ಕ್ವಾಲಾಲಂಪುರ (ಪಿಟಿಐ): ನಿಗೂಢವಾಗಿ ಕಣ್ಮರೆಯಾಗಿರುವ ಮಲೇಷ್ಯಾದ ವಿಮಾನ ಪತ್ತೆಗೆ ಹತ್ತು ರಾಷ್ಟ್ರಗಳು ಮೂರು ದಿನಗಳಿಂದ ಶೋಧ ಕಾರ್ಯ ನಡೆಸುತ್ತಿದ್ದರೂ ವಿಮಾನದ ಬಗ್ಗೆ ಯಾವ ಸುಳಿವೂ ದೊರಕಿಲ್ಲ ಅಥವಾ ಅದರ ಭಗ್ನಾವಶೇಷಗಳೂ ಪತ್ತೆಯಾಗಿಲ್ಲ. ಇದರಿಂದ ಈ ವಿಮಾನದಲ್ಲಿದ್ದ 239 ಪ್ರಯಾಣಿಕರ ಬಂಧುಗಳ ದುಗುಡ ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ.
ಈ ಮಧ್ಯೆ, ದಕ್ಷಿಣ ಚೀನಾ ಸಮುದ್ರದಲ್ಲಿ ಕಾಣಿಸಿಕೊಂಡ ತೈಲದ ಕುರುಹು ಮತ್ತು ವಿಯೆಟ್ನಾಂ ಸಮುದ್ರದಲ್ಲಿ ತೇಲುತ್ತಿದ್ದ ಕೆಲವು ವಸ್ತುಗಳು ಕಣ್ಮರೆಯಾದ ವಿಮಾನದ್ದೇ ಇರಬೇಕು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ, ಇವುಗಳಿಂದ ವಿಮಾನದ ಬಗ್ಗೆ ಯಾವ ಸುಳಿವು ಸಿಕ್ಕಿಲ್ಲ ಎಂದು ಮಲೇಷ್ಯಾ ಹೇಳಿದೆ. ಜೊತೆಗೆ ಶೋಧ ಕಾರ್ಯದ ಪರಧಿ ವಿಸ್ತರಿಸುವುದಾಗಿಯೂ ತಿಳಿಸಿದೆ.
ತೀವ್ರ ಶೋಧ: ಅಮೆರಿಕದ ವಿಮಾನಯಾನ ಆಡಳಿತ ಮತ್ತು ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ಶೋಧ ಕಾರ್ಯಕ್ಕೆ ನೆರವು ನೀಡಲು ಧಾವಿಸಿವೆ. ಒಟ್ಟಾರೆ ಹತ್ತು ದೇಶಗಳ 40 ಹಡಗುಗಳು, 34 ವಿಮಾನಗಳು, ಹಲವು ಹೆಲಿಕಾಪ್ಟರ್‌ಗಳು, ಮಲೇಷ್ಯಾ, ವಿಯೆಟ್ನಾಂ ಮತ್ತು ಅಂಡಮಾನ್ ಸಮುದ್ರದಲ್ಲಿ ಶೋಧ ಕಾರ್ಯಕ್ಕೆ ಇಳಿದಿವೆ.
ಇದರೊಟ್ಟಿಗೆ 20 ಸಾವಿರ ಮೀನುಗಾರರು ಮತ್ತು 1,800 ಮೀನುಗಾರರ ಹಡಗುಗಳು ಶೋಧ ಕಾರ್ಯ ನಡೆಸುತ್ತಿವೆ. ಥಾಯ್ಲೆಂಡ್ ಕೂಡ ತನ್ನ ಗಸ್ತು ಹಡಗನ್ನು ಅಂಡಮಾನ್ ಸಮುದ್ರಕ್ಕೆ ರವಾನಿಸಿದೆ. ಈ ಮಧ್ಯೆ, ಮಲೇಷ್ಯಾ ಪ್ರಧಾನಿ ನಜಿಬ್ ರಜಾಕ್ ಅವರು ವಿಮಾನ ಕಣ್ಮರೆಯಾಗಿರುವ ಬಗ್ಗೆ ‘ದಿಕ್ಕು ತೋಚದಂತಾಗಿದೆ’ ಎಂದಿದ್ದಾರೆ.
