ADVERTISEMENT

ಭ್ರಷ್ಟಾಚಾರ ವಿರುದ್ಧ ಹೋರಾಟ ನಿಲ್ಲುವುದಿಲ್ಲ: ಡಿ. ಕೆಂಪಣ್ಣ

​ಪ್ರಜಾವಾಣಿ ವಾರ್ತೆ
Published 16 ಮೇ 2023, 21:12 IST
Last Updated 16 ಮೇ 2023, 21:12 IST
ಡಿ.ಕೆಂಪಣ್ಣ
ಡಿ.ಕೆಂಪಣ್ಣ   

ಬೆಂಗಳೂರು: ‘ಅತಿಯಾದ ಭ್ರಷ್ಟಾಚಾರದಿಂದ ರಾಜ್ಯದಲ್ಲಿ ಬಿಜೆಪಿ ಅಧಿಕಾರದಿಂದ ಕೆಳಕ್ಕೆ ಇಳಿದಿದೆ. ಗುತ್ತಿಗೆದಾರರ ಸಂಘವು ಹೊಸ ಸರ್ಕಾರದ ಅವಧಿಯಲ್ಲೂ ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸಲಿದೆ’ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ತಿಳಿಸಿದ್ದಾರೆ.

ಚುನಾವಣಾ ಫಲಿತಾಂಶದ ಕುರಿತು ಹೇಳಿಕೆ ಮೂಲಕ ಪ್ರತಿಕ್ರಿಯಿಸಿರುವ ಅವರು, ‘ನಾವು ಬಿಜೆಪಿ ಸರ್ಕಾರದ ವಿರುದ್ಧ ಸುಖಾಸುಮ್ಮನೆ ಶೇಕಡ 40ರಷ್ಟು ಕಮಿಷನ್‌ ಆರೋಪ ಮಾಡಿರಲಿಲ್ಲ. ಗುತ್ತಿಗೆದಾರರ ಜತೆ ಚರ್ಚಿಸಿ, ಅವರ ಸಂಕಷ್ಟ ಅರಿತ ಬಳಿಕವೇ ದೂರು ನೀಡಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿದ್ದೆವು. ಅವರು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ, ಭ್ರಷ್ಟಾಚಾರ ನಿಯಂತ್ರಿಸಿದ್ದರೆ ಈ ಪರಿಯ ಆಡಳಿತ ವಿರೋಧಿ ಅಲೆಯನ್ನು ಅನುಭವಿಸುವ ಪರಿಸ್ಥಿತಿ ಎದುರಾಗುತ್ತಿರಲಿಲ್ಲ’ ಎಂದು ಹೇಳಿದ್ದಾರೆ.

‘ರಾಜ್ಯದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿಗಳು ಕಳಪೆ ಗುಣಮಟ್ಟದಿಂದ ಕೂಡಿರಲು ಭ್ರಷ್ಟಾಚಾರವೇ ಕಾರಣ. ನಮ್ಮ ಹೋರಾಟಕ್ಕೆ ರಾಜ್ಯದಾದ್ಯಂತ ಬೆಂಬಲ ವ್ಯಕ್ತವಾದರೂ ಹಿಂದಿನ ಸರ್ಕಾರದ ಸಚಿವರು ಅಡ್ಡಿಪಡಿಸಿದ್ದರು. ಸಚಿವರೊಬ್ಬರು ನಮ್ಮನ್ನು ಜೈಲಿಗೆ ಕಳಿಸುವುದಕ್ಕೂ ಪ್ರಯತ್ನಿಸಿದ್ದರು. ಆದರೂ ನಾವು ಎದೆಗುಂದದೆ ಹೋರಾಟ ಮಾಡಿದ್ದೆವು’ ಎಂದಿದ್ದಾರೆ.

ADVERTISEMENT

‘ಒಂದು ಪಕ್ಷ ಅಧಿಕಾರ ಕಳೆದುಕೊಂಡ ಮಾತ್ರಕ್ಕೆ ಭ್ರಷ್ಟಾಚಾರ ನಿಂತಿದೆ ಎಂದು ನಾವು ಭಾವಿಸುವುದಿಲ್ಲ. ಭ್ರಷ್ಟಾಚಾರ ಮುಂದುವರಿದರೆ ಹೊಸ ಸರ್ಕಾರದ ವಿರುದ್ಧವೂ ನಮ್ಮ ಹೋರಾಟ ಮುಂದುವರಿಯುತ್ತದೆ. ವ್ಯವಸ್ಥೆ ಸರಿಹೋಗುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.