ADVERTISEMENT

ಆಹಾರ ಭದ್ರತೆ ಸಬ್ಸಿಡಿಗೆ ಸಮ್ಮತಿ

ಬಾಲಿಯಲ್ಲಿ 9ನೇ ‘ಡಬ್ಲ್ಯುಟಿಒ’ ಶೃಂಗಸಭೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2013, 19:30 IST
Last Updated 6 ಡಿಸೆಂಬರ್ 2013, 19:30 IST
ಇಂಡೋನೇಷ್ಯಾದ ಬಾಲಿಯಲ್ಲಿ ಶುಕ್ರವಾರ ನಡೆದ ವಿಶ್ವ ವ್ಯಾಪಾರ ಸಂಘಟನೆಯ 9ನೇ ಸಚಿವರ ಸಮ್ಮೇಳನ ವಿರೋಧಿಸಿ ನುಸಾ ದುವಾದಲ್ಲಿ ನಡೆದ ಪ್ರತಿಭಟನೆ ವೇಳೆ, ಮಹಿಳೆಯರು ಸ್ಥಳೀಯ ಸಾಂಪ್ರದಾಯಿಕ ‘ಸುಲಾವೆಸಿ’ ನೃತ್ಯ ಪ್ರದರ್ಶಿಸಿದರು
ಇಂಡೋನೇಷ್ಯಾದ ಬಾಲಿಯಲ್ಲಿ ಶುಕ್ರವಾರ ನಡೆದ ವಿಶ್ವ ವ್ಯಾಪಾರ ಸಂಘಟನೆಯ 9ನೇ ಸಚಿವರ ಸಮ್ಮೇಳನ ವಿರೋಧಿಸಿ ನುಸಾ ದುವಾದಲ್ಲಿ ನಡೆದ ಪ್ರತಿಭಟನೆ ವೇಳೆ, ಮಹಿಳೆಯರು ಸ್ಥಳೀಯ ಸಾಂಪ್ರದಾಯಿಕ ‘ಸುಲಾವೆಸಿ’ ನೃತ್ಯ ಪ್ರದರ್ಶಿಸಿದರು   

ನೂಸಾ ದುವಾ/ಬಾಲಿ (ಐಎ­ಎನ್‌­ಎಸ್‌): ಬಹುಪಕ್ಷೀಯ ವ್ಯಾಪಾರ ಸುಧಾರಣೆ ಕರಡಿಗೆ ಭಾರತ ಸಹಮತ ವ್ಯಕ್ತಪಡಿಸುವ ಮೂಲಕ ಇಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಶೃಂಗಸಭೆ ಯಶಸ್ವಿಯಾಗಿದೆ.

ಉದ್ದೇಶಿತ ಕರಡಿನಲ್ಲಿ ಸದಸ್ಯ ರಾಷ್ಟ್ರಗಳು ಆಹಾರ ಧಾನ್ಯಗಳ ಸಬ್ಸಿಡಿ ನೀಡಲು  ಒಪ್ಪಿಗೆ ನೀಡಿದ ನಂತರ ಭಾರತ ಕರಡಿಗೆ ಸಹಮತ ವ್ಯಕ್ತಪಡಿಸಿತು.
ನಾಲ್ಕು ದಿನಗಳಿಂದ ನಡೆದ ಸುದೀರ್ಘ ಹಾಗೂ ಸೂಕ್ಷ್ಮ ವಿಷಯಗಳ ಚರ್ಚೆಯ ನಂತರ ಸಭೆಯಲ್ಲಿ ಒಮ್ಮತ ಮೂಡಿತು ಎನ್ನಲಾಗಿದೆ. ಈ ಕರಡಿಗೆ ಸಹಿ ಹಾಕುವ ಮೂಲಕ ಎರಡು ದಶಕಗಳ ನಂತರ ಜಾಗತಿಕ ಮಟ್ಟದಲ್ಲಿ ಭಾರತ ವ್ಯಾಪಾರ ಒಪ್ಪಂದಕ್ಕೆ ಬಂದಿದೆ.

