ADVERTISEMENT

ಕಿರಿಯ ವಕೀಲರಿಗೆ ಉತ್ತೇಜನ ಅವಶ್ಯ: ನ್ಯಾಯಾಧೀಶ ಅರವಿಂದ ಐತಾಳ

ನ್ಯೂ ಜೆರ್ಸಿ ಉನ್ನತ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಐತಾಳ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2023, 16:25 IST
Last Updated 10 ಅಕ್ಟೋಬರ್ 2023, 16:25 IST
<div class="paragraphs"><p>ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಅರವಿಂದ ಐತಾಳ (ಮಧ್ಯದಲ್ಲಿ ಪೇಟ ಧರಿಸಿದವರು) ಅವರನ್ನು ಬೆಂಗಳೂರು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.</p></div>

ಕಾರ್ಯಕ್ರಮದಲ್ಲಿ ನ್ಯಾಯಾಧೀಶ ಅರವಿಂದ ಐತಾಳ (ಮಧ್ಯದಲ್ಲಿ ಪೇಟ ಧರಿಸಿದವರು) ಅವರನ್ನು ಬೆಂಗಳೂರು ವಕೀಲರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

   

ಬೆಂಗಳೂರು: ‘ಹಿರಿಯ ವಕೀಲರು ಕಿರಿಯ ವಕೀಲರನ್ನು ಉತ್ತೇಜಿಸಬೇಕು ಮತ್ತು ಅವರಿಗೆ ಆಗಾಗ್ಗೆ ತಮ್ಮ ಅನುಭವಗಳ ಪ್ರಬುದ್ಧತೆಯನ್ನು ಧಾರೆಯೆರೆದು ಮುಖ್ಯವಾಹಿನಿಯಲ್ಲಿ ಸಶಕ್ತರಾಗುವಂತಹ ಅವಕಾಶಗಳನ್ನು ಕಲ್ಪಿಸಬೇಕು‘ ಎಂದು ನ್ಯೂ ಜೆರ್ಸಿ ಉನ್ನತ ನ್ಯಾಯಾಲಯದ ನ್ಯಾಯಾಧೀಶ ಅರವಿಂದ ಐತಾಳ ಅಭಿಪ್ರಾಯಪಟ್ಟರು.

‘ಬೆಂಗಳೂರು ವಕೀಲರ ಸಂಘ‘ದ ವತಿಯಿಂದ ಹೈಕೋರ್ಟ್‌ನ ವಕೀಲರ ಸಭಾಂಗಣ ಮತ್ತು ಸಿಟಿ ಸಿವಿಲ್‌ ಕೋರ್ಟ್‌ನ ವಕೀಲರ ಭವನದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಎರಡು ಪ್ರತ್ಯೇಕ ಕಾರ್ಯಕ್ರಮಗಳಲ್ಲಿ, ‘ಕಾನೂನಿನಲ್ಲಿ ವೃತ್ತಿ ನೈಪುಣ್ಯ ವೃದ್ಧಿ ಮತ್ತು ವಿಚಾರಣಾ ನ್ಯಾಯಾಲಯದಲ್ಲಿ ವಕೀಲಿಕೆ‘ ಕುರಿತಂತೆ ಕ್ಲುಪ್ತ ಉಪನ್ಯಾಸ ನೀಡಿದರು.

ADVERTISEMENT

ಅಮೆರಿಕದ ನ್ಯಾಯಾಂಗ ವ್ಯವಸ್ಥೆಯ ಕುರಿತಂತೆ ಪ್ರಸ್ತಾಪಿಸಿದ ಅವರು, ‘ಅಮೆರಿಕದ ಸೇನಾ ಅಧಿಕಾರಿಗಳು ಮತ್ತು ನ್ಯಾಯಾಂಗ ಅಧಿಕಾರಿಗಳು ಅಂತರರಾಷ್ಟ್ರೀಯ, ರಾಷ್ಟ್ರೀಯ ಮತ್ತು ಸ್ಥಳೀಯ ಕಾನೂನುಗಳ ಅರಿವನ್ನು ಹೊಂದಿರಬೇಕಾಗುತ್ತದೆ. ಅಂತೆಯೇ ಅವುಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕಾಗುತ್ತದೆ. ಆದರೆ, ಎರಡೂ ಅಂಗಗಳ ಕಾರ್ಯವೈಖರಿ ತುಂಬಾ ಭಿನ್ನವಾಗಿರುತ್ತದೆ‘ ಎಂದರು.

