ನಯ್ ಪೈ ತಾವ್ (ಪಿಟಿಐ): ಪಾಕಿಸ್ತಾನದಲ್ಲಿರುವ ತಮ್ಮ ಹುಟ್ಟೂರಿಗೆ ಭೇಟಿ ನೀಡುವ ಬಯಕೆ ಯನ್ನು ಪ್ರಧಾನಿ ಮನಮೋಹನ್ ಸಿಂಗ್ ವ್ಯಕ್ತಪಡಿಸಿದ್ದರು. ಆದರೆ ಅವರ ಅಧಿಕಾರಾವಧಿಯಲ್ಲಿ ಈ ಬಯಕೆ ಈಡೇರುವ ಸಾಧ್ಯತೆ ಕಡಿಮೆ ಎಂದು ಮೂಲಗಳು ತಿಳಿಸಿವೆ.
1932 ಸೆ. 26ರಂದು ಪಂಜಾಬ್ ಪ್ರಾಂತ್ಯದ ಘಾಹ್ ಗ್ರಾಮದಲ್ಲಿ ಸಿಂಗ್ ಜನಿಸಿದ್ದರು. 81 ವರ್ಷದ ಹಿಂದೆ ತಾವು ಹುಟ್ಟಿ ಬೆಳೆದಿದ್ದ ಊರಿಗೆ ಭೇಟಿ ನೀಡಬೇಕೆಂದು ಅವರು ಬಯಕೆ ವ್ಯಕ್ತಪಡಿಸಿದ್ದರು.
ಪಾಕ್‌ಗೆ ಭೇಟಿ ನೀಡುವಂತೆ ಅಲ್ಲಿನ ಪ್ರಧಾನಿ ನವಾಜ್ ಶರೀಫ್ ಆಹ್ವಾನ ನೀಡಿದ್ದರೂ ಈ ಭೇಟಿಯಲ್ಲಿ ಭಾರತ– ಪಾಕ್ ನಡುವಿನ ವಿವಾದಾತ್ಮಕ ವಿಚಾರಗಳು ಇತ್ಯರ್ಥ ಆಗುವ ಸಾಧ್ಯತೆ ಇದ್ದಲ್ಲಿ ಮಾತ್ರ ಅಲ್ಲಿಗೆ ಪ್ರವಾಸ ಕೈಗೊಳ್ಳುವುದಾಗಿ ಸಿಂಗ್ ಹೇಳಿದ್ದರು.
ಅಲ್ಲದೇ 26/11 ರ ಮುಂಬೈ ದಾಳಿಕೋರರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಲ್ಲಿ ನಿಧಾನಗತಿ ತೋರುತ್ತಿರುವ ಪಾಕ್ ಕ್ರಮಕ್ಕೆ ಸಿಂಗ್ ಅಸಂತೋಷ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಇನ್ನೇನು ಚುನಾವಣೆ ಘೋಷಣೆಯಾಗಲಿದ್ದು, ಪ್ರಧಾನಿ ಪಾಕಿಸ್ತಾನ ಭೇಟಿ ಅಸಂಭವವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.