ADVERTISEMENT

ಅಮೆರಿಕ: ಮತ್ತೆ ಗುಂಡಿನ ದಾಳಿ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2013, 20:00 IST
Last Updated 22 ಏಪ್ರಿಲ್ 2013, 20:00 IST
ವಾಷಿಂಗ್ಟನ್ ರಾಜ್ಯದ ಸಿಯಾಟಲ್ ಬಳಿಯ ವಸತಿ ಸಮುಚ್ಚಯದಲ್ಲಿ ನಡೆದ ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ಪೊಲೀಸರ ಕಾವಲು. ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ 	-ಎಪಿ ಚಿತ್ರ
ವಾಷಿಂಗ್ಟನ್ ರಾಜ್ಯದ ಸಿಯಾಟಲ್ ಬಳಿಯ ವಸತಿ ಸಮುಚ್ಚಯದಲ್ಲಿ ನಡೆದ ಗುಂಡಿನ ಚಕಮಕಿ ಹಿನ್ನೆಲೆಯಲ್ಲಿ ಪೊಲೀಸರ ಕಾವಲು. ಘಟನೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದಾರೆ -ಎಪಿ ಚಿತ್ರ   

ವಾಷಿಂಗ್ಟನ್(ಪಿಟಿಐ): ಅಮೆರಿಕದ ಪಶ್ಚಿಮ ಕರಾವಳಿಯ ವಾಷಿಂಗ್ಟನ್ ರಾಜ್ಯದ ಸಿಯಾಟಲ್ ಬಳಿಯ ಸರ್ಕಾರಿ ವಸತಿ ಸಮುಚ್ಚಯದಲ್ಲಿ ಭಾನುವಾರ ರಾತ್ರಿ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳೆ ಸೇರಿದಂತೆ ಐದು ಜನರು ಸಾವನ್ನಪ್ಪಿದ್ದಾರೆ.
ಸಿಯಾಟಲ್‌ನಿಂದ 32 ಕಿ.ಮೀ. ದಕ್ಷಿಣದಲ್ಲಿನ ಫೆಡೆರಲ್ ವೇ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಈ ಭಯಾನಕ ಘಟನೆಯಿಂದಾಗಿ ಸ್ಥಳದಲ್ಲಿ ಕೆಲಕಾಲ ಆತಂಕದ ಸ್ಥಿತಿ ನಿರ್ಮಾಣವಾಗಿತ್ತು.

ಭಾನುವಾರ ರಾತ್ರಿ ದೊರೆತ ತುರ್ತು ಕರೆಯನುಸರಿಸಿ ಪೊಲೀಸರು ಸ್ಥಳಕ್ಕೆ ಧಾವಿಸುವವರೆಗೂ ಗುಂಡಿನ ಚಕಮಕಿ ಮುಂದುವರಿದಿತ್ತು ಎಂದು ಫೆಡೆರಲ್ ವೇ ಪೊಲೀಸ್ ವಕ್ತಾರೆ ಕ್ಯಾಥಿ ಶ್ರಾಕ್ ತಿಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ತಲುಪಿದ ವೇಳೆ ವಸತಿ ಸಮುಚ್ಚಯದ ವಾಹನ ನಿಲುಗಡೆ ಸ್ಥಳದಲ್ಲಿ ಇಬ್ಬರು ಗಾಯಗೊಂಡು ಬಿದ್ದಿದ್ದರು. ಅವರನ್ನು ರಕ್ಷಿಸಲು ಪೊಲೀಸರು ಮುನ್ನುಗ್ಗುತ್ತಿದ್ದಂತೆ ಬಂದೂಕು ಹಿಡಿದು ಪೊಲೀಸರತ್ತ ಧಾವಿಸಿ ಬಂದ ವ್ಯಕ್ತಿಯ ವಿರುದ್ಧ ಪೊಲೀಸರು ಪ್ರತಿಯಾಗಿ ಗುಂಡು ಹಾರಿಸಿದ ವೇಳೆ ಆತ ಸಾವನ್ನಪ್ಪಿದ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ವಸತಿ ಸಮುಚ್ಚಯದ ಒಳಗೆ ತಪಾಸಣೆ ನಡೆಸಿದ ವೇಳೆ ಒಬ್ಬ ವ್ಯಕ್ತಿ ಮತ್ತು ಮಹಿಳೆಯ ಮೃತದೇಹ ಪತ್ತೆಯಾಯಿತು.

ಒಟ್ಟು ಎಂಟು ಅಧಿಕಾರಿಗಳು ಗುಂಡಿನ ದಾಳಿ ನಡೆಸಿದ್ದು ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಲಾಗಿದೆ. ಘಟನೆಯ ಕುರಿತು ತನಿಖೆ ಮುಂದುವರಿದಿದೆ.

ವಸತಿ ಸಮುಚ್ಚಯದ ವಾಹನ ನಿಲುಗಡೆ ಪ್ರದೇಶದಲ್ಲಿ ಕಂಡುಬಂದ ಜಗಳವೇ ಗುಂಡಿನ ಚಕಮಕಿಯಲ್ಲಿ ಅಂತ್ಯಕಂಡಿತ್ತು ಎಂದು ಮೂಲಗಳು ತಿಳಿಸಿವೆ.

ಘಟನೆಯಲ್ಲಿ ಯಾವುದೇ ಅಧಿಕಾರಿಗಳು ಗಾಯಗೊಂಡ ವರದಿಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿ  ಹೆಚ್ಚುವರಿ ಮಾಹಿತಿ ಪಡೆಯುವ ಪ್ರಯತ್ನ ಮುಂದುವರಿದಿದ್ದು ನಿಜವಾದ ಕಾರಣ ಇದುವರೆಗೂ ತಿಳಿದುಬಂದಿಲ್ಲ.

ಗುಂಡಿನ ದಾಳಿ: ಆರು ಜನರ ಹತ್ಯೆ
ಮಾಸ್ಕೊ (ಎಎಫ್‌ಪಿ)
:  ಬಂದೂಕುಧಾರಿಯೊಬ್ಬ ಬೇಟೆ ಸಾಮಗ್ರಿಗಳ ಮಾರಾಟ ಮಳಿಗೆಯೊಂದರಲ್ಲಿ  ಹಾಡಹಗಲೇ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿ ಇಬ್ಬರು ಬಾಲಕಿಯರು ಸೇರಿದಂತೆ ಆರು ಜನರನ್ನು ಹತ್ಯೆ ಮಾಡಿರುವ ಘಟನೆ ರಷ್ಯಾದ ಬೆಲ್ಗೊರೊಡ್ ನಗರದಲ್ಲಿ ಸೋಮವಾರ ನಡೆದಿದೆ.

ಪೈಶಾಚಿಕ ಕೃತ್ಯ ಎಸಗಿದ ವ್ಯಕ್ತಿಯನ್ನು ಸೆರ್ಗಿ ಪೊಮಾನುಜ್ ಎಂದು ಗುರುತಿಸಲಾಗಿದೆ. ಈ ಹಿಂದೆ ಕಳ್ಳತನ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಈತ 2012ರಲ್ಲಿ ಜೈಲಿನಿಂದ ಬಿಡುಗಡೆಗೊಂಡಿದ್ದ ಎಂದು ಪೊಲೀಸ್ ತನಿಖಾ ಸಮಿತಿ ಹೇಳಿದೆ.
ಏಕಾಏಕಿ ಗುಂಡಿನ ದಾಳಿ ನಡೆಸಿದ  ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದು, ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗಾಗಿ ಶೋಧ ಕಾರ್ಯ ಆರಂಭಿಸಲಾಗಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.