ಇಸ್ಲಾಮಾಬಾದ್(ಪಿಟಿಐ): ಪಾಕಿಸ್ತಾನದ ರಾಜಧಾನಿಯ ಹೊರವಲಯದಲ್ಲಿ ಬನಿ ಗಾಲಾ ಪ್ರದೇಶದ ಶಾಂತಿ ಬೀದಿಯಲ್ಲಿರುವ ಆರ್ಟ್ ಆಫ್ಲಿವಿಂಗ್ ಯೋಗ ಕೇಂದ್ರಕ್ಕೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆ ಶನಿವಾರ ಸಂಜೆ ನಡೆದಿದೆ.
ಭದ್ರತಾ ಸಿಬ್ಬಂದಿಗಳು ಯೋಗ ಕೇಂದ್ರದಲ್ಲಿ ಹಣ ಇರುವ ಜಾಗದ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿದ್ದರಿಂದ ದುಷ್ಕರ್ಮಿಗಳು ಕಟ್ಟಡಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
‘ಯೋಗ ಕೇಂದ್ರದಲ್ಲಿ ಕೇವಲ ಇಬ್ಬರು ರಕ್ಷಣಾ ಸಿಬ್ಬಂದಿ ಇದ್ದರು. ಯೋಗಕೇಂದ್ರದ ಆವರಣದೊಳಕ್ಕೆ ಬಂದ ಸುಮಾರು ಎಂಟು ಜನರ ಗುಂಪು ಹಣ ಇರಿಸಿದ ಜಾಗದ ಬಗ್ಗೆ ಪ್ರಶ್ನಿಸಿದರು. ಸಿಬ್ಬಂದಿಗಳು ತಮಗೆ ಗೊತ್ತಿಲ್ಲ ಎಂದು ಹೇಳಿದಾಗ ಅವರನ್ನು ಕಟ್ಟಿಹಾಕಿದ ದುಷ್ಕರ್ಮಿಗಳು ಕಟ್ಟಡಕ್ಕೆ ಬೆಂಕಿ ಹಚ್ಚಿ ಪರಾರಿಯಾದರು’ ಎಂದು ಮೂಲಗಳು ವಿವರಿಸಿವೆ.
ಆದರೆ ಯೋಗ ಕೇಂದ್ರದ ಅಧಿಕಾರಿ ಮೀನಾ ಗಬೀನಾ ಅವರ ಪ್ರಕಾರ ಆರೋಪಿಗಳು ಒಂದು ಶಬ್ದವನ್ನು ಕೂಡ ಮಾತಾಡಿಲ್ಲ. ‘ಅವರು ಕೇವಲ ಭದ್ರತಾ ಸಿಬ್ಬಂದಿಗಳನ್ನು ಕಟ್ಟಿಹಾಕಿ ಕಟ್ಟಡಕ್ಕೆ ಬೆಂಕಿ ಹಚ್ಚಿ ಹೋಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಇತ್ತೀಚೆಗೆ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ಕಾರ್ಯಕ್ರಮವೊಂದು ಈ ಯೋಗ ಕೇಂದ್ರದ ಬಗ್ಗೆ ಕೆಲವು ಆರೋಪಗಳನ್ನು ಮಾಡಿದ್ದರ ಕುರಿತೂ ಗಬೀನಾ ಇದೇ ಸಂದರ್ಭದಲ್ಲಿ ಉಲ್ಲೇಖಿಸಿದರು.
2012ರಲ್ಲಿ ಈ ಯೋಗಕೇಂದ್ರದ ಉದ್ಘಾಟನೆಗೆ ಪಾಕಿಸ್ತಾನಕ್ಕೆ ತೆರಳಿದ್ದ ಶ್ರೀಶ್ರೀ ರವಿಶಂಕರ ಗುರೂಜಿ ಅವರು ತಾಲಿಬಾನಿಗಳ ಜೊತೆ ಮಾತುಕತೆ ನಡೆಸುವ ಇಂಗಿತ ವ್ಯಕ್ತಪಡಿಸಿದ್ದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.