‘ನಾವು ಅಂದುಕೊಂಡಿದ್ದಕ್ಕಿಂತಲೂ ತುಂಬಾ ಸಂತೋಷವಾಗಿದೆ. ಇದೊಂದು ಶುಭದಿನ’ ಎಂದು ಸಭೆಯ ನಂತರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ ಶರ್ಮಾ ತಿಳಿಸಿದರು. ‘ಈ ಒಪ್ಪಂದ ಭಾರತ, ವಿಶ್ವ ವ್ಯಾಪಾರ ಸಂಘಟನೆ ಮತ್ತು ಜಾಗತಿಕ ಸಮುದಾಯಕ್ಕೆ  ದೊರೆತ ಮಹತ್ವದ ಜಯ’ ಎಂದೂ ಅವರು ಹೇಳಿದರು.

ತುರ್ತು ಸಭೆ: ಶೃಂಗದಲ್ಲಿ ಸಹಮತಕ್ಕೆ ಬರುವ ಮುನ್ನ  ಡಬ್ಲುಟಿಒ ಮಹಾ ನಿರ್ದೇಶಕ ರಾಬರ್ಟ್‌ ಅಜವೆಡೊ ಅವರು ಭಾರತ, ಅಮೆರಿಕ ಮತ್ತು ಇಂಡೋನೇಷ್ಯಾದ ವಾಣಿಜ್ಯ ಸಚಿವರ ತುರ್ತು ಸಭೆ ನಡೆಸಿದರು. ಅಹಾರ ಭದ್ರತೆ ಮತ್ತು ಸಬ್ಸಿಡಿ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವಿಗೆ ಅಂಟಿಕೊಂಡಿದ್ದರಿಂದ ಈ ಸಭೆಯಲ್ಲಿ ನಿರೀಕ್ಷಿತ ಸಹಮತ ವ್ಯಕ್ತ­ವಾಗಲಿಲ್ಲ. ಹಾಗಾಗಿ ಸಭೆ ವಿಫಲವಾಗು­ತ್ತದೇ ಎಂದೇ ಭಾವಿಸಲಾಗಿತ್ತು.

ಸದಸ್ಯ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಅಹಾರ ಭದ್ರತೆ ಒದಗಿಸುವುದು ಮೂಲಭೂತ ವಿಷಯ. ಹಾಗಾಗಿ ಈ ನಿಟ್ಟಿನಲ್ಲಿ ಭಾರತ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಬಿಗಿ ನಿಲುವು ತಾಳಿತ್ತು. ಆದರೆ ಇತರ ದೇಶಗಳ ಪ್ರಕಾರ ಆಹಾರ ಭದ್ರತೆಗೆ ಸಬ್ಸಿಡಿ ನೀಡುವುದು ಡಬ್ಲುಟಿಒ ನಿಯಮಗಳಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಕೃಷಿ ಕ್ಷೇತ್ರದ ಸಬ್ಸಿಡಿ ಕಡಿಮೆಯಾಗುತ್ತದೆ.  ಇಂತಹ ಸಂದರ್ಭವನ್ನು ಬಳಸಿಕೊಂಡು ಭಾರತ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತದೆ ಎನ್ನುವ ವಾದ ಮಂಡಿಸಿದವು.

ಆದರೆ, ಸದಸ್ಯ ರಾಷ್ಟ್ರಗಳ ಆತಂಕದ ಬಗ್ಗೆ ಭಾರತ ಮನವರಿಕೆ ಮಾಡಿಕೊಟ್ಟ ನಂತರ ಅಹಾರ ಭದ್ರತಾ ಸಬ್ಸಿಡಿಗೆ ಶೃಂಗದಲ್ಲಿ ಒಪ್ಪಿಗೆ ನೀಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.