ADVERTISEMENT

ಅತಿದೊಡ್ಡ ಟೆಲಿಸ್ಕೋಪ್‌ ಕಾರ್ಯಾರಂಭ

ಪಿಟಿಐ
Published 25 ಸೆಪ್ಟೆಂಬರ್ 2016, 19:30 IST
Last Updated 25 ಸೆಪ್ಟೆಂಬರ್ 2016, 19:30 IST
ಚೀನಾದ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಸ್ಥಾಪಿಸಲಾದ ಟೆಲಿಸ್ಕೋಪ್‌ ಭಾನುವಾರ ಕಾರ್ಯಾರಂಭ ಮಾಡಿದೆ – ಎಪಿ ಚಿತ್ರ
ಚೀನಾದ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಸ್ಥಾಪಿಸಲಾದ ಟೆಲಿಸ್ಕೋಪ್‌ ಭಾನುವಾರ ಕಾರ್ಯಾರಂಭ ಮಾಡಿದೆ – ಎಪಿ ಚಿತ್ರ   

ಬೀಜಿಂಗ್‌ :  ಚೀನಾದಲ್ಲಿ ಸ್ಥಾಪಿಸಲಾದ ಜಗತ್ತಿನ ಅತಿ ದೊಡ್ಡ ರೇಡಿಯೊ ಟೆಲಿಸ್ಕೋಪ್‌ ಭಾನುವಾರ ಪರೀಕ್ಷಾರ್ಥ ಕಾರ್ಯಾರಂಭ ಮಾಡಿದೆ.

ಐತಿಹಾಸಿಕ ಕ್ಷಣಕ್ಕೆ ನೂರಾರು ಮಂದಿ ಖಗೋಳವಿಜ್ಞಾನಿಗಳು ಹಾಗೂ ಖಗೋಳಾಸಕ್ತರು ಸಾಕ್ಷಿಯಾದರು. ಚಾಲನೆ ನೀಡಿದ ಕೆಲವೇ ನಿಮಿಷಗಳಲ್ಲಿ ಬಾಹ್ಯಾಕಾಶದಿಂದ ಮೊದಲ ಸಂದೇಶವನ್ನು ಸ್ವೀಕರಿಸಿತು. ದೂರದರ್ಶಕವು ಸದ್ಯ ಪರೀಕ್ಷಾ ಹಂತದಲ್ಲಿದ್ದು, ಮೂರು ವರ್ಷದ ಬಳಿಕ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಲಿದೆ.

4.5 ಕೋಟಿ ವರ್ಷಗಳ ಹಿಂದೆ ಗುಜಿಯೋ ಪ್ರಾಂತ್ಯದ ಪರ್ವತದಲ್ಲಿ ಇದ್ದ ಗುಹೆಯೊಂದು ಕುಸಿದುಬಿದ್ದು ಉಂಟಾಗಿರುವ ಬೃಹದಾಕಾರದ ಗುಳಿಯಲ್ಲಿ ಟೆಲಿಸ್ಕೋಪ್ ನಿರ್ಮಿಸಲಾಗಿದೆ.

₹1200 ಕೋಟಿ ವೆಚ್ಚದ ಈ ಟೆಲಿಸ್ಕೋಪ್‌ನ ತಟ್ಟೆ 30 ಫುಟ್ಬಾಲ್ ಮೈದಾನಗಳಷ್ಟು ವಿಶಾಲವಾಗಿದೆ.  ಒಟ್ಟು 4,450 ಫಲಕಗಳನ್ನು ಜೋಡಿಸಲಾಗಿದ್ದು,  ಪ್ರತಿ ಫಲಕವೂ ತ್ರಿಕೋನಾಕೃತಿಯಲ್ಲಿ 11 ಮೀಟರ್ ಉದ್ದವಿದೆ.

ಸುಮಾರು 20 ವರ್ಷಗಳ ನಿರಂತರ ಶೋಧನೆಯ ನಂತರ ಟೆಲಿಸ್ಕೋಪ್‌ ಸ್ಥಾಪನೆಗೆ ಸೂಕ್ತವಾದ ಸ್ಥಳವನ್ನು ಆಯ್ಕೆ ಮಾಡಲಾಗಿದೆ.  ಈ ಸ್ಥಳದ ಸುತ್ತಮುತ್ತ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಜನವಸತಿ  ಪ್ರದೇಶಗಳಿಲ್ಲ. ಈ ವ್ಯಾಪ್ತಿಯಲ್ಲಿ ಬೇರೆ ಯಾವ ರೀತಿಯ ರೇಡಿಯೊ ತರಂಗಗಳು ಕೆಲಸ ಮಾಡುವುದಿಲ್ಲ.

ದೂರದ ಆಕಾಂಶಗಂಗೆಯಲ್ಲಿರುವ ನೈಸರ್ಗಿಕ ಜಲಜನಕ ಹಾಗೂ ಸಾಮಾನ್ಯ ಟೆಲಿಸ್ಕೋಪ್‌ಗಳ ಪತ್ತೆ ಮಾಡದ  ಆಕಾಶಕಾಯಗಳನ್ನು ಇದು ಪತ್ತೆ ಮಾಡಲಿದೆ.

ಇದಕ್ಕಿಂತ ಹೆಚ್ಚಾಗಿ ಇನ್ನಿತರ ಆಕಾಶಕಾಯ, ಜನವಸತಿ ಪ್ರದೇಶಗಳಿಂದ ಹೊರಹೊಮ್ಮುವ ಸೂಕ್ಷಾತೀಸೂಕ್ಷ್ಮ ತರಂಗಗಳನ್ನು ಈ ಟೆಲಿಸ್ಕೋಪ್‌  ಗ್ರಹಿಸುವ ಸಾಮರ್ಥ್ಯ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT