ADVERTISEMENT

ಈಜಿಪ್ಟ್ ಸೇನೆಗೆ ಇರಾನ್ ಎಚ್ಚರಿಕೆ

ಬಿಕ್ಕಟ್ಟು ಉಲ್ಬಣಿಸಿದರೆ ಮಧ್ಯ ಪ್ರವೇಶ ಅನಿವಾರ್ಯ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 19:59 IST
Last Updated 2 ಜುಲೈ 2013, 19:59 IST
ಈಜಿಪ್ಟ್ ಪ್ರಧಾನಿ  ಮೊಹಮದ್ ಮೊರ್ಸಿ ಅವರ ರಾಜೀನಾಮೆಗೆ ಆಗ್ರಹಿಸಿ ಕೈರೊದ ತೆಹ್ರೀರ್ ಚೌಕದಲ್ಲಿ ಅಸಂಖ್ಯಾತ ಪ್ರತಿಭಟನಾಕಾರರು ಮಂಗಳವಾರ ಪ್ರತಿಭಟನೆ ನಡೆಸಿದರು	 -ರಾಯಿಟರ್ಸ್‌ ಚಿತ್ರ
ಈಜಿಪ್ಟ್ ಪ್ರಧಾನಿ ಮೊಹಮದ್ ಮೊರ್ಸಿ ಅವರ ರಾಜೀನಾಮೆಗೆ ಆಗ್ರಹಿಸಿ ಕೈರೊದ ತೆಹ್ರೀರ್ ಚೌಕದಲ್ಲಿ ಅಸಂಖ್ಯಾತ ಪ್ರತಿಭಟನಾಕಾರರು ಮಂಗಳವಾರ ಪ್ರತಿಭಟನೆ ನಡೆಸಿದರು -ರಾಯಿಟರ್ಸ್‌ ಚಿತ್ರ   

ಟೆಹರಾನ್ (ಎಎಫ್‌ಪಿ):  ಜನಾದೇಶದಿಂದ ಅಸ್ತಿತ್ವಕ್ಕೆ ಬಂದ ಸರ್ಕಾರದ ಜತೆಗೆ ಸಾಮರಸ್ಯ ಮೂಡಿಸಲು ನೆರವಾಗಬೇಕು ಎಂದು ಈಜಿಪ್ಟ್ ಸೇನೆಗೆ ಸಲಹೆ ಮಾಡಿರುವ ಇರಾನ್ ಸರ್ಕಾರವು, ರಾಜಕೀಯ ಬಿಕ್ಕಟ್ಟು ಉಲ್ಬಣಿಸಿದರೆ ಮಧ್ಯ ಪ್ರವೇಶ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

ಈಜಿಪ್ಟ್‌ನ ಅಧ್ಯಕ್ಷ ಮೊಹಮದ್ ಮೊರ್ಸಿ ಅವರು ಜನರಿಂದ ಅಧಿಕೃತವಾಗಿ ಆಯ್ಕೆಯಾಗಿರುವುದರಿಂದ ಸೇನೆಯು ದೇಶದಲ್ಲಿ ಸಾಮರಸ್ಯ ಮೂಡಿಸಲು ಚುನಾಯಿತ ಸರ್ಕಾರಕ್ಕೆ ನೆರವು ನೀಡಬೇಕು ಎಂದು ಇರಾನ್‌ನ ಉಪ ವಿದೇಶಾಂಗ ಸಚಿವ ಹೊಸ್ಸೆನ್ ಅಮಿರ್ ಅಬ್ದುಲ್ಲಾಹಿನ್ ತಿಳಿಸಿದ್ದಾರೆ.

ಈಜಿಪ್ಟ್‌ನ್ನು ಇಬ್ಭಾಗ ಮಾಡುವುದರಿಂದ ಯಾರಿಗೂ ಲಾಭವಾಗುವುದಿಲ್ಲ. ಈಜಿಪ್ಟನ ಸ್ಥಿರತೆಗೆ ಜನಾದೇಶವನ್ನು ಗೌರವಿಸುವುದು ಮುಖ್ಯ ಎಂದು ತಿಳಿಸಿದ್ದಾರೆ.

2011ರಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ನಂತರ ಅಧಿಕಾರಕ್ಕೆ ಬಂದ ಮೊರ್ಸಿ ನೇತೃತ್ವದ ಸರ್ಕಾರದ ಜತೆ ಇರಾನ್ ಉತ್ತಮ ಬಾಂಧವ್ಯ ಹೊಂದಿದೆ. ಸುನ್ನಿ ಮುಸ್ಲಿಂ ಪಂಗಡದ ಭಾರಿ ಬೆಂಬಲದೊಂದಿಗೆ ಅಧಿಕಾರಕ್ಕೆ ಬಂದ ಮೊರ್ಸಿ, 1979ರ ನಂತರ ಇರಾನ್‌ಗೆ ಭೇಟಿ ನೀಡಿದ ಮೊದಲ ಈಜಿಪ್ಟ್‌ನ ನಾಯಕ.

