ADVERTISEMENT

ಈಜಿಪ್ಟಿನಲ್ಲಿ ಕ್ಷಿಪ್ರಕ್ರಾಂತಿ ಮೊರ್ಸಿ ಪದಚ್ಯುತ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 20:25 IST
Last Updated 3 ಜುಲೈ 2013, 20:25 IST

ಕೈರೊ (ಪಿಟಿಐ): ಈಜಿಪ್ಟಿನ ಪ್ರಬಲ ಸೇನೆಯು ಬುಧವಾರ ರಾತ್ರಿ ಯಶಸ್ವಿ ಕ್ಷಿಪ್ರಕ್ರಾಂತಿ ನಡೆಸಿ ರಾಷ್ಟ್ರಾಧ್ಯಕ್ಷ ಮೊಹಮ್ಮದ್ ಮೊರ್ಸಿ ಅವರನ್ನು ಪದಚ್ಯುತಗೊಳಿಸಿತು.

ಪ್ರಜಾತಾಂತ್ರಿಕ ಚುನಾವಣೆಯಲ್ಲಿ ಆಯ್ಕೆಯಾದ ರಾಷ್ಟ್ರದ ಮೊತ್ತಮೊದಲ ಅಧ್ಯಕ್ಷರಾಗಿದ್ದ ಮೊರ್ಸಿ ಅವರನ್ನು ಪದಚ್ಯುತಗೊಳಿಸಿದ ಸೇನೆಯು, ನಾಡಿನ ಇಸ್ಲಾಂ ಪ್ರಣೀತ ಸಂವಿಧಾನವನ್ನು ಅಮಾನತುಗೊಳಿಸಿದೆ. ಮೊರ್ಸಿ ಅವರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಎಂದು ಅವರ ಆಪ್ತರೊಬ್ಬರು ತಿಳಿಸಿದ್ದಾರೆ.

ಸಾಂವಿಧಾನಿಕ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಅವರನ್ನು ಮೊರ್ಸಿ ಸ್ಥಾನಕ್ಕೆ ರಾಷ್ಟ್ರದ ಹಂಗಾಮಿ ಅಧ್ಯಕ್ಷರಾಗಿ ನೇಮಿಸಲಾಗಿದೆ ಎಂದು ಸೇನಾ ಕಮಾಂಡರ್ ಜನರಲ್ ಅಬದೆಲ್ ಫತ್ಹಾ ಅಲ್- ಸಿಲಿ ರಾಷ್ಟ್ರವನ್ನು ಉದ್ದೇಶಿಸಿ ಟಿ.ವಿ. ಮೂಲಕ ನೀಡಿದ ಹೇಳಿಕೆಯಲ್ಲಿ ತಿಳಿಸಿದರು. ರಾಷ್ಟ್ರದಲ್ಲಿ ಶೀಘ್ರವೇ ಚುನಾವಣೆ ನಡೆಸುವುದಾಗಿಯೂ ಅವರು ಹೇಳಿದರು.

ಮೊರ್ಸಿ ಪದಚ್ಯುತಿ ಆಗುತ್ತಿದ್ದಂತೆಯೇ ರಾಷ್ಟ್ರದಾದ್ಯಂತ ಲಕ್ಷಾಂತರ ಪ್ರತಿಭಟನಾಕಾರರು ಹರ್ಷೋದ್ಗಾರ ಮಾಡಿದರು.

ದೇಶದಲ್ಲಿ ಯಾವುದೇ ರೀತಿಯ ಹಿಂಸೆಯ ವಾತಾವರಣ ಸೃಷ್ಟಿಯಾದರೆ ಸಶಸ್ತ್ರ ಪಡೆಗಳು ಮತ್ತು ಪೊಲೀಸರು ಸೂಕ್ತವಾಗಿ ಪ್ರತಿಕ್ರಿಯಿಸಲಿವೆ ಎಂದು ಅಬದೆಲ್ ಫತ್ಹಾ ಎಚ್ಚರಿಕೆ ನೀಡಿದ್ದಾರೆ.

ಈ ಮುನ್ನ ಸೇನೆಯು, ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯಲು ಮೊರ್ಸಿಗೆ 48 ಗಂಟೆಗಳ ಗಡುವು ನೀಡಿತ್ತು. ಮೊರ್ಸಿ ಈ ಅವಧಿ ಮೀರಿದರೂ ರಾಜೀನಾಮೆ ನೀಡದಿದ್ದಾಗ ಸೇನೆ ಕ್ಷಿಪ್ರಕ್ರಾಂತಿ ನಡೆಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.