ್ಕರ್‌ ಬ್ರಿಟಿಷರ ಬಳಿ ಕ್ಷಮಾಪನೆ ಕೋರಿ ಹೊರಬಂದಿದ್ದರು. ಅವರನ್ನು ವೀರ ಎಂದು ಕರೆಯಲು ಸಾಧ್ಯವೇ. ಈ ಬಿರುದನ್ನೂ ಅವರು ತಾವೇ ಇಟ್ಟುಕೊಂಡಿದ್ದರು’ ಎಂದರು.

‘ಬ್ರಿಟಿಷ್ ಸಾಮ್ರಾಜ್ಯಶಾಹಿ ವಿರುದ್ಧ ಗಟ್ಟಿ ಧ್ವನಿ ಎತ್ತಿದ್ದು ಸ್ಥಳೀಯ ಪತ್ರಿಕೆಗಳು. ಈಗಲೂ ಪ್ರಭುತ್ವದ ವಿರುದ್ಧ ಧ್ವನಿ ಎತ್ತಲು ಪರ್ಯಾಯ ಮಾಧ್ಯಮಗಳ ಅಗತ್ಯ ಇದೆ‘ ಎಂದರು.

ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಚಂದ್ರ ಪೂಜಾರಿ, ‘ಇಂದು ಒಕ್ಕೂಟ ವ್ಯವಸ್ಥೆಗೇ ಬೆದರಿಕೆ ಇದೆ. 2014ರ ಬಳಿಕ ಸ್ವಾತಂತ್ರ್ಯಕ್ಕೆ ಹೊಸ ಅರ್ಥ ನೀಡಲಾಗಿದೆ. ಹಿಂದೆ ದೇಶ ಎಂದರೆ ಜನ ಎಂದು ಭಾವಿಸಿದ್ದೆವು. ಈಗ ದೇಶ ಎಂದರೆ ಗಡಿ, ಧ್ವಜ, ಹಿಂದುತ್ವ ಎನ್ನಲಾಗುತ್ತಿದೆ. ಚಾರಿತ್ರಿಕವಾಗಿ ಅನ್ಯಾಯಕ್ಕೆ ಒಳಗಾದವರಿಗೆ ಸಮಾನತೆ ಕಲ್ಪಿಸುವುದು ಸಮಾಜಿಕ ನ್ಯಾಯ ಎಂದು ಭಾವಿಸಿದ್ದೆವು. ಈಗ ಬಲಾಢ್ಯ ಸಮುದಾಯಗಳಲ್ಲಿ ಹಿಂದುಳಿದವರನ್ನು ಹುಡುಕಿ ಹುಡುಕಿ ಸವಲತ್ತು ನೀಡುವುದೇ ಸಾಮಾಜಿಕ ನ್ಯಾಯ ಎಂಬಂತಾಗಿದೆ’ ಎಂದರು.

ಸಾಹಿತಿ ಬಿ.ಎಂ.ರೋಹಿಣಿ, ‘ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಮಹಿಳೆ ಸಂಭ್ರಮಿಸುವ ಅನೇಕ ಬೆಳವಣಿಗೆಗಳಾಗಿವೆ ನಿಜ. ಆದರೆ, ಈಗಲೂ ಮಹಿಳೆಯರ ಸಂಕಷ್ಟಗಳು ಹಾಗೆಯೇ ಉಳಿದಿವೆ. ಸಂಸತ್ತಿನಲ್ಲಿ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಬೇಕೆಂಬ ಕೂಗಿಗೆ ಈಗ ರಜತವರ್ಷ. ಇನ್ನು 100 ವರ್ಷ ಕಳೆದರೂ ಈ ಬೇಡಿಕೆ ಈಡೇರುತ್ತದೆ ಎಂಬ ವಿಶ್ವಾಸ ಇಲ್ಲ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಜನಶಕ್ತಿ ಸಂಪಾದಕ ಮಂಡಳಿ ಸದಸ್ಯ ಕೆ.ಯಾದವ ಶೆಟ್ಟಿ, ‘ಸತ್ಯ ಹೇಳುವವರು ಇಲ್ಲದಿದ್ದಾಗ ಸಮಾಜದಲ್ಲಿ ಸುಳ್ಳುಗಳೇ ರಾರಾಜಿಸುತ್ತವೆ. ಸುಳ್ಳಿನ ಸರಮಾಲೆಯನ್ನು ಸರಿಸಬೇಕಾದರೆ ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸುವ ಕೆಲಸಗಳಾಗಬೇಕು’ ಎಂದರು.

ಜನಶಕ್ತಿ ಪತ್ರಿಕೆಯ ‘ಅಮೃತ ಕರ್ನಾಟಕ’ ಸಂಚಿಕೆಯನ್ನು ಜಾನ್‌ ಬ್ರಿಟ್ಟಾಸ್‌ ಬಿಡುಗಡೆ ಮಾಡಿದರು.

ಪತ್ರಿಕೆಯ ಸಂಪಾದಕ ಡಾ.ಕೆ.ಪ್ರಕಾಶ್‌, ಉತ್ಸವದ ಸ್ವಾಗತ ಸಮಿತಿಯ ಎನ್‌.ಕೆ.ವಸಂತರಾಜ್‌, ಪ್ರಕಾಶಕ ಯು.ಬಸವರಾಜು, ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಡಾ.ಎಸ್‌.ವೈ.ಗುರುಶಾಂತ್‌, ಸ್ವಾಗತ ಸಮಿತಿಯ ಕಾರ್ಯದರ್ಶಿ ಸುನೀಲ್‌ ಕುಮಾರ್‌ ಬಜಾಲ್, ಮನೋಜ್‌ ವಾಮಂಜೂರು ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.