ADVERTISEMENT

ಅಣು ಸ್ಥಾವರ ಪಟ್ಟಿ ವಿನಿಮಯ

​ಪ್ರಜಾವಾಣಿ ವಾರ್ತೆ
Published 1 ಜನವರಿ 2012, 19:30 IST
Last Updated 1 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪರಮಾಣು ಸ್ಥಾವರಗಳ ಮೇಲಿನ ದಾಳಿಯನ್ನು ನಿರ್ಬಂಧಿಸಲು ಮಾಡಿಕೊಂಡ ಒಪ್ಪಂದದ ಅನ್ವಯ ಭಾರತ ಹಾಗೂ ಪಾಕಿಸ್ತಾನ ತಮ್ಮ ದೇಶಗಳಲ್ಲಿರುವ ಅಣು ಸ್ಥಾವರಗಳ ಪಟ್ಟಿಯನ್ನು ಭಾನುವಾರ ಪರಸ್ಪರ ವಿನಿಯಮ ಮಾಡಿಕೊಂಡಿವೆ.

1988ರಲ್ಲಿ ಮಾಡಿಕೊಂಡ ಈ ಒಪ್ಪಂದದಂತೆ ಪ್ರತಿ ವರ್ಷವೂ ಉಭಯ ದೇಶಗಳೂ ತಮ್ಮಲ್ಲಿರುವ ಅಣು ಸ್ಥಾವರಗಳ ಪಟ್ಟಿ ವಿನಿಯಮ ಮಾಡಿಕೊಳ್ಳುತ್ತವೆ.

ಪಾಕಿಸ್ತಾನವು ತನ್ನ ದೇಶದ ಅಣು ಸ್ಥಾವರಗಳ ಪಟ್ಟಿಯನ್ನು ಭಾನುವಾರ ಬೆಳಿಗ್ಗೆ 11.30 ಕ್ಕೆ ವಿದೇಶಾಂಗ ಕಚೇರಿಯಲ್ಲಿರುವ ಭಾರತೀಯ ಹೈಕಮಿಷನ್ ಅಧಿಕಾರಿಗೆ ನೀಡಿತು ಎಂದು ವಿದೇಶಾಂಗ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಭಾರತ ಕೂಡ ತನ್ನ ದೇಶದ ಅಣು ಸ್ಥಾವರಗಳ ಪಟ್ಟಿಯನ್ನು ದೆಹಲಿಯಲ್ಲಿರುವ ವಿದೇಶಾಂಗ ವ್ಯವಹಾರ ಸಚಿವಾಲಯದಲ್ಲಿ ಪಾಕಿಸ್ತಾನದ ಹೈ ಕಮಿಷನ್ ಅಧಿಕಾರಿಗೆ ಮಧ್ಯಾಹ್ನ 12 ಗಂಟೆಗೆ ಸಲ್ಲಿಸಿತು.

1992ರಿಂದಲೂ ಸತತವಾಗಿ ಈ ವಿನಿಮಯ ಮಾಡಿಕೊಳ್ಳಲಾಗುತ್ತಿದೆ.ಇನ್ನೊಂದು ಪ್ರತ್ಯೇಕ ಒಪ್ಪಂದದ ಪ್ರಕಾರ ಎರಡೂ ದೇಶಗಳು ಪರಸ್ಪರ ಜೈಲುಗಳಲ್ಲಿ ಇರುವ ಕೈದಿಗಳ ಪಟ್ಟಿಯನ್ನೂ ವಿನಿಮಯ ಮಾಡಿಕೊಂಡಿವೆ. 2008ರಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ವರ್ಷದಲ್ಲಿ ಎರಡು ಬಾರಿ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕಾಗುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.