ADVERTISEMENT

ಝೆರೋಧಾ ಸ್ಥಾಪಕರಿಗೆ ₹8 ಕೋಟಿ ತೆರಿಗೆ ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 19:27 IST
Last Updated 13 ಜನವರಿ 2026, 19:27 IST
<div class="paragraphs"><p>ಝೆರೋಧಾ</p></div>

ಝೆರೋಧಾ

   

ಬೆಂಗಳೂರು: 'ದೇಶದ ಪ್ರಮುಖ ಆನ್‌ಲೈನ್‌ ಹೂಡಿಕೆಯ ವೇದಿಕೆ ಎನಿಸಿರುವ ಝೆರೋಧಾದ ಸ್ಥಾಪಕ ಹೂಡಿಕೆದಾರ, ವಿಜಯ್ ಮಾರಿಯಪ್ಪನ್‌ ಆಸ್ಟಿನ್‌ ಪ್ರಕಾಶ್‌ ಅವರು ಭಾರತದ ಶಾಶ್ವತ ನಿವಾಸಿ ಅಲ್ಲದಿರುವುದರಿಂದ, ಡಿಟಿಎಎ (ದುಪ್ಪಟ್ಟು ತೆರಿಗೆ ತಪ್ಪಿಸುವ ಒಪ್ಪಂದ) ಅಡಿಯಲ್ಲಿ ತೆರಿಗೆ ವಿನಾಯಿತಿಗೆ ಅರ್ಹರು’ ಎಂದು ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿ (ಐಟಿಎಟಿ) ಅಭಿಪ್ರಾಯಪಟ್ಟಿದೆ.

ಈ ಕುರಿತಂತೆ ಆಸ್ಟಿನ್‌ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ವಿಶಾಖಪಟ್ಟಣಂನಲ್ಲಿರುವ ನ್ಯಾಯಮಂಡಳಿಯ ನ್ಯಾಯಿಕ ಸದಸ್ಯ ರವೀಶ್ ಸೂದ್‌ ಮತ್ತು ಲೆಕ್ಕಸದಸ್ಯ ಎಸ್‌.ಬಾಲಕೃಷ್ಣನ್‌ ಅವರಿದ್ದ ವಿಭಾಗೀಯ ಪೀಠವು, ಆಸ್ಟಿನ್ ಅವರು ಪಾವತಿಸಬೇಕಿದ್ದ ₹8.28 ಕೋಟಿ ಮೊತ್ತಕ್ಕೆ ವಿನಾಯಿತಿ ನೀಡಿ ಇತ್ತೀಚೆಗೆ ಆದೇಶಿಸಿದೆ.

ADVERTISEMENT

‘ಆಸ್ಟಿನ್ ಭಾರತದಲ್ಲಿ ಶಾಶ್ವತವಾಗಿ ನೆಲಸಿಲ್ಲ (ಸಿಂಗಪುರ ನಿವಾಸಿ) ಮತ್ತು ಅವರು ಕಂಪನಿಯ ಸಲಹೆಗಾರರಾಗಿ ಆದಾಯ ಪಡೆದಿದ್ದಾರೆ ಎಂಬ ಕಾರಣದಿಂದ ಡಿಟಿಎಎ ಅಡಿಯಲ್ಲಿ ವಿನಾಯಿತಿಗೆ ಅರ್ಹರು. ಡಿಟಿಎಎಗೆ ಸಂಬಂಧಿಸಿದಂತೆ ಸಂವಿಧಾನದ 14ನೇ ವಿಧಿಯು ವೃತ್ತಿಪರ ಸೇವೆಗಳ ಬಗ್ಗೆ ವ್ಯಾಖ್ಯಾನಿಸುತ್ತದೆ ಮತ್ತು‌ ಭಾರತ-ಯುಎಇ ನಡುವಿನ ಒಪ್ಪಂದದ ಅನುಸಾರ ಇದೊಂದು ಅಂತರ್ಗತ ವ್ಯಾಖ್ಯಾನವಾಗಿದೆ’ ಎಂದು ಪೀಠವು ತನ್ನ ಆದೇಶದಲ್ಲಿ ವಿವರಿಸಿದೆ.

‘ಆಸ್ಟಿನ್‌ ಅವರು ಝೆರೋಧಾದಿಂದ ₹ 8,28,36,896 ಆದಾಯ ಹೊಂದಿದ್ದಾರೆ’ ಎಂದು ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಝೆರೋಧಾಕ್ಕೆ ಆದಾಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತರು ಆದಾಯ ತೆರಿಗೆ ಕಾಯ್ದೆ ಅಡಿಯಲ್ಲಿ 2024ರ ಡಿಸೆಂಬರ್ 10ರಂದು ಮೌಲ್ಯ ಪಾವತಿಸಲು ನಿರ್ಣಯಿಸಿದ್ದರು.

