ADVERTISEMENT

ಯೋಗೀಶ್‌ ಗೌಡರ್‌ ಕೊಲೆ ಪ್ರಕರಣ: ಏ.15ರಿಂದ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2025, 15:40 IST
Last Updated 10 ಏಪ್ರಿಲ್ 2025, 15:40 IST
   

ಬೆಂಗಳೂರು: ಧಾರವಾಡ ಜಿಲ್ಲಾ ಪಂಚಾಯಿತಿಯ ಹೆಬ್ಬಳ್ಳಿ ಕ್ಷೇತ್ರದ ಬಿಜೆಪಿ ಸದಸ್ಯರಾಗಿದ್ದ ಯೋಗೀಶ್‌ಗೌಡ ಗೌಡರ್ ಕೊಲೆ ಪ್ರಕರಣದ ವಿಚಾರಣೆಯನ್ನು ಜನಪ್ರತಿನಿಧಿಗಳ ವಿಶೇಷ ಸೆಷನ್ಸ್‌ ನ್ಯಾಯಾಲಯ ಇದೇ 15ರಿಂದ ಮುಂದುವರಿಸಲಿದೆ.

ಪ್ರಕರಣದ ಮೊದಲ ಆರೋಪಿ ಬಸವರಾಜ ಶಿವಪ್ಪ ಮುತ್ತಗಿಯನ್ನು, ಮೂರನೇ ಬಾರಿಗೆ ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ತೀರ್ಮಾನಿಸಿದ್ದನ್ನು ಪ್ರಕರಣದ ಆರೋಪಿ ವಿನಯ ಕುಲಕರ್ಣಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಈ ಕುರಿತಾದ ಎಲ್ಲ ರಿಟ್‌ ಅರ್ಜಿಗಳನ್ನು ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಇತ್ತೀಚೆಗಷ್ಟೇ ವಜಾಗೊಳಿಸಿತ್ತು. ಅಂತೆಯೇ, ನಾಲ್ಕು ವಾರಗಳಲ್ಲಿ ವಿಚಾರಣೆ ಮುಕ್ತಾಯಗೊಳಿಸುವಂತೆ ವಿಶೇಷ ನ್ಯಾಯಾಲಯಕ್ಕೆ ಆದೇಶಿಸಿ‌ತ್ತು.

ಹೈಕೋರ್ಟ್‌ನ ಈ ಆದೇಶವನ್ನು ಪ್ರಶ್ನಿಸಿ ಆರೋಪಿಗಳಾದ ಚಂದ್ರಶೇಖರ ಇಂಡಿ, ದಿನೇಶ್‌ ಮತ್ತು ಅಶ್ವತ್ಥ್ ಸುಪ್ರೀಂ ಕೋರ್ಟ್‌ ಕದತಟ್ಟಿದ್ದು, ಈ ವಿಶೇಷ ಮೇಲ್ಮನವಿ ಸುಪ್ರೀಂ ಕೋರ್ಟ್‌ನಲ್ಲಿ 15ರಂದು ವಿಚಾರಣೆಗೆ ನಿಗದಿಯಾಗಿದೆ. ಇದರ ಬೆನ್ನಲ್ಲೇ, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್‌ ಪ್ರಕರಣಗಳ ವಿಚಾರಣೆಯ ವಿಶೇಷ ಸೆಷನ್ಸ್‌ ನ್ಯಾಯಾಲಯ’ದ ನ್ಯಾಯಾಧೀಶ ಸಂತೋಷ ಗಜಾನನ ಭಟ್‌; ಪ್ರಕರಣದ ವಿಚಾರಣೆ ಈವರೆಗೂ ಎಲ್ಲಿಗೆ ಸ್ಥಗಿತಗೊಂಡಿತ್ತೋ ಅಲ್ಲಿಂದ ಮುಂದುವರಿಸುವುದಾಗಿ ಇದೇ 9ರಂದು ಪ್ರಕಟಿಸಿದ್ದಾರೆ. ಅಂತೆಯೇ, ಪ್ರಕರಣದ 8 ಜನ ಪ್ರತ್ಯಕ್ಷ ಸಾಕ್ಷಿಗಳಿಗೆ ಸಮನ್ಸ್ ಜಾರಿಗೊಳಿಸಿ ಆದೇಶಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.