ADVERTISEMENT

ಅಮೆರಿಕದಲ್ಲಿ ಜನಾಂಗೀಯ ದ್ವೇಷ: ಹೈದರಾಬಾದ್‌ನ ಟೆಕಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2017, 19:12 IST
Last Updated 24 ಫೆಬ್ರುವರಿ 2017, 19:12 IST
ಅಮೆರಿಕದಲ್ಲಿ ಜನಾಂಗೀಯ ದ್ವೇಷ: ಹೈದರಾಬಾದ್‌ನ ಟೆಕಿ ಹತ್ಯೆ
ಅಮೆರಿಕದಲ್ಲಿ ಜನಾಂಗೀಯ ದ್ವೇಷ: ಹೈದರಾಬಾದ್‌ನ ಟೆಕಿ ಹತ್ಯೆ   

ಹ್ಯೂಸ್ಟನ್/ವಾಷಿಂಗ್ಟನ್: ಅಮೆರಿಕದ ಕನ್ಸಾಸ್ ನಗರದ ಆಸ್ಟಿನ್ ಬಾರ್‌ನಲ್ಲಿ ಹೈದರಾಬಾದ್‌ನ ಎಂಜಿನಿಯರ್ ಶ್ರೀನಿವಾಸ ಕೂಚಿಬೊಟ್ಲಾ  (32) ಎಂಬುವವರನ್ನು ಬುಧವಾರ ರಾತ್ರಿ ಗುಂಡಿಟ್ಟು ಹತ್ಯೆ ಮಾಡಲಾಗಿದೆ.

ಬಿಳಿಯ ಮಾಜಿ ಸೈನಿಕನೊಬ್ಬ ‘ನನ್ನ ದೇಶ ಬಿಟ್ಟು ಹೊರನಡೆಯಿರಿ’ ಎಂದು ಚೀರಾಡುತ್ತಾ ಗುಂಡು ಹಾರಿಸಿದ್ದಾನೆ. ಇದೊಂದು ಜನಾಂಗೀಯ ದಾಳಿ ಎನ್ನಲಾಗಿದೆ.

ಶ್ರೀನಿವಾಸ್ ಅವರ ಸಹೋ ದ್ಯೋಗಿ ವರಂಗಲ್‌ನ ಅಕೋಲ್ ಮೇಡಸಾನಿ ಹಾಗೂ ಅಮೆರಿಕ ಪ್ರಜೆ ಇಯಾನ್ ಗ್ರಿಲ್ಲಟ್ ಅವರೂ ಗುಂಡಿನ ದಾಳಿಯಲ್ಲಿ  ಗಾಯಗೊಂಡಿದ್ದಾರೆ.  ಶ್ರೀನಿವಾಸ್ ಅವರು ಕನ್ಸಾಸ್‌ನ ಒಲೆಜೊ ಪಟ್ಟಣದಲ್ಲಿರುವ ಜಿಪಿಎಸ್‌ ತಯಾರಿಕಾ ಕಂಪೆನಿ ಗಾರ್ಮಿನ್‌ನಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. 4 ವರ್ಷಗಳ ಹಿಂದೆ  ವಿವಾಹ ವಾಗಿದ್ದು, ಪತ್ನಿ ಅಮೆರಿಕದಲ್ಲಿಯೇ ಕೆಲಸ ಮಾಡುತ್ತಿದ್ದರು.

ADVERTISEMENT

ಬುಧವಾರ ರಾತ್ರಿ ಬಾರ್ ಒಳಗೆ ನುಗ್ಗಿದ 51ರ ಹರೆಯದ ಆ್ಯಡಂ ಪುರಿಂಟನ್ ಎಂಬ ವ್ಯಕ್ತಿ ಗುಂಡಿನದಾಳಿ ನಡೆಸಿದ್ದಾನೆ. ತೀವ್ರ ಗಾಯಗೊಂಡ ಶ್ರೀನಿವಾಸ್ ಕನ್ಸಾಸ್ ಸ್ಥಳೀಯ ಆಸ್ಪತ್ರೆಯಲ್ಲಿ ಅಸು ನೀಗಿದ್ದು, ದಾಳಿಯಲ್ಲಿ ಗಾಯಗೊಂಡ ಭಾರತೀಯ ಮೂಲದ ಅಲೋಕ್‌ ಮದಸನಿ (31) ಮತ್ತು ಇಯಾನ್ ಗ್ರಿಲ್ಲೋಟ್ (24) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನನ್ನ ದೇಶದಿಂದ ಹೊರಗೆ ಹೋಗಿ: ಕನ್ಸಾಸ್‍ನ ಒಲಾಥೆ ಎಂಬಲ್ಲಿರುವ ಆಸ್ಟಿನ್ಸ್ ಬಾರ್ ಆ್ಯಂಡ್ ಗ್ರಿಲ್ ನಲ್ಲಿ ಈ ಘಟನೆ ನಡೆದಿದೆ.  'ನನ್ನ ದೇಶದಿಂದ ಹೊರಗೆ ಹೋಗಿ' ಎಂದು ಹೇಳಿ ಶ್ರೀನಿವಾಸ್ ಮೇಲೆ ಪುರಿಂಟನ್ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಬಾರ್ ನೌಕರರು ಹೇಳಿದ್ದಾರೆ.

ಜವಾಹರ್‍ಲಾಲ್ ನೆಹರು ಟೆಕ್ನಾಲಜಿಕಲ್ ಯುನಿವರ್ಸಿಟಿಯಿಂದ ಇಲೆಕ್ರ್ಟಿಕಲ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ವಿಷಯದಲ್ಲಿ ಪದವೀಧರನಾಗಿದ್ದ ಶ್ರೀನಿವಾಸ್ ಯುಟಿಇಪಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸಿದ್ದರು, ಆನಂತರ  ರಾಕ್‍ವೆಲ್ ಕೋಲಿಲ್ಸ್ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಇಂಜಿಯನಿಯರ್ ಆಗಿದ್ದರು.

ಜಿಪಿಎಸ್ ತಯಾರಿಕಾ ಸಂಸ್ಥೆಯಾದ ಗಾರ್ಮಿನ್ ‍ನಲ್ಲಿ ಏವಿಯೇಷನ್  ಸಿಸ್ಟಮ್ಸ್ ಇಂಜಿನಿಯರಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವರು  ಟೆಕ್ಸಾಸ್ ಎಲ್ ಪಸೊ ಯುನಿವರ್ಸಿಟಿಯಿಂದ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಶ್ರೀನಿವಾಸ್ ಅವರ ಪತ್ನಿ ಸುನನ್ಯಾ ದುಮಾಲಾ ಅಮೆರಿಕದ ಟೆಕ್ನಾಲಜಿ ಕಂಪನಿಯೊಂದರ ಉದ್ಯೋಗಿ.

ಸುಷ್ಮಾ ಸ್ವರಾಜ್ ಸಂತಾಪ: ಕನ್ಸಾಸ್  ನಲ್ಲಿ  ನಡೆದ ಗುಂಡಿನ ದಾಳಿಯಲ್ಲಿ ಸಾವಿಗೀಡಾಗಿರುವ ಶ್ರೀನಿವಾಸ್ ಅವರಿಗ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂತಾಪ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.