ಫ್ಯೋಂಗ್‌ಯಾಂಗ್/ವಾಷಿಂಗ್ಟನ್ (ಪಿಟಿಐ/ಐಎಎನ್‌ಎಸ್): ಅಂತರರಾಷ್ಟ್ರೀಯ ಸಮುದಾಯದ ತೀವ್ರ ವಿರೋಧದ ನಡುವೆಯೂ ಉಪಗ್ರಹ ಉಡಾವಣೆ ನಡೆಸಿದ ಉತ್ತರಕೊರಿಯಾದ ಪರೀಕ್ಷಾರ್ಥ ಪ್ರಯೋಗವು ಸಂಪೂರ್ಣ ನೆಲಕಚ್ಚಿದೆ. ಅದು ಉಡಾವಣೆ ಮಾಡಿದ ಉಪಗ್ರಹವು ಛಿದ್ರಛಿದ್ರಗೊಂಡು ಹಳದಿ ಸಮುದ್ರಕ್ಕೆ ಬಿದ್ದಿದೆ.
ಆದರೆ ಇದು ತನ್ನ ರಾಕೆಟ್ ಉಡಾವಣೆ ಕಾರ್ಯಕ್ರಮದ ಕೊನೆಯಲ್ಲ ಎಂದು ಹೇಳಿರುವ ಉತ್ತರ ಕೊರಿಯಾ 2 - 3 ವರ್ಷಗಳಲ್ಲಿ ಮತ್ತೆ ರಾಕೆಟ್ ಉಡಾವಣೆ ಕೈಗೊಳ್ಳುವುದಾಗಿ ತಿಳಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಅಮೆರಿಕ ಹಾಗೂ ಅದರ ಮಿತ್ರ ರಾಷ್ಟ್ರಗಳು ಇದೊಂದು ಪ್ರಚೋದನಾತ್ಮಕ ಕೃತ್ಯ ಎಂದು ಹೇಳಿವೆ. ಇದೊಂದು ಪ್ರಚೋದನಾತ್ಮಕ ಕೃತ್ಯ ಮಾತ್ರವಲ್ಲ ಅಂತರರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆ ಹಾಗೂ ಪ್ರಾದೇಶಿಕ ಸ್ಥಿರತೆಗೆ ಭಂಗ ಉಂಟು ಮಾಡುವಂತದ್ದು ಎಂದು ಶ್ವೇತ ಭವನದ ಕಾರ್ಯದರ್ಶಿ ತಿಳಿಸಿದ್ದಾರೆ.
ಭಾರತ ಕೂಡ ಇದನ್ನು ಖಂಡಿಸಿದ್ದು, ಉತ್ತರಕೊರಿಯಾ ಅಂತರರಾಷ್ಟ್ರೀಯ ಕಾನೂನನ್ನು ಮೀರಬಾರದು ಎಂದು ಹೇಳಿದೆ. ಇದರಿಂದಾಗಿ ಕೊರಿಯಾ ಪ್ರದೇಶದಲ್ಲಿ ಶಾಂತಿ ಹಾಗೂ ಸ್ಥಿರತೆಗೆ ಭಂಗ ಉಂಟಾಗಲಿದೆ ಎಂದು ಭಾರತ ತಿಳಿಸಿದೆ.
ಶಾಂತಿಯ ಉದ್ದೇಶಕ್ಕಾಗಿ ತಾನು ಉಪಗ್ರಹ ಹಾರಿಬಿಡುತ್ತಿರುವುದಾಗಿ ಉತ್ತರಕೊರಿಯಾ ಪದೇ ಪದೇ ಹೇಳುತ್ತಿದ್ದರೂ ಜಪಾನ್ ಮುಂತಾದ ರಾಷ್ಟ್ರಗಳು ಇದೊಂದು ಖಂಡಾಂತರ ಕ್ಷಿಪಣಿ ಎಂದೇ ಭಾವಿಸಿದ್ದವು.
ಇದರಿಂದ ಪ್ರಾದೇಶಿಕ ಸ್ಥಿರತೆಗೆ ಧಕ್ಕೆ ಉಂಟಾಗುತ್ತದೆಂದು ಹೇಳಿ ಅಮೆರಿಕ ಮೊದಲಾದ ರಾಷ್ಟ್ರಗಳು ಉಪಗ್ರಹ ಉಡಾವಣೆ ಮಾಡಬಾರದೆಂದು ತೀವ್ರವಾದ ಒತ್ತಡ ಹೇರಿ ಎಚ್ಚರಿಕೆಯನ್ನೂ ನೀಡಿದ್ದವು. ಆದಾಗ್ಯೂ ಯಾವುದಕ್ಕೂ ಜಗ್ಗದ ಉತ್ತರ ಕೊರಿಯಾ ಅಂತಿಮವಾಗಿ ಉಪಗ್ರಹ ಉಡಾವಣೆ ಮಾಡಿಯೇ ಬಿಟ್ಟಿತು. ಆದರೆ ಅದು ತನ್ನ ಉದ್ದೇಶಿತ ಗುರಿಯನ್ನು ಮುಟ್ಟಲಾರದೆ ಸಿಡಿದು ಚೂರಾಗಿ ಸಮುದ್ರದ ಪಾಲಾಯಿತು.
ಉಪಗ್ರಹ ವಿಫಲಗೊಂಡಿದ್ದಕ್ಕೆ ಉತ್ತರಕೊರಿಯಾದ ವಿಜ್ಞಾನಿಗಳು ಕಾರಣಗಳನ್ನು ಹುಡುಕುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.