ಇಸ್ಲಾಂ ಪರ ಇರುವ ಮೊರ್ಸಿ ಸರ್ಕಾರವು ಜನರ ಬೇಡಿಕೆಗೆ 48 ಗಂಟೆಗಳಲ್ಲಿ ಸ್ಪಂದಿಸದಿದ್ದರೆ ಮಧ್ಯೆ ಪ್ರವೇಶ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಈಜಿಪ್ಟ್ ಸೇನೆಯು ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ಹಿನ್ನೆಲೆಯಲ್ಲಿ ಇರಾನ್‌ನ ವಿದೇಶಾಂಗ ಉಪ ಸಚಿವರು ಹೇಳಿಕೆ ನೀಡಿದ್ದಾರೆ.

ಲಕ್ಷಾಂತರ ಜನರು ಬೀದಿಗಿಳಿದು ಮೊರ್ಸಿ ಪದಾತ್ಯಾಗಕ್ಕೆ ಒತ್ತಾಯಿಸುತ್ತಿರುವ ಹಿನ್ನೆಲೆಯಲ್ಲಿ ಸೇನೆಯ ಮಧ್ಯೆ ಪ್ರವೇಶ ಮಾಡುವ ಎಚ್ಚರಿಕೆ ನೀಡಿದೆ.

ಇರಾನ್ ವಿದೇಶಾಂಗ ಉಪ ಸಚಿವರ ಹೇಳಿಕೆಯ ನಂತರ ಸೇನೆಯ ವೆಬ್‌ಸೈಟ್‌ನಲ್ಲಿ ಸ್ಪಷ್ಟನೆಯ ರೂಪದ ಹೇಳಿಕೆ ಪ್ರಕಟಿಸಿದ್ದು, `ಕ್ಷಿಪ್ರ ಕ್ರಾಂತಿ ಮಾಡುವುದು ಸೇನೆಯ ಉದ್ದೇಶವಲ್ಲ' ಎಂದು ತಿಳಿಸಲಾಗಿದೆ.

ಗಡುವು ತಿರಸ್ಕರಿಸಿದ ಮೊರ್ಸಿ: ಈ ಮಧ್ಯೆ,  ಅಧ್ಯಕ್ಷ ಮೊರ್ಸಿ ಅವರು ಸೇನೆ ನೀಡಿರುವ ಗಡುವನ್ನು ತಿರಸ್ಕರಿಸಿದ್ದಾರೆ. ದೇಶದಲ್ಲಿ ಸಾಮರಸ್ಯ ಮೂಡಿಸಲು ಸರ್ಕಾರ ತನ್ನದೇ ಆದ ಮಾರ್ಗವನ್ನು ಅನುಸರಿಸಲಿದೆ ಎಂದು ಅಧ್ಯಕ್ಷರ ಕಚೇರಿಯ ಪ್ರಕಟಣೆ ತಿಳಿಸಿದೆ.

ಮೊರ್ಸಿ ಅವರು ರಾಷ್ಟ್ರದ ಸೇನಾಪಡೆ, ಇತರ ಭದ್ರತಾ ಪಡೆಗಳ ಪ್ರಮುಖ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ.

ಈ ಮಧ್ಯೆ ವಿದೇಶಾಂಗ ಸಚಿವ ಮೊಹ್ಮದ್ ಕಮೆಲ್ ರಾಜೀನಾಮೆ ನೀಡಿದ್ದಾರೆ. ಸೋಮವಾರ ನಾಲ್ವರು ಸಚಿವರು ರಾಜೀನಾಮೆ ನೀಡಿದ್ದರು.

ಒಬಾಮ ಆತಂಕ
ಡಾರ್ ಎಸ್ ಸಲಾಮ್ (ಎಎಫ್‌ಪಿ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಈಜಿಪ್ಟ್ ಅಧ್ಯಕ್ಷ ಮೊಹಮದ್ ಮೊರ್ಸಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿ, `ರಾಜಕೀಯ ಬಿಕ್ಕಟ್ಟು ಹೆಚ್ಚುತ್ತಿರುವುದರಿಂದ ಈಜಿಪ್ಟ್ ಜನತೆಯ ಬೇಡಿಕೆಗಳ ಬಗ್ಗೆ ಗಮನಹರಿಸಬೇಕು' ಎಂದು ಸಲಹೆ ಮಾಡಿದ್ದಾರೆ. 

ಒಬಾಮ ಅವರು ತಾಂಜೇನಿಯಾದಿಂದ ದೂರವಾಣಿಯಲ್ಲಿ ಮಾತನಾಡಿ, ` ಈಜಿಪ್ಟ್‌ನಲ್ಲಿಯ ಪ್ರಜಾಪ್ರಭುತ್ವ ಪ್ರಕ್ರಿಯೆಗೆ ಅಮೆರಿಕ ಬೆಂಬಲ ನೀಡುತ್ತದೆಯೇ ವಿನಾಃ ಯಾವುದೇ ಒಂದು ರಾಜಕೀಯ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ' ಎಂದು  ಸ್ಪಷ್ಟಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.