ADVERTISEMENT

ಗೊಲ್ಲರ ನಿಗಮ ಸ್ಥಾಪನೆ: ಸಿ.ಎಂ ಭರವಸೆ

ಯಾದವ ಸಮುದಾಯ ಭವನಕ್ಕೆ ₹3 ಕೋಟಿ ಅನುದಾನ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2019, 19:55 IST
Last Updated 10 ನವೆಂಬರ್ 2019, 19:55 IST
ಕಾರ್ಯಕ್ರಮದಲ್ಲಿ (ಎಡದಿಂದ) ಕೇಂದ್ರ ಸಚಿವ ನಿತ್ಯಾನಂದ ರೈ, ಉದಯ್‌ ಪ್ರತಾಪ್‌ ಸಿಂಗ್‌, ಬಿ.ಎಸ್‌.ಯಡಿಯೂರಪ್ಪ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ (ಎಡದಿಂದ) ಕೇಂದ್ರ ಸಚಿವ ನಿತ್ಯಾನಂದ ರೈ, ಉದಯ್‌ ಪ್ರತಾಪ್‌ ಸಿಂಗ್‌, ಬಿ.ಎಸ್‌.ಯಡಿಯೂರಪ್ಪ, ಯಾದವ ಗುರುಪೀಠದ ಶ್ರೀಕೃಷ್ಣ ಯಾದವಾನಂದ ಸ್ವಾಮೀಜಿ ಭಾಗವಹಿಸಿದ್ದರು.   

ಬೆಂಗಳೂರು: ‘ಯಾದವ ಸಮುದಾಯದ ಅಭಿವೃದ್ಧಿಗಾಗಿ ಕರ್ನಾಟಕ ಗೊಲ್ಲರ ಅಭಿವೃದ್ಧಿ ನಿಗಮ ಸ್ಥಾಪಿಸಲು ಮುಂದಿನ ಬಜೆಟ್‌ನಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭರವಸೆ ನೀಡಿದರು.

ಅಖಿಲ ಭಾರತ ಯಾದವ ಮಹಾಸಭಾ ಹಾಗೂಕರ್ನಾಟಕ ರಾಜ್ಯ ಯಾದವ ಸಂಘದ ವತಿಯಿಂದ ಭಾನುವಾರ ಆಯೋಜಿಸಿದ್ದ ರಾಷ್ಟ್ರೀಯ ಕಾರ್ಯಕಾರಿ ಪರಿಷತ್ತಿನ ಸಭೆ ಹಾಗೂ ಜಿಲ್ಲಾ, ತಾಲ್ಲೂಕು‌ ಪದಾಧಿಕಾರಿಗಳ ಸಮಾವೇಶದಲ್ಲಿ‌ ಅವರು ಮಾತನಾಡಿದರು.

‘ನಗರದ ಬಾಣಸವಾಡಿ ಬಳಿ ನಿರ್ಮಾಣವಾಗುತ್ತಿರುವ ಯಾದವ ಸಮುದಾಯ ಭವನದ ಕಾಮಗಾರಿ ಪೂರ್ಣಗೊಳಿಸಲು ₹3 ಕೋಟಿ ಅನುದಾನ ಹಾಗೂ ರಾಜ್ಯದಲ್ಲಿರುವ ಗೊಲ್ಲರಹಟ್ಟಿಗಳ ಅಭಿವೃದ್ಧಿಗಾಗಿ ವಿಶೇಷ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದರು.

ADVERTISEMENT

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ,‘ಯಾದವ ಕುಲದ ಶ್ರೀಕೃಷ್ಣ ಹಿಂದೂ ಧರ್ಮದ ಪ್ರತೀಕ. ಯಾರಿಗೂ ಒಲಿಯದ ಕೃಷ್ಣ, ಕನಕದಾಸರ ಭಕ್ತಿಗೆ ಮೆಚ್ಚಿ ಒಲಿಯುತ್ತಾನೆ. ಕೃಷ್ಣ, ಕನಕ ಅಂದರೆ ಗೊಲ್ಲ, ಕುರುಬ. ಇಬ್ಬರೂ ಒಂದೆಡೆ ಸೇರಿರುವಾಗ ಬ್ರಾಹ್ಮಣರು ಬಂದು ಪೂಜೆ ಮಾಡುತ್ತಾರೆ’ ಎಂದರು.

ಸಂಘದ ರಾಜ್ಯ ಘಟಕದ ಅಧ್ಯಕ್ಷ ಡಿ.ಟಿ.ಶ್ರೀನಿವಾಸ್‌ ಯಾದವ್‌, ‘ರಾಜ್ಯದಲ್ಲಿ ಸಮುದಾಯವು 50 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದ್ದು, 25ಕ್ಕೂ ಹೆಚ್ಚು ಉಪಜಾತಿಗಳಿವೆ. ಪ್ರಸ್ತುತ ಪ್ರವರ್ಗ–1ರಲ್ಲಿ ಇರುವ ಗೊಲ್ಲ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ (ಎಸ್‌ಟಿ) ಸೇರಿಸಬೇಕು’ ಎಂದು ಒತ್ತಾಯಿಸಿದರು.

ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್‌,ಗುಜರಾತ್ ರಾಜ್ಯದ ಮಹಿಳಾ ಮತ್ತು ಮಕ್ಕಳ‌ ಕ್ಷೇಮಾಭಿವೃದ್ಧಿ ಸಚಿವ ವಾಸನ್ ಭಾಯ್ ಅಹೀರ್, ಉತ್ತರಪ್ರದೇಶ ಸಂಸದ ಶ್ಯಾಮ್‌ ಸಿಂಗ್ ಯಾದವ್‌, ಮಧ್ಯಪ್ರದೇಶ ಸಚಿವ ಹರೀಶ್ ಯಾದವ್‌ ಭಾಗವಹಿಸಿದ್ದರು.

ಬೇಡಿಕೆಗಳು
*ಸಮುದಾಯದ ಮಹಿಳೆಗೆ ಸಚಿವ ಸಂಪುಟದಲ್ಲಿ ಸ್ಥಾನ
* ನಿಗಮ ಮಂಡಳಿಗಳಲ್ಲಿ ಸ್ಥಾನಮಾನ ನೀಡುವುದು
* ವಿದ್ಯಾರ್ಥಿಗಳಿಗೆ ಆದಾಯ ಮಿತಿ ತೆರವುಗೊಳಿಸುವುದು
* ಗೊಲ್ಲ ಜನಾಂಗದ ಉಪಜಾತಿಗಳನ್ನು ಎಸ್‌ಟಿಗೆ ಸೇರಿಸುವುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.