ನಿಗೂಢತೆ ಭೇದಿಸುವ ಸವಾಲು: ‘ನಾಪತ್ತೆಯಾಗಿರುವ ವಿಮಾನದ ಬಗ್ಗೆ ನಮಗೆ ಯಾವುದೇ ಸುಳಿವು ದೊರಕಿಲ್ಲ ಅಥವಾ ಅದರ ಭಗ್ನಾವಶೇಷಗಳೂ ಪತ್ತೆಯಾಗಿಲ್ಲ’ ಎಂದು ಮಲೇಷ್ಯಾದ ನಾಗರಿಕ ವಿಮಾನಯಾನ ಇಲಾಖೆಯ ಮುಖ್ಯಸ್ಥ ಅಜಹರುದ್ದೀನ್ ಅಬ್ದುಲ್ ರೆಹಮಾನ್ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಇದು ನಿಗೂಢವಾಗಿ ಕಣ್ಮರೆಯಾದ ವಿಮಾನಗಳ ಪ್ರಕರಣಗಳಲ್ಲಿ ಅಪರೂಪವಾದುದು. ಇದರ ನಿಗೂಢತೆ ಭೇದಿಸುವುದು ಸವಾಲಾಗಿ ಪರಿಣಮಿಸಿದೆ. ನಾವೂ ಪ್ರಯತ್ನವನ್ನು ಚುರುಕುಗೊಳಿಸಿದ್ದೇವೆ’ ಎಂದರು.
ಒಬ್ಬನ ಗುರುತು ಪತ್ತೆ: ಇಟಲಿ ಮತ್ತು ಆಸ್ಟ್ರೇಲಿಯಾದ ನಾಗರಿಕರಿಂದ ಕಳವು ಮಾಡಲಾಗಿರುವ ಪಾಸ್‌ಪೋರ್ಟ್ ಬಳಸಿ ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು ಎಂದು ಶಂಕಿಸಲಾಗಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬನನ್ನು ಗುರುತಿಸಲಾಗಿದೆ.
ಆದರೆ, ಆತ ಯಾರು ಎಂಬ ಗುಟ್ಟನ್ನು ಬಿಟ್ಟುಕೊಡದ ಮಲೇಷ್ಯಾ ಸರ್ಕಾರ, ಆತ ಮಲೇಷ್ಯಾದವನಂತೂ ಅಲ್ಲ ಎಂದಿದೆ.
ಎಫ್‌ಬಿಐ ನೆರವು: ವಿಮಾನ ಕಣ್ಮರೆ ಹಿಂದೆ ಉಗ್ರರ ಕೈವಾಡ ಇರಬಹುದೆಂದು ಶಂಕಿಸಿರುವ ಮಲೇಷ್ಯಾ ಸರ್ಕಾರ, ಭಾನುವಾರದಿಂದಲೇ ಭಯೋತ್ಪಾದಕರು ವಿಮಾನ ಅಪಹರಣ ಮಾಡಿರುವ ಸಾಧ್ಯತೆ ಬಗ್ಗೆ ತನಿಖೆ ನಡೆಸುತ್ತಿದೆ. ಅಮೆರಿಕದ ಕೇಂದ್ರೀಯ ತನಿಖಾ ಸಂಸ್ಥೆ (ಎಫ್‌ಬಿಐ) ಕೂಡ ಈ ತನಿಖೆಗೆ ನೆರವು ನೀಡಿದೆ.
ಈ ಮಧ್ಯೆ, ಕಳವು ಪಾಸ್‌ಪೋರ್ಟ್ ಬಳಸಿ ವಿಮಾನಕ್ಕೆ ಹತ್ತಿರುವ ಇಬ್ಬರ ಚಹರೆ ಏಷ್ಯಾದವರಂತೆ ಇದೆ ಎಂದು ಮಲೇಷ್ಯಾದ ಗೃಹ ಸಚಿವ ಅಹ್ಮದ್ ಜಾಹಿದ್ ಹಮಿದಿ ಭಾನುವಾರ ತಿಳಿಸಿದ್ದಾರೆ. ಈ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಖರೀದಿಸಿದ್ದ ಐವರು ವಿಮಾನದಲ್ಲಿ ಪ್ರಯಾಣ ಮಾಡಿಲ್ಲ ಎಂದು ಮಲೇಷ್ಯಾದ ಪೊಲೀಸ್ ಮಹಾನಿರ್ದೇಶಕ ಖಾಲಿದ್ ಅಬು ಬಕರ್ ಹೇಳಿದ್ದಾರೆ.
