ವಿಶ್ವಸಂಸ್ಥೆ (ಪಿಟಿಐ): ಉಗ್ರರ ಬೆದರಿಕೆಗೆ ತಾನು ಬಗ್ಗುವುದಿಲ್ಲ ಎಂದು ಪಾಕಿಸ್ತಾನ ಮಾನವ ಹಕ್ಕುಗಳ ಯುವ ಹೋರಾಟಗಾರ್ತಿ ಮಲಾಲ ಯೂಸೂಫ್‌ಝೈ ವಿಶ್ವಸಂಸ್ಥೆಗೆ ಸ್ಪಷ್ಟಪಡಿಸಿದಳು.
ತಾಲಿಬಾನ್ ಉಗ್ರರ ದಾಳಿಗೆ ಒಳಗಾದ ನಂತರ ಇದೇ ಮೊದಲ ಬಾರಿಗೆ ವಿಶ್ವಸಂಸ್ಥೆಯಲ್ಲಿ ಶುಕ್ರವಾರ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಮಲಾಲ, `ಗುಂಡುಗಳಿಂದ ನಮ್ಮನ್ನು ಸುಮ್ಮನಾಗಿಸಬಹುದು ಎಂದು ಅವರು ತಿಳಿದಿದ್ದಾರೆ. ಆದರೆ ಅವರು ಇದರಲ್ಲಿ ವಿಫಲರಾದರು' ಎಂದರು. ಶುಕ್ರವಾರಕ್ಕೆ 16ನೇ ವರ್ಷಕ್ಕೆ ಕಾಲಿಟ್ಟ ಮಲಾಲ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ್ದು ವಿಶೇಷ ಎನಿಸಿತು.
ಮಕ್ಕಳನ್ನು ಶಾಲೆಗೆ ಕಳುಹಿಸಿ ಎಂದು ಈ ಮೂಲಕ ಅಂತಾರಾಷ್ಟ್ರೀಯ ಸಮುದಾಯದಲ್ಲಿ ಮನವಿಮಾಡಿಕೊಂಡ ಮಲಾಲ, ಇದಕ್ಕಾಗಿ ಅಧಿಕ ಶ್ರಮವಹಿಸಬೇಕು ಎಂದರು. ನಾವು ನಮ್ಮ ಪುಸ್ತಕ ಹಾಗೂ ಪೆನ್ನುಗಳನ್ನು ಕೈಗೈಗೆತ್ತಿಕೊಳ್ಳಬೇಕು. ಇವುಗಳು ನಮ್ಮ ಶಕ್ತಿಯುತ ಆಯುಧಗಳಾಗಿವೆ ಎಂದಳು.
`ಒಂದು ಮಗು, ಒಬ್ಬ ಶಿಕ್ಷಕ ಒಂದು ಪೆನ್ನು ಹಾಗೂ ಒಂದು ಪುಸ್ತಕ ಇಡೀ ವಿಶ್ವದಲ್ಲೆ ಬದಲಾವಣೆ ತರಬಲ್ಲದು' ಎಂದು ಪ್ರತಿಪಾದಿಸಿದ ಮಲಾಲ ಈ ಮೂಲಕ ಶಿಕ್ಷಣದ ಮಹತ್ವವನ್ನು ಒತ್ತಿಹೇಳಿದರು. ಶಿಕ್ಷಣದಿಂದ ಮಾತ್ರ ಉಗ್ರರಿಗೆ ಪಾಠ ಕಲಿಸಬಹುದಾಗಿದೆ.
ನನ್ನ ಗುರಿ ಹಾಗೂ ಮಹತ್ವಾಕಾಂಕ್ಷೆಯನ್ನು ಬದಲಾಯಿಸುವುದಾಗಿ ಉಗ್ರರು ತಿಳಿದಿದ್ದರು. ಆದರೆ ನನ್ನ ಜೀವನದಲ್ಲಿ ಏನೂ ಬದಲಾವಣೆ ಆಗಲಿಲ್ಲ ಎಂದಳು.
ಮಲಾಲ ಜನ್ಮದಿನದ ಅಂಗವಾಗಿ ಇದೇ ಸಂದರ್ಭದಲ್ಲಿ ವಿಶ್ವಸಂಸ್ಥೆ ಜುಲೈ 12 ಅನ್ನು `ಮಲಾಲ ದಿನ'ವನ್ನಾಗಿ ಘೋಷಿಸಿತು.
ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಸೇರಿಸುವ ಸಂಕಲ್ಪವನ್ನು ಈ ದಿನದ ಅಂಗವಾಗಿ ಮಾಡಲಾಯಿತು. ಬಾಲಕಿಯರ ಶಿಕ್ಷಣಕ್ಕೆ ಮಲಾಲ ಪ್ರೋತ್ಸಾಹಿಸುವುದನ್ನು ವಿರೋಧಿಸಿ ತಾವು ಆಕೆಯ ಮೇಲೆ ದಾಳಿ ಮಾಡಿದ್ದಾಗಿ ತಾಲಿಬಾನಿಗಳು ಹೇಳಿಕೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.