ADVERTISEMENT

ಅಮೆರಿಕದ ನೀತಿಗೆ ಭಾರತ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2012, 19:30 IST
Last Updated 7 ಫೆಬ್ರುವರಿ 2012, 19:30 IST

ವಾಷಿಂಗ್ಟನ್ (ಪಿಟಿಐ): ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬೆಳವಣಿಗೆಗೆ ಪೂರಕವಲ್ಲದ ಮತ್ತು ತಾರತಮ್ಯದಿಂದ ಕೂಡಿದ ಐ.ಟಿ ನೀತಿಯನ್ನು ಕೈಬಿಡುವಂತೆ ಭಾರತ ಮಂಗಳವಾರ ಅಮೆರಿಕಕ್ಕೆ ಮನವಿ ಮಾಡಿದೆ.

ಹೊರ ಗುತ್ತಿಗೆ ರದ್ದು ಮಾಡುವ ಬರಾಕ್ ಒಬಾಮ ಆಡಳಿತದ ನಿರ್ಧಾರ ಭಾರತದ ಐ.ಟಿ ಕ್ಷೇತ್ರದ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ. ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಅಮೆರಿಕ ಅನುಸರಿಸುತ್ತಿರುವ ಆರ್ಥಿಕ ರಕ್ಷಣಾ ನೀತಿಯನ್ನು ಮತ್ತು ಸ್ವದೇಶಿ ಕೈಗಾರಿಕೆಗಳ ಉತ್ತೇಜನಕ್ಕಾಗಿ ವಿದೇಶಿ ಕಂಪೆನಿಗಳತ್ತ ತಾಳಿರುವ ಧೋರಣೆಯನ್ನು ಕೈಬಿಡುವಂತೆ ಮನವಿ ಮಾಡಿದೆ.

ದ್ವಿಪಕ್ಷೀಯ ಮಾತುಕತೆಗಾಗಿ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿರುವ ವಿದೇಶಾಂಗ ಕಾರ್ಯದರ್ಶಿ ರಂಜನ್ ಮಥಾಯ್, ಇಲ್ಲಿನ ವಾಣಿಜ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳ ಜೊತೆ ಸೋಮವಾರ ನಡೆಸಿದ ಮಾತುಕತೆ ವೇಳೆ ಇದನ್ನು ಪ್ರಸ್ತಾಪಿಸಿದರು ಎನ್ನಲಾಗಿದೆ.

ಅಮೆರಿಕದಲ್ಲಿರುವ ಭಾರತ ಐ.ಟಿ ಉದ್ಯಮ ಕಳೆದ ಐದು ವರ್ಷಗಳಲ್ಲಿ ಸುಮಾರು 15 ಶತಕೋಟಿ ಡಾಲರ್ ತೆರಿಗೆ ಪಾವತಿಸಿದೆ.

ಪ್ರತಿ ವರ್ಷ ಭಾರತೀಯರು ಕನಿಷ್ಠ 200 ದಶಲಕ್ಷ ಡಾಲರ್ ಮೊತ್ತವನ್ನು ವೀಸಾ ಶುಲ್ಕದ ರೂಪದಲ್ಲಿ ಪಾವತಿಸುತ್ತಾರೆ. ಸ್ಥಳೀಯರಿಗೆ ಉದ್ಯೋಗ ಸೃಷ್ಟಿಸುವ ನಿಟ್ಟಿನಲ್ಲಿ ಹೊರ ಗುತ್ತಿಗೆ ರದ್ದು ಮಾಡುವುದರಿಂದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ತೀವ್ರ ಹಿನ್ನಡೆಯಾಗಲಿದೆ. ಹೀಗಾಗಿ ವಿದೇಶಿ ಐ.ಟಿ ಕಂಪೆನಿಗಳ ಬಗ್ಗೆ ತಾಳಿರುವ ತಾರತಮ್ಯ ನೀತಿ ಕೈಬಿಡಬೇಕೆಂದು ಕೋರಿದರು.

`ಮಾಹಿತಿ ತಂತ್ರಜ್ಞಾನ ನೀತಿ, ಆರ್ಥಿಕ ಸಹಭಾಗಿತ್ವ, ವಾಣಿಜ್ಯ ಸಂಬಂಧ ಮತ್ತು ಬಂಡವಾಳ ಹೂಡಿಕೆಗಳ ಹೊರತಾಗಿ ಆಹಾರ ಭದ್ರತೆ, ಆರೋಗ್ಯ, ಶಿಕ್ಷಣ ಮುಂತಾದ ಪ್ರಮುಖ ಕ್ಷೇತ್ರಗಳ ಬಗ್ಗೆ ಉಭಯ ರಾಷ್ಟ್ರಗಳೂ ಚರ್ಚಿಸಲಿವೆ~ ಎಂದು ಮಥಾಯ್ ತಿಳಿಸಿದ್ದಾರೆ.

`ಇರಾನ್ ಜೊತೆಗೆ ಭಾರತ ಹೊಂದಿರುವ ಉತ್ತಮ ಬಾಂಧವ್ಯ ಅಮೆರಿಕದೊಂದಿಗಿನ ಸಂಬಂಧದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ~ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ. `ಇರಾನ್ ಪರಮಾಣು ನೀತಿ ಮತ್ತು ಯೋಜನೆಗಳ ಬಗ್ಗೆ ಭಾರತದ ನಿಲುವು ಸ್ಪಷ್ಟ. ಟೆಹರಾನ್‌ನಿಂದ ತೈಲ ಖರೀದಿಸದಂತೆ ಒಬಾಮ ಆಡಳಿತ ನಿರಂತರವಾಗಿ ಹೇರುತ್ತಿರುವ ಒತ್ತಡ ತಂತ್ರಗಳು ಈ ನಿಲುವಿನ ಮೇಲೆ ಯಾವುದೇ ಪರಿಣಾಮ ಬೀರದು~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

`ಶಾಂತಿ ಉದ್ದೇಶಗಳಿಗಾಗಿ ಪರಮಾಣು ಶಕ್ತಿ ಬಳಸುವುದು ಇರಾನ್‌ನ ಹಕ್ಕು. ಅಮೆರಿಕ ಮತ್ತು ಯೂರೋಪ್ ಒಕ್ಕೂಟದ ನಿರ್ಬಂಧದ ಬಗ್ಗೆ ಉದ್ಭವಿಸಿರುವ ಸಮಸ್ಯೆಗೆ ಪರಸ್ಪರ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಲು ಸಾಧ್ಯ. ಪಶ್ಚಿಮ ಏಷ್ಯಾ ರಾಷ್ಟ್ರಗಳ ಶಾಂತಿ, ಸ್ಥಿರತೆ ನಮಗೆ ಅತಿ ಮುಖ್ಯ~ ಎಂದು ಮಥಾಯ್ ಹೇಳಿದ್ದಾರೆ.
 

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.

ADVERTISEMENT