ADVERTISEMENT

ಇಸ್ರೇಲ್ ಜತೆ ಒಪ್ಪಂದಕ್ಕೆ ಸಿದ್ಧತೆ

​ಪ್ರಜಾವಾಣಿ ವಾರ್ತೆ
Published 9 ಜನವರಿ 2012, 19:30 IST
Last Updated 9 ಜನವರಿ 2012, 19:30 IST
ಇಸ್ರೇಲ್ ಜತೆ ಒಪ್ಪಂದಕ್ಕೆ ಸಿದ್ಧತೆ
ಇಸ್ರೇಲ್ ಜತೆ ಒಪ್ಪಂದಕ್ಕೆ ಸಿದ್ಧತೆ   

ಜೆರುಸಲೇಂ (ಪಿಟಿಐ): ಭಾರತ ಮತ್ತು ಇಸ್ರೇಲ್ ನಡುವಣ ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದ ಮಹತ್ವದ ಒಪ್ಪಂದಕ್ಕೆ ಮಂಗಳವಾರ ಸಹಿ ಬೀಳಲಿದ್ದು, ಇದು ಎರಡೂ ದೇಶಗಳ ರಾಜತಾಂತ್ರಿಕ ಸಂಬಂಧ ಸುಧಾರಣೆ ಯಲ್ಲಿ ಮಹತ್ವದ ಮೈಲುಗಲ್ಲಾಗಲಿದೆ.

ಭಯೋತ್ಪಾದನೆ ನಿಗ್ರಹ, ರಕ್ಷಣೆ, ಕೃಷಿ ಮತ್ತು ಇಂಧನ ಇತ್ಯಾದಿ ಕ್ಷೇತ್ರಗಳಲ್ಲಿ ಇಸ್ರೇಲ್ ಭಾರತದ ಮಹತ್ವದ ಪಾಲುದಾರನಾಗಿದ್ದು, ಈ ದಿಸೆಯಲ್ಲಿ ಇದೀಗ ಇನ್ನೂ ಎತ್ತರದ ಸಾಧನೆಗೆ ರಂಗಸಜ್ಜಿಕೆಯಾಗಿದೆ ಎಂದು ಇಸ್ರೇಲ್‌ನಲ್ಲಿ ಭಾರತದ ರಾಯಭಾರಿ ಯಾಗಿರುವ ನವ್‌ತೇಜ್ ಸರ‌್ನಾ ಹೇಳಿದ್ದಾರೆ.

ಭಾರತ ಮತ್ತು ಇಸ್ರೇಲ್ ನಡುವಿನ ರಾಜತಾಂತ್ರಿಕ ಸಂಬಂಧ 20 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸೋಮವಾರ ಸುದ್ದಿಸಂಸ್ಥೆಗೆ ಸಂದರ್ಶನ ನೀಡಿರುವ ಅವರು, ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಂಬಂಧಿಸಿದಂತೆ ಈ ದೇಶಗಳ ನಡುವೆ ಮಾತುಕತೆ ನಡೆಯುತ್ತಿದ್ದು, ಒಪ್ಪಂದಕ್ಕೆ ಸಹಿ ಬಿದ್ದಲ್ಲಿ ವಾಣಿಜ್ಯ ವ್ಯವಹಾರದಲ್ಲಿ ಭಾರಿ ಪ್ರಗತಿ ಕಾಣಲಿದೆ ಎಂದು ಆಶಿಸಿದರು.

1992ರಲ್ಲಿ 20 ಕೋಟಿ ಡಾಲರ್‌ಗಳಷ್ಟು ವ್ಯವಹಾರದಿಂದ ಆರಂಭವಾದ ದ್ವಿಪಕ್ಷೀಯ ವಾಣಿಜ್ಯ ವಹಿವಾಟು ಈಗ  900 ಕೋಟಿ ಅಮೆರಿಕ ಡಾಲರ್‌ಗಳಷ್ಟಾಗಿದೆ ಎಂದರು.

`ರಕ್ಷಣಾ ಕ್ಷೇತ್ರದಲ್ಲೂ ಇಸ್ರೇಲ್ ಭಾರತದ ಮಹತ್ವದ ಪಾಲುದಾರ ನಾಗಿದ್ದು, ಶಸ್ತ್ರಾಸ್ತ್ರ ಹಾಗೂ ಯುದ್ಧ ಸಾಮಗ್ರಿಗಳ ಪೂರೈಕೆಯಲ್ಲಿ ರಷ್ಯಾದ ನಂತರ ಎರಡನೇ ಸ್ಥಾನದಲ್ಲಿದೆ. ಮಾರುವ ಮತ್ತು ಕೊಳ್ಳುವ ಸಂಬಂಧ ದಿಂದ ಒಂದು ಹೆಜ್ಜೆ ಮುಂದಿಟ್ಟು ಈ ಕ್ಷೇತ್ರದಲ್ಲಿ ಜಂಟಿ ಸಂಶೋಧನೆ ನಡೆಸುವತ್ತ ಹೆಜ್ಜೆ ಇಡಲಾಗಿದೆ~ ಎಂದು ಹೇಳಿದರು.

