ವಾಷಿಂಗ್ಟನ್ (ಪಿಟಿಐ): ಇರಾನ್‌ನಿಂದ ಕಚ್ಚಾ ತೈಲ ಖರೀದಿಯನ್ನು ಜೂನ್ 28ರ ಒಳಗಾಗಿ ಕ್ರಮೇಣ ಸ್ಥಗಿತಗೊಳಿಸುವಂತೆ ಭಾರತ ಮತ್ತು ಇತರ 11 ರಾಷ್ಟ್ರಗಳಿಗೆ ಅಮೆರಿಕ ಮಂಗಳವಾರ ತಾಕೀತು ಮಾಡಿದ್ದು, ಒಂದು ವೇಳೆ ಈ ಎಚ್ಚರಿಕೆಯನ್ನು ಕಡೆಗಣಿಸಿದರೆ ನಿರ್ಬಂಧ ಎದುರಿಸಲು ಸಜ್ಜಾಗಿ ಎಂಬ ಎಚ್ಚರಿಕೆ ನೀಡಿದೆ.
ಇರಾನ್ ಮೇಲೆ ನಿರ್ಬಂಧ ಹೇರಿದ ಹೊರತಾಗಿಯೂ ಆ ದೇಶದಿಂದ ತೈಲ ಖರೀದಿಸಲು ಕೆಲವು ರಾಷ್ಟ್ರಗಳಿಗೆ ಅಮೆರಿಕ ವಿನಾಯಿತಿ ಘೋಷಿಸಿದೆ. ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರು ವಿನಾಯಿತಿ ನೀಡಿದ ರಾಷ್ಟ್ರಗಳ ಪಟ್ಟಿಯನ್ನು ಮಂಗಳವಾರ ರಾತ್ರಿ ಪ್ರಕಟಿಸಿದ್ದು, ಏಷ್ಯಾ ಖಂಡದ ಪೈಕಿ ಜಪಾನ್‌ಗೆ ಮಾತ್ರ ಈ ಪಟ್ಟಿಯಲ್ಲಿ ಸ್ಥಾನ ನೀಡಲಾಗಿದೆ.
ಇರಾನ್‌ನಿಂದ ಕಚ್ಚಾ ತೈಲ ಖರೀದಿ ಪ್ರಮಾಣವನ್ನು ಕಡಿತಗೊಳಿಸಿದ ಬಹುತೇಕ ಐರೋಪ್ಯ ರಾಷ್ಟ್ರಗಳಿಗೆ ವಿನಾಯಿತಿ ನೀಡಲಾಗಿದೆ. ಭಾರತ, ಚೀನಾ, ದಕ್ಷಿಣ ಕೊರಿಯಾ ಸೇರಿದಂತೆ 11 ರಾಷ್ಟ್ರಗಳಿಗೆ ಈ ಪಟ್ಟಿಯಲ್ಲಿ ಸ್ಥಾನ ನೀಡಿಲ್ಲ. ಬೆಲ್ಜಿಯಂ, ಜೆಕ್ ಗಣರಾಜ್ಯ, ಜರ್ಮನ್, ಗ್ರೀಸ್, ಇಟಲಿ, ಫ್ರಾನ್ಸ್, ಪೋಲೆಂಡ್, ಸ್ಪೇನ್, ಬ್ರಿಟನ್ ಸೇರಿದಂತೆ ಐರೋಪ್ಯ ಒಕ್ಕೂಟದ ಹತ್ತು ರಾಷ್ಟ್ರಗಳು ವಿನಾಯಿತಿ ಪಡೆದಿವೆ. ಸದ್ಯ ಇರಾನ್‌ನಿಂದ ಸುಮಾರು 23 ರಾಷ್ಟ್ರಗಳು ಕಚ್ಚಾ ತೈಲ ಖರೀದಿಸುತ್ತಿವೆ.
ಆದೇಶ ಉಲ್ಲಂಘಿಸಿದ ರಾಷ್ಟ್ರಗಳ ವಿರುದ್ಧ ಜೂನ್ 28ರ ನಂತರ ನಿರ್ಬಂಧ ಹೇರಲಾಗುವುದು ಎಂದು ಹಿಲರಿ ಕ್ಲಿಂಟನ್ ಸ್ಪಷ್ಟಪಡಿಸಿದ್ದಾರೆ. ಸಾಧ್ಯವಾದಷ್ಟೂ ಶೀಘ್ರ ಕಚ್ಚಾ ತೈಲ ಆಮದು ಕಡಿತಗೊಳಿಸುವ ನಿಟ್ಟಿನಲ್ಲಿ ಭಾರತ, ಚೀನಾ ಮತ್ತು ದಕ್ಷಿಣ ಕೊರಿಯಾ ಜತೆ ಮಾತುಕತೆ ನಡೆಸಲಾಗುತ್ತಿದೆ ಎಂದು ವಿದೇಶಾಂಗ ಕಚೇರಿ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.