ADVERTISEMENT

ಅಣ್ಣಾ ಹೇಳಿಕೆಗೆ ಪಾಕ್‌ನಲ್ಲಿ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2011, 19:30 IST
Last Updated 23 ಅಕ್ಟೋಬರ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): `ಭಾರತ- ಪಾಕಿಸ್ತಾನ ನಡುವೆ ಯುದ್ಧ ನಡೆದರೆ ನಾನು ಈಗಲೂ ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧ~ ಎನ್ನುವ ಅಣ್ಣಾ ಹಜಾರೆ ಹೇಳಿಕೆಗೆ ಪಾಕಿಸ್ತಾನದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

`ಕಾಶ್ಮೀರ ಭಾರತದ ಅವಿಭಾಜ್ಯ ಅಂಗ. ಪಾಕ್ ವಿರುದ್ಧದ ಯುದ್ಧದಲ್ಲಿ ಪಾಲ್ಗೊಂಡಿದ್ದ ತಮ್ಮ ಹಣೆ ಮೇಲೆ ಗುಂಡಿನ ಗುರುತು ಈಗಲೂ ಇದೆ. ಇದು ದೇಶ ಪ್ರೇಮದ ಬಗ್ಗೆ ನನ್ನ ಬದ್ಧತೆಯನ್ನು ತೋರಿಸುತ್ತದೆ~ ಎಂದು ಅಣ್ಣಾ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಿದ್ದರು.

`ಅಣ್ಣಾ ಹಜಾರೆ ತಮ್ಮ ಬ್ಲಾಗ್‌ನಲ್ಲಿ ಬರೆದುಕೊಂಡಂತೆ ಗಡಿಯಲ್ಲಿ ಉಭಯ ದೇಶಗಳ ನಡುವೆ ಯುದ್ಧ ನಡೆಯಬೇಕಿಲ್ಲ. ಗಡಿಯಲ್ಲಿ ಯೋಧರನ್ನು ನಿಯೋಜನೆ ಮಾಡುವ ಬದಲಾಗಿ ಭ್ರಾತೃತ್ವದ ಸಂಕೇತವನ್ನು ಮೂಡಿಸಲು ಹೂವುಗಳು ಮತ್ತು ಮೊಂಬತ್ತಿಗಳಿಂದ ಶೃಂಗರಿಸುವ ಅಗತ್ಯ ಇದೆ~ ಎಂದು ಉಮರ್ ತಾರಿಖ್ ಎನ್ನುವವರು ತಮ್ಮ ಬ್ಲಾಗ್‌ನಲ್ಲಿ ತಿರುಗೇಟು ನೀಡಿದ್ದಾರೆ.

`ಯುದ್ಧದಲ್ಲಿ ಪಾಲ್ಗೊಳ್ಳಲು ಸಿದ್ಧ ಎನ್ನುವ ಅಣ್ಣಾ ಹೇಳಿಕೆ ಪಾಕಿಸ್ತಾನಿಯರ ಭಾವನೆಯನ್ನು ಕೆರಳಿಸುತ್ತದೆ. ಅಣ್ಣಾ ಹಜಾರೆ ಅವರಿಗೆ ಎರಡನೇ ಗಾಂಧಿ ಎಂದು ಜನ ಏಕೆ ಕರೆಯುತ್ತಾರೆ ಎನ್ನುವುದು ನನಗೆ ಅರ್ಥವಾಗುತ್ತಿಲ್ಲ~ ಎಂದೂ ತಾರಿಖ್ ಹೇಳಿದ್ದಾರೆ.

`ಮಹಾತ್ಮಾ ಗಾಂಧಿ ಅವರು ಪಾಕಿಸ್ತಾನಕ್ಕೆ ಅನ್ಯಾಯ ಆಗುವುದರ ವಿರುದ್ಧ ನಿರಶನ ನಡೆಸಿದ್ದರು. ಆದರೆ ಹಜಾರೆ ಪಾಕ್ ವಿರುದ್ಧ ಯುದ್ಧಕ್ಕೆ ಸೈ ಎನ್ನುತ್ತಿದ್ದಾರೆ. ಇದು ಗಾಂಧಿ ಮತ್ತು ಅಣ್ಣಾ ನಡುವೆ ಇರುವ ವ್ಯತ್ಯಾಸ~ ಎಂದು ಅವರು ವ್ಯಂಗ್ಯವಾಡಿದ್ದಾರೆ.

ತಾರಿಖ್ ಅವರ ಬ್ಲಾಗ್ ಓದಿರುವ ಪಾಕಿಸ್ತಾನ ಮತ್ತು ಭಾರತದ ಅನೇಕ ನಾಗರಿಕರು ಅಣ್ಣಾ ಅವರನ್ನು ವಿರೋಧಿಸಿದ್ದರೆ, ಇನ್ನು ಕೆಲವು ಮಂದಿ ಅವರನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದ್ದಾರೆ.

ಕೆಲವು ಭಾರತೀಯರು ಅಣ್ಣಾ ಹಜಾರೆ ಅವರನ್ನು ಬೆಂಬಲಿಸಿದ್ದು, ಅವರನ್ನು ಸಮರ್ಥಿಸಿಕೊಂಡಿದ್ದಾರೆ. ಅದರೆ ಪಾಕಿಸ್ತಾನದ ಜನರು ಮಾತ್ರ ಅಣ್ಣಾ ಅವರ ಸೇಡಿನ ಹೇಳಿಕೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.