ADVERTISEMENT

ಇಟಿಎಸ್ಗೆ ಭಾರತ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2012, 19:30 IST
Last Updated 2 ಆಗಸ್ಟ್ 2012, 19:30 IST

ವಾಷಿಂಗ್ಟನ್ (ಪಿಟಿಐ): ವಿಮಾನಗಳ ಸಂಚಾರದಿಂದ ಉಂಟಾಗುವ ಮಾಲಿನ್ಯ ತಗ್ಗಿಸುವ ಸಂಬಂಧ ಐರೋಪ್ಯ ಒಕ್ಕೂಟ ಜಾರಿಗೆ ತಂದಿರುವ `ಮಾಲಿನ್ಯ ಸಮತೋಲನ ಯೋಜನೆ~ಗೆ (ಎಮಿಷನ್ಸ್ ಟ್ರೇಡಿಂಗ್ ಸ್ಕೀಮ್- ಇಟಿಎಸ್) ಭಾರತ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಇದರೊಂದಿಗೆ, ಈ ಯೋಜನೆ ವಿರುದ್ಧ ಅವೆುರಿಕ ಹಾಗೂ ಇನ್ನಿತರ 15 ರಾಷ್ಟ್ರಗಳ ಜತೆಗೆ ಭಾರತವೂ ಪ್ರತಿಭಟನೆಯ ದನಿ ಎತ್ತಿದಂತಾಗಿದೆ.

ಐರೋಪ್ಯ ಒಕ್ಕೂಟದ ಈ ನೀತಿ ವಿರುದ್ಧ ಅನುಸರಿಸಬೇಕಾದ ಸಾಮಾನ್ಯ ಕಾರ್ಯತಂತ್ರ ಕುರಿತು ಇಲ್ಲಿ ಏರ್ಪಡಿಸಲಾಗಿದ್ದ ಪ್ರಮುಖ ವಿಮಾನಯಾನ ರಾಷ್ಟ್ರಗಳ ಎರಡು ದಿನಗಳ ಸಭೆಯಲ್ಲಿ ಭಾರತ ತನ್ನ ನಿಲುವು ಸ್ಪಷ್ಟಪಡಿಸಿದೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಮೆರಿಕದ ಹಿರಿಯ ಆಡಳಿತಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೂರೋಪ್ ವಲಯದ ರಾಷ್ಟ್ರಗಳಿಗೆ ತೆರಳುವ ಅಥವಾ ಅಲ್ಲಿಂದ ನಿರ್ಗಮಿಸುವ ಅನ್ಯ ರಾಷ್ಟ್ರಗಳ ವಿಮಾನಗಳು ಹೊರಸೂಸುವ ಮಾಲಿನ್ಯಕ್ಕೆ ಪ್ರತಿಯಾಗಿ ಆ ರಾಷ್ಟ್ರಗಳು ಅಷ್ಟು ಪ್ರಮಾಣದ ಮಾಲಿನ್ಯವನ್ನು ತಗ್ಗಿಸಲು ಬೇರೆ ಕಾರ್ಯಕ್ರಮ ಹಮ್ಮಿಕೊಳ್ಳಲು ಬದ್ಧವಾಗಿರಬೇಕೆಂಬುದು ಇಟಿಎಸ್‌ನ ಪ್ರಮುಖ ತತ್ವವಾಗಿದೆ.

`ಇದಕ್ಕೆ ಮುನ್ನ ಕೂಡ ಭಾರತವು ಐರೋಪ್ಯ ಒಕ್ಕೂಟದ ಇಟಿಎಸ್ ನೀತಿ ವಿರುದ್ಧ ನವದೆಹಲಿಯಲ್ಲಿ ಕೆಲವು ಸಭೆಗಳನ್ನು ನಡೆಸಿತ್ತು. ಇಟಿಎಸ್ ನೀತಿಯನ್ನು ವಿರೋಧಿಸುತ್ತಿರುವ ಮಾತ್ರಕ್ಕೆ ಮಾಲಿನ್ಯದ ಗಂಭೀರತೆಯನ್ನು ನಾವು ಉಪೇಕ್ಷಿಸುತ್ತೇವೆ ಎಂದರ್ಥವಲ್ಲ. ವಿಮಾನಯಾನದಿಂದ ಉಂಟಾಗುವ ಮಾಲಿನ್ಯವನ್ನು ತಗ್ಗಿಸಬೇಕೆಂಬುದು ನಮ್ಮ ಗುರಿ ಕೂಡ ಆಗಿದೆ. ಆದರೆ ಅದಕ್ಕೆ ಬೇರೆ ಪರಿಹಾರಗಳನ್ನು ಹುಡುಕುವ ಅಗತ್ಯವಿದೆ~ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಇಟಿಎಸ್ ನೀತಿಗೆ ಬದಲಾಗಿ ಜಾಗತಿಕವಾಗಿ ಅನ್ವಯವಾಗುವ ಪರ್ಯಾಯ ಮಾರ್ಗೋಪಾಯವೊಂದನ್ನು ಹುಡುಕುವ ಸಲುವಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ವಿಮಾನಗಳ ಎಂಜಿನ್ ಹಾಗೂ ವಿಮಾನಯಾನಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಇಂಗಾಲ ಕ್ಷಮತೆಯನ್ನು ನಿಗದಿ ಮಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
 
ವೈಮಾನಿಕ ಮಾಲಿನ್ಯ ತಗ್ಗಿಸಲು ಇಟಿಎಸ್ ಒಂದೇ ಪರಿಹಾರವಲ್ಲ. ಹೆಚ್ಚು ದಕ್ಷತೆಯ ವಿಮಾನಗಳ ಹಾಗೂ ವಿಮಾನದ ಎಂಜಿನ್‌ಗಳ ತಯಾರಿಕೆ, ಸುಧಾರಿತ ವಿಮಾನ ಸಂಚಾರ ನಿಯಂತ್ರಣಾ ವ್ಯವಸ್ಥೆ, ಬದಲೀ ಇಂಧನಗಳ ಅಭಿವೃದ್ಧಿ ಸಾಧ್ಯತೆ ಇತ್ಯಾದಿಗಳ ಬಗ್ಗೆಯೂ ಚಿಂತಿಸಬೇಕಿದೆ ಎಂದು ಅವೆುರಿಕದ ಅಧಿಕಾರಿ ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.