ADVERTISEMENT

ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆಗೆ ಬಂಧನ ಭೀತಿ

ಪತಿ ಪ್ರಶಾಂತ ಐಹೊಳೆ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:55 IST
Last Updated 2 ಜೂನ್ 2019, 19:55 IST
ಆಶಾ ಐಹೊಳೆ
ಆಶಾ ಐಹೊಳೆ   

ಬೆಳಗಾವಿ: ನಿವೇಶನ ಕೊಡಿಸುವುದಾಗಿ ಹಣ ಪಡೆದು ವಂಚಿಸಿದ ಆರೋಪದ ಮೇಲೆ ಪತಿ ಪ್ರಶಾಂತ ಐಹೊಳೆ ಬಂಧನವಾದ ಬಳಿಕ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಆಶಾ ಐಹೊಳೆ ಕೂಡ ಬಂಧನ ಭೀತಿ ಎದುರಿಸುತ್ತಿದ್ದಾರೆ.

ಠೇವಣಿ ವಂಚನೆಗೆ ಸಂಬಂಧಿಸಿದಂತೆ ದಾಖಲಾದ ಪ್ರತ್ಯೇಕ ಪ್ರಕರಣಗಳಲ್ಲಿ ಪ್ರಮುಖ ಆರೋಪಿ ಆಶಾ ಐಹೊಳೆ ನಿರೀಕ್ಷಣಾ ಜಾಮೀನು ಕೋರಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಮೇ 28 ರಂದು ವಿಚಾರಣೆ ನಡೆಸಿದ ನ್ಯಾಯಾಲಯವು ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಅಥಣಿಯ ಮಹಾಲಕ್ಷ್ಮಿ ಮಲ್ಟಿಟ್ರೇಡ್‌ ಡಿಸ್ಟ್ರಿಬ್ಯೂಷನ್‌ ಸಂಸ್ಥೆಯ ಮಾಲೀಕ ಎನ್‌.ಪ್ರಶಾಂತ ಐಹೊಳೆ ಹಾಗೂ ನಿರ್ದೇಶಕಿ ಆಶಾ ಐಹೊಳೆ ವಿರುದ್ಧ ಕಾಗವಾಡ ತಾಲ್ಲೂಕು ಉಗಾರ್‌ಬುದ್ರಕ ಗ್ರಾಮದ ಧರೆಪ್ಪ ಸತ್ಯಪ್ಪ ಕುಸುನಾಳೆ ಮೇ 6ರಂದು ಅಥಣಿ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದರು. 2011ರಲ್ಲಿ ಠೇವಣಿ ಇಟ್ಟಿದ್ದ ₹50 ಸಾವಿರವನ್ನು ಅವಧಿ ಮುಗಿದರೂ ಪಾವತಿಸುತ್ತಿಲ್ಲ ಎಂದು ದೂರಿದ್ದರು.

ADVERTISEMENT

ಮಹಾಲಕ್ಷ್ಮಿ ಎಸ್ಟೇಟ್ಸ್‌ ಸಂಸ್ಥೆ ಮೂಲಕ ನಿವೇಶನ ನೀಡುವುದಾಗಿ ನಂಬಿಸಿ ಪ್ರಶಾಂತ ಐಹೊಳೆ ₹2ಲಕ್ಷ ಪಡೆದಿದ್ದರು. ನಿವೇಶನ ನೀಡದೇ, ಹಣ ಕೂಡ ವಾಪಸ್‌ ಕೊಡದೇ ವಂಚಿಸಿದ್ದಾರೆ ಎಂದು ಅಥಣಿಯ ಸಂಜಯ ಸಂಕಪಾಲಕರ್‌ ಏ. 27ರಂದು ಅಥಣಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪೊಲೀಸರು ಮೇ 17ರಂದು ಪ್ರಶಾಂತ ಐಹೊಳೆ ಅವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.