ADVERTISEMENT

ಅಪಹೃತ ಪಾಕ್ ಸೈನಿಕರ ಹತ್ಯೆ: 15 ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 19:30 IST
Last Updated 5 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ತಾಲಿಬಾನ್ ಉಗ್ರಗಾಮಿಗಳು ಎರಡು ವಾರಗಳ ಹಿಂದೆ ತಾವು ಅಪಹರಿಸಿದ್ದ 15 ಮಂದಿ ಪಾಕಿಸ್ತಾನದ ಸೈನಿಕರನ್ನು ಹತ್ಯೆ ಮಾಡಿ ನಗ್ನ ದೇಹಗಳನ್ನು ಬುಡಕಟ್ಟು ಪ್ರದೇಶದಲ್ಲಿ ಎಸೆದಿದ್ದಾರೆ.

ತಮ್ಮ ವಿರುದ್ಧ ಕಾರ್ಯಾಚರಣೆ ನಡೆಸಿದರೆ ಇನ್ನಷ್ಟು ಸೇಡಿನ ಕ್ರಮ ತೆಗೆದುಕೊಳ್ಳುವುದು ಖಂಡಿತ ಎಂದು ತಾಲಿಬಾನ್ ಉಗ್ರರು ಪಾಕಿಸ್ತಾನ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನದ ಅರೆ ಸೇನಾಪಡೆಯ 15 ಯೋಧರ ನಗ್ನ ದೇಹಗಳನ್ನು ಉತ್ತರ ವಾಜಿರಿಸ್ತಾನದ ಸ್ಪಿನ್‌ತಾಲ್ ಪ್ರದೇಶದ ಹೊಲದಲ್ಲಿ ಎಸೆಯಲಾಗಿದೆ. ಎಲ್ಲಾ ದೇಹಗಳೂ ನಗ್ನವಾಗಿದ್ದವು ಮತ್ತು ದೇಹದ ತುಂಬಾ ಗುಂಡಿನ ಗಾಯಗಳಿದ್ದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತೆಹರಿಕ್-ಎ-ತಾಲಿಬಾನ್ ಸಂಘಟನೆಯು ಈ ದುಷ್ಕೃತ್ಯದ ಹೊಣೆ ಹೊತ್ತಿದ್ದು, ತಮ್ಮ ಸಂಘಟನೆಯ ಮಹಿಳಾ ಸದಸ್ಯರನ್ನು ಬಂಧಿಸಿದ್ದಕ್ಕೆ ಪ್ರತಿಕಾರವಾಗಿ ಈ ಹತ್ಯೆ ಮಾಡಲಾಗಿದೆ ಎಂದು ಪತ್ರಕರ್ತರಿಗೆ ಕಳುಹಿಸಿರುವ ಇ-ಮೇಲ್‌ನಲ್ಲಿ ಉಗ್ರಗಾಮಿ ಸಂಘಟನೆ ತಿಳಿಸಿದೆ. ಕೆಲವು ದಿನಗಳ ಹಿಂದೆಯೇ ಈ ಹತ್ಯೆ ಮಾಡಲಾಗಿದೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.