ಯುದ್ಧ ವಿಮಾನ, ಟ್ಯಾಂಕರ್‌ಗಳ ಆಧುನೀಕರಣ, ಕ್ಷಿಪಣಿ ತಯಾರಿಕೆ ಯಲ್ಲೂ ಇಸ್ರೇಲ್ ನೆರವು ಪಡೆಯ ಲಾಗುತ್ತಿದೆ ಎಂದರು.

ನೀರಾವರಿ ಇಲ್ಲದ ಕಡೆ ಅಥವಾ ಅತಿ ಕಡಿಮೆ ನೀರು ಬಳಸಿ ಹಣ್ಣು ಬೆಳೆಯುತ್ತಿರುವ ಇಸ್ರೇಲ್ ಜಲ ನಿರ್ವಹಣೆಯಲ್ಲಿ ಅತ್ಯುನ್ನತ ಸಾಧನೆ ಮಾಡಿದೆ. ಈ ತಂತ್ರಜ್ಞಾನದ ನೆರವಿನಲ್ಲಿ ರಾಜಸ್ತಾನದಲ್ಲಿ ಆಲಿವ್, ಮಹಾ ರಾಷ್ಟ್ರದಲ್ಲಿ ದಾಳಿಂಬೆ ಬೆಳೆಯ ಲಾಗುತ್ತಿದೆ ಎಂದರು.

ಇಂಧನ ಮತ್ತು ವಾಯು ಶಕ್ತಿ ಕ್ಷೇತ್ರಗಳಲ್ಲೂ ಸಹಕಾರದ ನಿರೀಕ್ಷೆಯಿದೆ. ಇಸ್ರೇಲ್ ಅತಿ ಕಡಿಮೆ ಸಂಪನ್ಮೂಲ ಹೊಂದಿರುವ ದೇಶವಾಗಿದ್ದು, ಇತ್ತೀಚೆಗೆ ಆ ದೇಶದ ಕಡಲ ತೀರದಲ್ಲಿ ಭಾರಿ ನೈಸರ್ಗಿಕ  ಅನಿಲ ನಿಕ್ಷೇಪ ಪತ್ತೆಯಾಗಿದೆ. ಮುಂದಿನ ಮೂರು ದಶಕಗಳ ಕಾಲ ಇಸ್ರೇಲ್‌ನ ಇಂಧನ ಅಗತ್ಯವನ್ನು ಪೂರೈಸುವಷ್ಟು ಅನಿಲ ಅಲ್ಲಿದೆ.

 ಅಲ್ಲದೇ ಯೂರೋಪ್ ಮತ್ತು ಏಷ್ಯಾಕ್ಕೆ ಅನಿಲ ರಫ್ತು ಮಾಡುವ ಸಾಧ್ಯತೆಯೂ ಇದೆ. ಭಾರತದ ತೈಲ ಕಂಪೆನಿಗಳು ಈ ಯೋಜನೆಗಳಲ್ಲಿ ಈಗಾಗಲೇ ಆಸಕ್ತಿ ತೋರಿವೆ ಎಂದರು.

ಇಸ್ರೇಲ್‌ನಲ್ಲಿ ಎಸ್.ಎಂ.ಕೃಷ್ಣ
ಜೆರುಸಲೇಂ (ಪಿಟಿಐ): 
ಎರಡು ದಿನಗಳ ಭೇಟಿಯ ಉದ್ದೇಶದಿಂದ ವಿದೇಶಾಂಗ ಸಚಿವ ಎಸ್.ಎಂ. ಕೃಷ್ಣ ಸೋಮವಾರ ಇಲ್ಲಿಗೆ ಬಂದಿಳಿದರು. ಜೋರ್ಡಾನ್‌ನಿಂದ ಅಲೆನ್‌ಬಿ ಗಡಿ ಮೂಲಕ ಬಂದ ಕೃಷ್ಣ ಅವರನ್ನು ನವ್‌ತೇಜ್ ಸರ‌್ನಾ ಹಾಗೂ ಇಸ್ರೇಲ್ ವಿದೇಶಾಂಗ ಇಲಾಖೆ ಅಧಿಕಾರಿಗಳು ಬರಮಾಡಿಕೊಂಡರು. 

ಹತ್ತು ವರ್ಷಗಳ ನಂತರ ಭಾರತದ ವಿದೇಶಾಂಗ ಸಚಿವರು ಇಸ್ರೇಲ್‌ಗೆ ನೀಡುತ್ತಿರುವ ಈ ಭೇಟಿ ಮಧ್ಯಪ್ರಾಚ್ಯದ ಸೂಕ್ಷ್ಮ ರಾಜಕೀಯ ಸನ್ನಿವೇಶದ ಹಿನ್ನೆಲೆಯಲ್ಲಿ  ಪ್ರಾಮುಖ್ಯತೆ ಗಳಿಸಿಕೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.