ವಾಷಿಂಗ್ಟನ್ (ಎಎಫ್‌ಪಿ): ನಾಗರಿಕ ಉದ್ದೇಶಗಳಿಗಾಗಿ ಇರಾನ್ ಪರಮಾಣು ಯೋಜನೆಗಳನ್ನು ಕೈಗೊಂಡರೆ ಅಮೆರಿಕದ ಅದನ್ನು ಒಪ್ಪಿಕೊಳ್ಳಲಿದೆ ಎಂದು ಆ ದೇಶದ ಅಧ್ಯಕ್ಷ ಬರಾಕ್ ಒಬಾಮ ಹೇಳಿದ್ದಾಗಿ `ವಾಷಿಂಗ್ಟನ್ ಪೋಸ್ಟ್~ ವರದಿ ಮಾಡಿದೆ.
ಟರ್ಕಿ ಪ್ರಧಾನಿ ರೆಸೆಪ್ ತಯ್ಯಿಪ್ ಎರ‌್ಡೋಗನ್ ಅವರ ಮೂಲಕ ಒಬಾಮ ಕಳೆದ ವಾರ ಇರಾನ್‌ಗೆ ಈ ಸಂದೇಶ ಕಳುಹಿಸಿದ್ದರು. ಎರ‌್ಡೋಗನ್ ಈ ಸಂದೇಶವನ್ನು ಇರಾನ್‌ನ ಪರಮೋಚ್ಚ ನಾಯಕರಾದ ಅಲಿ ಖಮೇನಿ ಅವರಿಗೆ ಮುಟ್ಟಿಸಿದ್ದಾರೆ ಎಂದು `ವಾಷಿಂಗ್ಟನ್ ಪೋಸ್ಟ್~ನ ವಿದೇಶಾಂಗ ವ್ಯವಹಾರಗಳ ಅಂಕಣಕಾರ ಡೇವಿಡ್ ಇಗ್ನಾಷಿಯಸ್ ಹೇಳಿದ್ದಾರೆ.
`ಶಾಂತಿ ಉದ್ದೇಶದಿಂದ ಕೈಗೊಳ್ಳುವ ಇರಾನ್‌ನ ಪರಮಾಣು ಕಾರ್ಯಕ್ರಮಗಳನ್ನು ಅಮೆರಿಕ ಒಪ್ಪಿಕೊಳ್ಳಲಿದೆ. ತಮ್ಮ ದೇಶ ಎಂದಿಗೂ ಅಣ್ವಸ್ತ್ರ ತಯಾರಿಸುವುದಿಲ್ಲ ಎಂದು ದೇಶದ ನಾಯಕ ಖಮೇನಿ ಇತ್ತೀಚೆಗೆ ನೀಡಿರುವ ಹೇಳಿಕೆಯಂತೆ ನಡೆದುಕೊಂಡಲ್ಲಿ ಅದಕ್ಕೆ ಅಮೆರಿಕದ ಸಮ್ಮತಿಯಿದೆ.
ಇರಾನ್‌ಗೆ ತೆರಳುವ ಮುನ್ನ ಎರ‌್ಡೋಗನ್ ಒಬಾಮ ಜತೆ ಎರಡು ಗಂಟೆಗಳ ಕಾಲ ಚರ್ಚಿಸಿದ್ದರು. ಪರಮಾಣು ಕಾರ್ಯಕ್ರಮ ಹಾಗೂ ಸಿರಿಯಾ ವಿಚಾರದ ಕುರಿತು ಖಮೇನಿಗೆ ಏನು ಹೇಳಬೇಕು ಎಂಬ ಬಗ್ಗೆ ಈ ಚರ್ಚೆ ನಡೆದಿತ್ತು~ ಎಂದೂ ಇಗ್ನಾಷಿಯಸ್ ತಿಳಿಸಿದ್ದಾರೆ.
ಕಳೆದ ವಾರ ಇದೇ ವಿಚಾರಕ್ಕೆ ಸಂಬಂಧಿಸಿ ಹೇಳಿಕೆ ನೀಡಿದ್ದ ಅಮೆರಿಕ, ಇರಾನ್ ವಿವಾದಿತ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿ ಆರು ದೇಶಗಳ ಗುಂಪಿನ ಜತೆ ಮಾತುಕತೆ ನಡೆಸಬೇಕು ಎಂದು ನಾನು ನಿರೀಕ್ಷಿಸುತ್ತಿರುವುದಾಗಿ ಹೇಳಿತ್ತು. ಈ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳುವ ಕಾಲ ಮುಗಿದುಹೋಗಿದೆ.
ಮಾತುಕತೆಯ ಈ ಅವಕಾಶವನ್ನು ಇರಾನ್ ಬಳಸಿಕೊಳ್ಳಬೇಕು ಎಂದೂ ಒಬಾಮ ಖಮೇನಿಗೆ ಟರ್ಕಿ ಪ್ರಧಾನಿ ಎರ‌್ಡೋಗನ್ ಮೂಲಕ ಸಂದೇಶ ಕಳುಹಿಸಿದ್ದರು.
ಆದರೆ, ನಾಗರಿಕ ಪರಮಾಣು ಕಾರ್ಯಕ್ರಮಗಳಿಗೆ ಇರಾನ್ ನೆಲದಲ್ಲೇ ಯುರೇನಿಯಂ ಸಂವರ್ಧನೆಗೆ ಅವಕಾಶ ಮಾಡಿಕೊಡಲಾಗುವುದೇ ಎಂಬ ಕುರಿತು ಒಬಾಮ ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಈ ಮಧ್ಯೆ, ಇರಾನ್ ಹಾಗೂ ಇತರ ಆರು ದೇಶಗಳ ನಡುವಿನ ಮಾತುಕತೆಯ ಆತಿಥ್ಯ ವಹಿಸಲು ಸಿದ್ಧವಿರುವುದಾಗಿ ಟರ್ಕಿ ತಿಳಿಸಿದೆ.
ಅಣ್ವಸ್ತ್ರ ವಿವಾದಕ್ಕೆ ಸಂಬಂಧಿಸಿ 2011ರ ಜನವರಿಯಲ್ಲಿ ಇರಾನ್, ಬ್ರಿಟನ್, ಚೀನಾ, ಫ್ರಾನ್ಸ್, ಜರ್ಮನಿ, ರಷ್ಯಾ ಹಾಗೂ ಅಮೆರಿಕ ಜತೆ ಮಾತುಕತೆ ನಡೆಸಿತ್ತು. ಆದರೆ, ಈ ಮಾತುಕತೆ ಯಾವುದೇ ಫಲಿತಾಂಶ ನೀಡಿರಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.