ಮುಖ್ಯ ಅತಿಥಿಯಾಗಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಪಿ.ಎಸ್‌. ದಿನೇಶ್‌ ಕುಮಾರ್‌ ಮಾತನಾಡಿ, ‘ಇಂದಿನ ದಿನಗಳಲ್ಲಿ ಯುವ ವಕೀಲರು ಎದುರಾಳಿ ವಕೀಲರ ಜೊತೆ ಸೆಣಸಾಡಲು ದಿನದ 24 ಗಂಟೆಗಳಲ್ಲೂ ಕಾರ್ಯತತ್ಪರ ಆಗಿರಬೇಕಾದಂತಹ ಸನ್ನಿವೇಶ ಇದೆ‘ ಎಂದರು. ಅಧ್ಯಕ್ಷ ವಿವೇಕ ಸುಬ್ಬಾರೆಡ್ಡಿ ಮಾತನಾಡಿ, ಅರವಿಂದ ಐತಾಳರ ಸಾಧನೆಯ ಬಗ್ಗೆ ಪ್ರಶಂಸಿಸಿದರು.

ಹೈಕೋರ್ಟ್‌ ಸಭಾಂಗಣದಲ್ಲಿ ಹಿರಿ ಕಿರಿಯ ವಕೀಲರು ಮತ್ತು ಸಿಟಿ ಸಿವಿಲ್‌ ಕೋರ್ಟ್‌ನಲ್ಲಿ ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಮತ್ತು ಸೆಷನ್ಸ್‌ ಕೋರ್ಟ್‌ಗಳ ಪ್ರಧಾನ ನ್ಯಾಯಾಧೀಶ ಮುರಳೀಧರ ಪೈ, ನ್ಯಾಯಾಧೀಶ ರಘುನಾಥ್‌ ಹಾಗೂ ವಕೀಲ ವೃಂದದವರು ಇದ್ದರು.

ಪರಿಚಯ: ಅರವಿಂದ ಐತಾಳರು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವರು. ಇವರ ತಂದೆ ನಾಗಪ್ಪಯ್ಯ ಐತಾಳರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐಐಎಸ್‌ಸಿ) ಸೇವೆ ಸಲ್ಲಿಸಿದವರು. ಕನ್ನಡದಲ್ಲಿ ಅನೇಕ ನಾಟಕಗಳನ್ನು ರಚಿಸಿದ್ದಾರೆ. ಅರವಿಂದ ಐತಾಳರು 1969ರಲ್ಲಿ ತಮ್ಮ 5 ನೇ ವಯಸ್ಸಿನಲ್ಲಿ ಅಮೆರಿಕಕ್ಕೆ ತೆರಳಿದರು. ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿಪೂರ್ವ ವಿದ್ಯಾಭ್ಯಾಸ ಪೂರೈಸಿದ ಅವರು ವಾಯವ್ಯ ವಿಶ್ವವಿದ್ಯಾಲಯದಿಂದ ಪದವಿ ಮತ್ತು ರುತ್ಗರ್ಸ್‌ ವಿಶ್ವವಿದ್ಯಾಲಯದಲ್ಲಿ ಸ್ಕೂಲ್ ಆಫ್ ಲಾ ದಿಂದ ಕಾನೂನು ಪದವಿ ಪಡೆದರು. ಅಮೆರಿಕ ಸೇನೆಯಲ್ಲಿ ಅಧಿಕಾರಿಯಾಗಿ ನೇಮಕಗೊಂಡರು. ನಂತರ ವಿವಿಧೆಡೆ ಕ್ರಿಮಿನಲ್‌ ಪ್ರಾಸಿಕ್ಯೂಟರ್‌ ಆಗಿ ಸೇವೆ ಸಲ್ಲಿಸಿ 2022ರ ಮಾರ್ಚ್‌ನಲ್ಲಿ ನ್ಯೂಜೆರ್ಸಿಯ ಉನ್ನತ ಕೋರ್ಟ್‌ಗೆ ನ್ಯಾಯಾಧೀಶರಾಗಿ ನೇಮಕಗೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.