ADVERTISEMENT

ಜಿಂದಾಲ್‌ಗೆ ಭೂಮಿ: ಎಚ್‌ಡಿಕೆ– ಡಿಕೆಶಿ ಸ್ನೇಹ ಕಾರಣ

ಸಚಿವರಿಗೆ ಕಮಿಷನ್‌ ಸಂದಾಯ– ಶೋಭಾ ಕರಂದ್ಲಾಜೆ

​ಪ್ರಜಾವಾಣಿ ವಾರ್ತೆ
Published 7 ಜೂನ್ 2019, 19:41 IST
Last Updated 7 ಜೂನ್ 2019, 19:41 IST

ಬೆಂಗಳೂರು:ಜಿಂದಾಲ್‌ ಕಂಪನಿಗೆ ಭೂಮಿ ಮಾರಾಟ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮತ್ತು ಬಳ್ಳಾರಿ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ ನಡುವಿನ ಸ್ನೇಹ ಕಾರಣವೇ ಎಂದುಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಪ್ರಶ್ನಿಸಿದರು.

ಶಿವಕುಮಾರ್‌ ಅವರನ್ನು ಬಳ್ಳಾರಿ ಉಸ್ತುವಾರಿ ಸಚಿವರನ್ನಾಗಿ ನೇಮಿಸಿರುವ ಹಿಂದಿನ ತಂತ್ರಗಾರಿಕೆ ಏನು ಎನ್ನುವುದು ಜಿಂದಾಲ್‌ ವಿದ್ಯಮಾನದಿಂದ ಗೊತ್ತಾಗುತ್ತದೆ ಎಂದು ಅವರು ಶುಕ್ರವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ, ಬಳ್ಳಾರಿ ಜಿಲ್ಲೆ ಉಸ್ತುವಾರಿ ಸಚಿವ ಶಿವಕುಮಾರ್ ಮತ್ತು ಕೈಗಾರಿಕಾ ಸಚಿವ ಜಾರ್ಜ್‌ ಅವರಿಗೆ ಎಷ್ಟು ಕಮಿಷನ್‌ ಸಂದಾಯವಾಗಿದೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದರು.

ADVERTISEMENT

ತೋರಣಗಲ್ಲು ಮತ್ತು ಕರೆಕುಪ್ಪ ಗ್ರಾಮಗಳಲ್ಲಿ 2,001 ಎಕರೆ ಹಾಗೂ ಸಂಡೂರು ತಾಲ್ಲೂಕಿನ ಮುಸೇ ನಾಯಕನಹಳ್ಳಿ ಮತ್ತು ಯರಬನಹಳ್ಳಿ ಗ್ರಾಮಮಗಳಲ್ಲಿ 1,666 ಎಕರೆ ಭೂಮಿ ಸೇರಿ 3,667 ಎಕರೆ ಭೂಮಿಯನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಶುದ್ಧಕ್ರಯ ಪತ್ರ ಮಾಡಿಕೊಡಲು ರಾಜ್ಯ ಸರ್ಕಾರ ತರಾತುರಿ ಕ್ರಮ ತೆಗೆದುಕೊಳ್ಳಲು ಕಾರಣವೇನು ಎಂದು ಪ್ರಶ್ನಿಸಿದರು.

ಕೋಟ್ಯಂತರ ಬೆಲೆ ಬಾಳುವ ಭೂಮಿಯನ್ನು ಪ್ರತಿ ಎಕರೆಗೆ ₹1.22 ಲಕ್ಷ ದರ ನಿಗದಿ ಮಾಡಿ ಮಾರಾಟ ಮಾಡಲಾಗಿದೆ. ಗುತ್ತಿಗೆ ನವೀಕರಿಸಲು ಅವಕಾಶವಿದ್ದರೂ ಉದ್ದೇಶಪೂರ್ವಕವಾಗಿ ಜಿಂದಾಲ್‌ ಕಂಪನಿಯ ಪರವಾಗಿ ರಾಜ್ಯ ಸರ್ಕಾರ ವಕಾಲತ್ತು ವಹಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದರು.

ಹಿಂದೆ ಗಣಿ ಲೂಟಿ ನಡೆಯುತ್ತಿದೆ ಎಂದು ಸಿದ್ದರಾಮಯ್ಯ ಬೊಬ್ಬೆ ಹೊಡೆದು ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದರು. ಆದರೆ, ಈಗ ಜಿಂದಾಲ್‌ ವಿದ್ಯಮಾನದ ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದಕ್ಕೆ ಕಾರಣವೇನು ಎಂದು ಶೋಭಾ ಪ್ರಶ್ನಿಸಿದರು.

ಸಿಎಂಗೆ ಸಿ.ಟಿ.ರವಿ ಪತ್ರ

ಜಿಂದಾಲ್‌ ಕಂಪನಿಗೆ ಸರ್ಕಾರಿ ಜಮೀನು ಮಾರಾಟ ಮಾಡುವ ನಿರ್ಣಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಮತ್ತು ಇತರ ಸಚಿವರಿಗೆ ಪತ್ರ ಬರೆದಿದ್ದಾರೆ.

* ಈ ಮಾರಾಟದಿಂದ ಸರ್ಕಾರಕ್ಕೆ ಆಗುವ ಲಾಭವೇನು? ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಇದೇ ತಾಲ್ಲೂಕಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಎಕರೆಗೆ ₹30 ಲಕ್ಷದಿಂ ₹1 ಕೋಟಿವರೆಗೆ ಪರಿಹಾರ ಕೊಟ್ಟಿರುವಾಗ ಜಿಂದಾಲ್‌ ಕಂಪನಿಗೆ ಎಕರೆಗೆ ₹1.22 ಲಕ್ಷಕ್ಕೆ ಮಾರಾಟ ಮಾಡಿರುವುದರ ಉದ್ದೇಶವೇನು.

* ಸರ್ಕಾರಕ್ಕೂ ಜಿಂದಾಲ್‌ ಕಂಪನಿಗೂ ನಡೆದಿರುವ ಒಪ್ಪಂದವೇನು, ಎಷ್ಟು ಪ್ರಮಾಣದ ಭೂಮಿಯನ್ನು ಎಷ್ಟು ವರ್ಷಗಳ ಅವಧಿಗೆ ನೀಡಲಾಗಿದೆ. ಗುತ್ತಿಗೆ ಮೊತ್ತವೆಷ್ಟು? ಜಿಂದಾಲ್‌ಗೆ ಸರ್ಕಾರ ಒದಗಿಸುತ್ತಿರುವ ನೀರಿನ ಪ್ರಮಾಣವೆಷ್ಟು, ನೀರನ್ನು ಎಲ್ಲಿಂದ ಒದಗಿಸಲಾಗುತ್ತಿದೆ?

* ಕಂಪನಿ ಆರಂಭಿಸಿದ ಮೇಲೆ ಜನಜೀವನದ ಮೇಲೆ ಆರೋಗ್ಯದ ಮೇಲೆ, ಪರಿಸರದ ಮೇಲೆ ಆಗಿರುವ ಪರಿಣಾಮವೇನು? ಇದಕ್ಕೆ ಸಂಬಂಧಿಸಿದಂತೆ ಸೋಷಿಯಲ್‌ ಆಡಿಟ್‌ ಆಗಿದೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.