ಘಟನೆ ಹಿನ್ನೆಲೆ: ಮಲೇಷ್ಯಾದಿಂದ ಚೀನಾ ರಾಜಧಾನಿ ಬೀಜಿಂಗ್‌ಗೆ ಹೋಗುತ್ತಿದ್ದ ಮಲೇಷ್ಯಾ ವಿಮಾನಯಾನ ಸಂಸ್ಥೆಗೆ ಸೇರಿದ 777 ಬೋಯಿಂಗ್ ವಿಮಾನವು (ಎಂಎಚ್ 370) ಕ್ವಾಲಾಲಂಪುರ ವಿಮಾನ ನಿಲ್ದಾಣದಿಂದ ಶುಕ್ರವಾರ ಮಧ್ಯರಾತ್ರಿ ಹೊರಟ ಒಂದು ತಾಸಿನ ನಂತರ ರೆಡಾರ್ ನಿಯಂತ್ರಣಕ್ಕೆ ಸಿಗಲಿಲ್ಲ.
ಇದ್ದಕ್ಕಿದ್ದಂತೆ ಕಣ್ಮರೆಯಾದ ವಿಮಾನವು ವಿಯೆಟ್ನಾಂನ ದಕ್ಷಿಣ ಭಾಗದ ಫು ಕೋ ದ್ವೀಪದ ಬಳಿ ಪತನವಾಗಿದೆ ಎಂದು ಶಂಕಿಸಲಾಗಿತ್ತು. ಆದರೆ, ಈ ಭಾಗದಲ್ಲಿ ವಿಮಾನದ ಭಗ್ನಾವಶೇಷ ಸೋಮವಾರ ಕೂಡ ಪತ್ತೆಯಾಗಿಲ್ಲ. ಈ ವಿಮಾನದಲ್ಲಿ ನಾಲ್ವರು ಭಾರತೀಯರು, ಭಾರತ ಮೂಲದ ಕೆನಡಾದ ಒಬ್ಬ ನಾಗರಿಕ ಸೇರಿ 227 ಪ್ರಯಾಣಿಕರು ಮತ್ತು 12 ಸಿಬ್ಬಂದಿ ವರ್ಗದವರು ಇದ್ದರು.
‘ಅನುಭವಿ ಪೈಲಟ್’
ನಿಗೂಢವಾಗಿ ಕಣ್ಮರೆಯಾಗಿರುವ ವಿಮಾನದ ಪೈಲಟ್ ಜಹರಿ ಅಹ್ಮದ್ ಬೇಜವಾಬ್ದಾರಿಯ ವ್ಯಕ್ತಿಯಲ್ಲ. ಅವರಿಗೆ ತಮ್ಮ ವೃತ್ತಿ ಬಗ್ಗೆ ಉತ್ಕಟವಾದ ಪ್ರೀತಿ ಮತ್ತು ವಿಮಾನಗಳ ಬಗ್ಗೆ ಅತೀವ ಒಲವು ಇತ್ತು ಎಂದು ಜಹರಿ ಅಹ್ಮದ್ ಅವರ ಸಹೋದ್ಯೋಗಿಗಳು ಮತ್ತು ಮಾಜಿ ಜೊತೆಗಾರರು ಹೇಳಿದ್ದಾರೆ.
‘ಜಹರಿ (54) ಅವರು ಪೈಲಟ್ ಆಗಲೇ ಬೇಕು ಎಂದು ಹಂಬಲಿಸಿ ಈ ವೃತ್ತಿಗೆ ಬಂದವರು. 1981ರಲ್ಲಿ ಮಲೇಷ್ಯಾ ರಾಷ್ಟ್ರೀಯ ವಿಮಾನಯಾನ ಸಂಸ್ಥೆಗೆ ಸೇರಿದವರು. ಅವರು ಪೈಲಟ್ ಮಾತ್ರವಲ್ಲ ವಿಮಾನ ತಂತ್ರಜ್ಞಾನದ ಪ್ರತಿಯೊಂದು ಆಗುಹೋಗುಗಳನ್ನು ಬಲ್ಲವರಾಗಿದ್ದರು.
ತಮ್ಮ ಮನೆಯಲ್ಲೇ ಒಂದು ಪುಟ್ಟದಾದ ವಿಮಾನ ಕಾರ್ಯಾಗಾರವನ್ನೂ ಹೊಂದಿದ್ದರು. 777 ಬೋಯಿಂಗ್ ವಿಮಾನವನ್ನು ಅವರು ಅತೀವವಾಗಿ ಹಚ್ಚಿಕೊಂಡಿದ್ದರು. ವಿಮಾನ ಕಣ್ಮರೆಗೆ ಆಗಿರುವುದಕ್ಕೆ ಅವರೇ ಕಾರಣ ಎನ್ನುವುದು ಮೂರ್ಖತನ’ ಎಂದು ಜಹರಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.