ಇದನ್ನು ಪ್ರಶ್ನಿಸಿದ್ದ ಆಸ್ಟಿನ್‌, ‘ಆದಾಯ ತೆರಿಗೆ ಮೌಲ್ಯಮಾಪಕರು ನಿರ್ಣಯಿಸಿರುವ ಆದಾಯವು ಕಲಂ 90(2)ರ ಅನುಸಾರ ಭಾರತದಲ್ಲಿನ ತೆರಿಗೆಗೆ ಒಳಪಡುವುದಿಲ್ಲ ಮತ್ತು ಇದರ ಪ್ರಯೋಜನವನ್ನು ಪಡೆಯಲು ನಾನು ಅರ್ಹನಿದ್ದೇನೆ’ ಎಂದು ಪ್ರತಿಪಾದಿಸಿದ್ದರು. ಮೌಲ್ಯಮಾಪನ ಅಧಿಕಾರಿ ಈ ಹಕ್ಕನ್ನು ತಿರಸ್ಕರಿಸಿದ್ದರು. ಇದನ್ನು ಪ್ರಶ್ನಿಸಿ ಆಸ್ಟಿನ್‌ ಮೇಲ್ಮನವಿ ಸಲ್ಲಿಸಿದ್ದರು.

ವಿಚಾರಣೆ ವೇಳೆ ತೆರಿಗೆ ಇಲಾಖೆಯ ಮೌಲ್ಯಮಾಪನ ಅಧಿಕಾರಿ, ‘ಆಸ್ಟಿನ್ ಅವರಿಗೆ ಮೊದಲು ಝೆರೋಧಾ ವತಿಯಿಂದ ಸಂಬಳ ನೀಡಲಾಗುತ್ತಿತ್ತು ನಂತರ ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು 2020ರ ಅಕ್ಟೋಬರ್ 1ರಿಂದ ಅವರನ್ನು ಸಲಹೆಗಾರರಾಗಿ ನೇಮಕ ಮಾಡಿಕೊಳ್ಳಲಾಗಿದೆ’ ಎಂದು ವಾದ ಮಂಡಿಸಿದ್ದರು.

ಝೆರೋಧಾ ಬ್ರೋಕಿಂಗ್ ಲಿಮಿಟೆಡ್‌: ಕೈಟ್‌ನಂತಹ ವೇದಿಕೆಗಳ ಮೂಲಕ ಷೇರುಗಳು, ಉತ್ಪನ್ನಗಳು, ಕರೆನ್ಸಿಗಳು, ಸರಕುಗಳು, ಮ್ಯೂಚುವಲ್ ಫಂಡ್‌ಗಳು ಮತ್ತು ಬಾಂಡ್‌ಗಳಿಗೆ ಆನ್‌ಲೈನ್ ವ್ಯಾಪಾರ ಒದಗಿಸುವ ಮಧ್ಯವರ್ತಿಯಾಗಿರುವ ‘ಝೆರೋಧಾ ಬ್ರೋಕಿಂಗ್ ಲಿಮಿಟೆಡ್‌’ ಭಾರತದ ಪ್ರಮುಖ ರಿಯಾಯಿತಿ ದರದ ದಲ್ಲಾಳಿ ಸಂಸ್ಥೆಯಾಗಿದೆ.

ಕಡಿಮೆ ವೆಚ್ಚ, ಉನ್ನತ ತಂತ್ರಜ್ಞಾನ ಮತ್ತು ಶೈಕ್ಷಣಿಕ ಸಂಪನ್ಮೂಲಗಳೊಂದಿಗೆ ಭಾರತೀಯ ಹೂಡಿಕೆಯಲ್ಲಿನ ಅಡೆತಡೆಗಳನ್ನು ತೆಗೆದುಹಾಕುವ ಗುರಿಯನ್ನು ಇದು ಹೊಂದಿದೆ. ಇದನ್ನು 2010ರಲ್ಲಿ ನಿತಿನ್ ಮತ್ತು ನಿಖಿಲ್ ಕಾಮತ್ ಸ್ಥಾಪಿಸಿದರು. ಲಕ್ಷಾಂತರ ಬಳಕೆದಾರರು ಇದರ ಸೇವೆ ಪಡೆಯುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.