ADVERTISEMENT

ಎಚ್‌4 ವೀಸಾ–ಸದ್ಯಕ್ಕೆ ನಿರ್ಧಾರವಿಲ್ಲ

ಪಿಟಿಐ
Published 19 ಮೇ 2018, 19:30 IST
Last Updated 19 ಮೇ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ವಾಷಿಂಗ್ಟನ್‌: ‘ಕಾನೂನು ಪ್ರಕ್ರಿಯೆ ಪೂರ್ಣವಾಗುವವರೆಗೆ, ಎಚ್‌–4 ವೀಸಾಕ್ಕೆ ಸಂಬಂಧಿಸಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳುವುದಿಲ್ಲ’ ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌1ಬಿ ವೀಸಾದಾರರ ಅವಲಂಬಿತ ಸಂಗಾತಿಗಳಿಗೆ (ಗಂಡ ಅಥವಾ ಹೆಂಡತಿ) ಎಚ್‌4 ವೀಸಾ ನೀಡಲಾಗುತ್ತಿದೆ. ಇವರಿಗೆ ಕಾನೂನುಬದ್ಧವಾಗಿ ಕೆಲಸ ಮಾಡುವ ಅವಕಾಶವನ್ನು ರದ್ದುಪಡಿಸಲು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸರ್ಕಾರ ನಿರ್ಧರಿಸಿತ್ತು. ನೂರು ದಿನ ಕಳೆದ ಬಳಿಕವೂ ಯಾವುದೇ ನಿರ್ಧಾರಕ್ಕೆ ಬರಲು ಸರ್ಕಾರ ವಿಫಲವಾಗಿದ್ದರಿಂದ ಹಳೆಯ ಪದ್ಧತಿಯನ್ನು ಮುಂದುವರಿಸುವಂತೆ ಸಂಸದರು ಒತ್ತಾಯಿಸಿದ್ದರು.

ಎಚ್‌-1ಬಿ ವೀಸಾ ಪಡೆದು ನೌಕರಿಯಲ್ಲಿರುವವರ ಜತೆಗೆ ಅಮೆರಿಕಕ್ಕೆ ಬಂದಿರುವವರ ಪೈಕಿ ಮಹಿಳೆಯರ ಪ್ರಮಾಣ ಶೇ 94 ಹಾಗೂ ಇದರಲ್ಲಿ ಶೇ 93ರಷ್ಟು ಮಹಿಳೆಯರು ಭಾರತೀಯ ಮೂಲದವರಾಗಿದ್ದಾರೆ.

ADVERTISEMENT

‘ಎಚ್‌–4 ವೀಸಾ ಹೊಂದಿರುವವರು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸದೃಢಗೊಳಿಸಿದ್ದಾರೆ. ಹಲವು ವರ್ಷಗಳಿಂದ ದೇಶದಲ್ಲಿ ನೆಲೆಸಿದ್ದ ಇವರು ಕುಟುಂಬಕ್ಕೂ ಆರ್ಥಿಕವಾಗಿ ಬೆನ್ನೆಲುಬಾಗಿದ್ದರು. ಈ ಪೈಕಿ ಕೆಲವರು ಶಾಶ್ವತ ನಿವಾಸಿ ಸ್ಥಾನಮಾನ ಪಡೆಯುವ ಸಾಧ್ಯತೆಯಿದ್ದು, ಹೊಸ ಕಾನೂನಿನಿಂದ ದೇಶದ ಆರ್ಥಿಕತೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಲಿದೆ. ಈ ಕಾರಣದಿಂದ ಪ್ರಸ್ತಾವಿತ ಕಾನೂನನ್ನು ಮರುಪರಿಶೀಲಿಸಬೇಕು’ ಎಂದು 103 ಸಂಸದರು ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.