ADVERTISEMENT

ವಿಮಾನ ಏರಿ ತವರು ಸೇರಿದ 175 ಕಾರ್ಮಿಕರು

ದೇಣಿಗೆ ಸಂಗ್ರಹಿಸಿ ನೆರವಿತ್ತ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 29 ಮೇ 2020, 19:25 IST
Last Updated 29 ಮೇ 2020, 19:25 IST

ಬೆಂಗಳೂರು: ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸಿ, 175ಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ವಿಮಾನದ ಟಿಕೆಟ್‌ ವ್ಯವಸ್ಥೆ ಮಾಡುವ ಮೂಲಕ ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ (ಎನ್‌ಎಲ್‌ಎಸ್‌) ವಿದ್ಯಾರ್ಥಿಗಳು ಮಾನವೀಯತೆ ಮೆರೆದಿದ್ದಾರೆ.

ಮುಂಬೈನಿಂದ ತವರು ರಾಜ್ಯ ಜಾರ್ಖಂಡ್‌ನ ರಾಂಚಿಗೆ ತೆರಳಲು ವಲಸೆ ಕಾರ್ಮಿಕರಿಗೆ ಎನ್‌ಎಲ್‌ಎಸ್‌ನ 80ಕ್ಕೂ ಹೆಚ್ಚು ವಿದ್ಯಾರ್ಥಿಗಳು ನೆರವು ನೀಡಿದ್ದಾರೆ. ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್‌ ವಿಮಾನ ನಿಲ್ದಾಣದಿಂದ ಗುರುವಾರ ಬೆಳಿಗ್ಗೆ 6ಕ್ಕೆ ಏರ್‌ಏಷ್ಯಾ ವಿಮಾನ ಏರಿದ ಈ ಕಾರ್ಮಿಕರು, ಬೆಳಿಗ್ಗೆ 8.25ಕ್ಕೆ ರಾಂಚಿಯ ಬಿರ್ಸಾ ಮುಂಡಾ ವಿಮಾನ ನಿಲ್ದಾಣದಲ್ಲಿ ಇಳಿದಿದ್ದಾರೆ.

ಮೊದಲ ಬಾರಿಗೆ ವಿಮಾನವೇರಿದ್ದ ಕಾರ್ಮಿಕರಿಗೆ, ರಾಂಚಿಯಲ್ಲಿ ಇಳಿಯುತ್ತಿದ್ದಂತೆ ಖಾಸಗಿ ಬಸ್‌ಗಳ ವ್ಯವಸ್ಥೆಯನ್ನೂ ವಿದ್ಯಾರ್ಥಿಗಳು ಮಾಡಿದ್ದರು. ಎಲ್ಲರನ್ನೂ ಕ್ವಾರಂಟೈನ್‌ ಕೇಂದ್ರಗಳಲ್ಲಿ ಇಡಲಾಗಿದೆ.

ADVERTISEMENT

‘ಕಟ್ಟಡ ಕಾರ್ಮಿಕರು, ಬಡಗಿಗಳು, ಟ್ಯಾಕ್ಸಿ ಚಾಲಕರು ಹಾಗೂ ಮನೆಗೆಲಸ ಮಾಡುವವರು ಈ ತಂಡದಲ್ಲಿದ್ದರು. ದುಡ್ಡಿಲ್ಲದ ಕಾರಣ ತವರು ರಾಜ್ಯಕ್ಕೆ ಮರಳಲೂ ಪರದಾಡುತ್ತಿದ್ದರು. ಅವರ ಕಷ್ಟ ನೋಡಲಾಗದೆ ಟಿಕೆಟ್‌ ವ್ಯವಸ್ಥೆ ಮಾಡಿದೆವು’ ಎಂದು ಟಿಕೆಟ್‌ ವ್ಯವಸ್ಥೆ ಮಾಡಿದವರಲ್ಲಿ ಒಬ್ಬರಾದ ಶೈಲ್‌ ತ್ರೆಹಾನ್‌ ಹೇಳಿದರು.

‘ವಲಸೆ ಕಾರ್ಮಿಕರು ಪಡುತ್ತಿರುವ ಕಷ್ಟ ನಿತ್ಯ ನೋಡುತ್ತಿದ್ದೇವೆ. ಈ ಕಾರ್ಮಿಕರ ಸಂಕಷ್ಟವನ್ನೂ ಮಾಧ್ಯಮಗಳಲ್ಲಿ ನೋಡಿದೆವು. ವಿದ್ಯಾರ್ಥಿಗಳಾದ ನಾವು ಈ ಸಂದರ್ಭದಲ್ಲಿ ಸಮಾಜಕ್ಕೆ ಏನಾದರೂ ನೆರವು ನೀಡಬೇಕು ಎಂದು ನಿರ್ಧರಿಸಿದ್ದೆವು. ಸಾರ್ವಜನಿಕರಿಂದ ದೇಣಿಗೆ (ಕ್ರೌಡ್‌ ಫಂಡಿಂಗ್‌) ಸಂಗ್ರಹಿಸಿ ಟಿಕೆಟ್‌ ವ್ಯವಸ್ಥೆ ಮಾಡಿದೆವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.