ಬಾಗ್ದಾದ್ (ಎಎಫ್‌ಪಿ): ಮುಂದಿನ ವರ್ಷ ಐಎಸ್ ಉಗ್ರರ ಹಿಡಿತದಿಂದ ದೇಶವನ್ನು ಸಂಪೂರ್ಣ ಸ್ವತಂತ್ರಗೊಳಿಸುವುದಾಗಿ ಇರಾಕ್ ಪ್ರಧಾನಿ ಹೈದರ್ ಅಲ್ ಅಬಾದಿ ಅವರು ಮಂಗಳವಾರ ಶಪಥ ಮಾಡಿದ್ದಾರೆ.
ಐಎಸ್ ಉಗ್ರರಿಂದ ರಮದಿಯನ್ನು ವಶಪಡಿಸಿಕೊಂಡ ಬಳಿಕ ಸರ್ಕಾರಿ ಸ್ವಾಮ್ಯದ ವಾಹಿನಿಯಲ್ಲಿ ಮಾತನಾಡಿದ ಅವರು, ‘2015 ವಿಮೋಚನಾ ವರ್ಷವಾಗಿದ್ದರೆ, 2016 ಇರಾಕ್ ಮತ್ತು ಮೆಸಪೊಟೆಮಿಯಾದಲ್ಲಿನ ಐಎಸ್ ಉಗ್ರರನ್ನು ನಾಶಪಡಿಸುವ ಮಹಾನ್ ಗೆಲುವುಗಳ ವರ್ಷವಾಗಲಿದೆ’ ಎಂದರು.
‘ಮೊಸುಲ್ ನಗರವನ್ನು ವಿಮೋಚನೆಮಾಡಲು ಬರುತ್ತಿದ್ದೇವೆ. ಇದು ಐಎಸ್‌ಗೆ ನಿರ್ಣಾಯಕ ಸೋಲಾಗಲಿದೆ’ ಎಂದರು. ಆದರೆ, ಇರಾಕ್ ಪಡೆಯ ಮುಂದಿನ ಯುದ್ಧ ಮೊಸುಲ್‌ನಲ್ಲಿ ನಡೆಯಲಿದೆಯೇ ಅಥವಾ ಇತರೆ ಪಟ್ಟಣ ಮತ್ತು ನಗರಗಳನ್ನು ಮರುವಶಪಡಿಸಿಕೊಳ್ಳು ಉದ್ದೇಶಿಸಿದೆಯೇ ಎಂಬುದನ್ನು ಅವರು ಸ್ಪಷ್ಟಪಡಿಸಲಿಲ್ಲ.
ಕುರ್ದಿಶ್ ನೆರವು ಅಗತ್ಯ: ಮೊಸುಲ್ ನಗರವನ್ನು ಐಎಸ್ ಉಗ್ರರಿಂದ ಬಿಡಿಸಿಕೊಳ್ಳಲು ಕುರ್ದಿಶ್ ಹೋರಾಟಗಾರರ ನೆರವಿನ ಅಗತ್ಯವಿದೆ ಎಂದು ಇರಾಕ್‌ನ ಹಣಕಾಸು ಸಚಿವ ಹೋಷಿಯಾರ್ ಜೆಬಾರಿ ಹೇಳಿದ್ದಾರೆ.
‘ಮೊಸುಲ್ ನಗರದಲ್ಲಿನ ಐಎಸ್ ಉಗ್ರರ ಮೇಲೆ ದಾಳಿ ನಡೆಸಲು ಸಮರ್ಪಕ ಯೋಜನೆ, ಸಿದ್ಧತೆ ಮತ್ತು ಬದ್ಧತೆ ಅಗತ್ಯವಿದೆ. ಇದು ಕುರ್ದಿಶ್ ಸಹಾಯವಿಲ್ಲದೆ ಅಸಾಧ್ಯ’ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.