ADVERTISEMENT

ಎರಡನೇ ಶಂಕಿತ ಆರೋಪಿ ಸೆರೆ

ಬಾಸ್ಟನ್ ಅವಳಿ ಬಾಂಬ್ ಸ್ಫೋಟ ಪ್ರಕರಣ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 19:59 IST
Last Updated 20 ಏಪ್ರಿಲ್ 2013, 19:59 IST
ಝೋಖರ್
ಝೋಖರ್   

ಬಾಸ್ಟನ್ (ಐಎಎನ್‌ಎಸ್): `ಬಾಸ್ಟನ್ ಮ್ಯಾರಥಾನ್' ವೇಳೆ ಸಂಭವಿಸಿದ ಅವಳಿ ಬಾಂಬ್ ಸ್ಫೋಟ ಪ್ರಕರಣದ ಎರಡನೇ ಶಂಕಿತ ಆರೋಪಿ ಝೋಖರ್ ಸರ್ನೆವ್‌ನನ್ನು ಸೆರೆ ಹಿಡಿಯುವಲ್ಲಿ ಅಮೆರಿಕ ಪೊಲೀಸರು ಕೊನೆಗೂ ಯಶಸ್ವಿಯಾಗಿದ್ದಾರೆ.

ಸತತ 23 ಗಂಟೆಗಳ ಕಾರ್ಯಾಚರಣೆಯ ನಂತರ ಶುಕ್ರವಾರ ರಾತ್ರಿ ಆರೋಪಿ ಝೋಖರ್‌ನನ್ನು ಸೆರೆ ಹಿಡಿದಿರುವ ವಿಷಯವನ್ನು ಟ್ವಿಟ್ಟರ್‌ನಲ್ಲಿ ಘೋಷಿಸಿರುವ ಬಾಸ್ಟನ್ ಪೊಲೀಸರು, `ಆರೋಪಿಯ ಕಾರ್ಯಾಚರಣೆ ಕೊನೆಗೊಂಡಿದೆ. ನ್ಯಾಯಕ್ಕೆ ಜಯ ಸಿಕ್ಕಿದೆ' ಎಂದು ತಿಳಿಸಿದ್ದಾರೆ.

ಘಟನೆಯ ಬೆನ್ನು ಹತ್ತಿದ್ದ ಪೊಲೀಸರು ಕೊನೆಗೂ ಇಬ್ಬರು ಶಂಕಿತ ಸಹೋದರರಾದ ಟೆಮರ‌್ಲಾನ್ ಸರ್ನೆವ್ (26) ಮತ್ತು ಝೋಖರ್ ಸರ್ನೆವ್ (19) ಹಾಗೂ ಅವರ ಅಡಗುತಾಣವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದರು.

ಬಾಸ್ಟನ್‌ನ ಉಪನಗರ ವಾಟರ್‌ಟೌನ್‌ನಲ್ಲಿ ದೋಣಿಯೊಂದರ ಹಿಂದೆ ಅಡಗಿದ್ದ ಆರೋಪಿಗಳ ಸೆರೆಗೆ ಬಲೆ ಬೀಸಿ ಶುಕ್ರವಾರ ರಾತ್ರಿ ಸ್ಥಳವನ್ನು ಸುತ್ತುವರಿದಿದ್ದರು.ಈ ವೇಳೆ ತಪ್ಪಿಸಿಕೊಂಡು ಪರಾರಿಯಾಗಲು ಯತ್ನಿಸಿದ ಶಸ್ತ್ರಸಜ್ಜಿತ ಆರೋಪಿಗಳು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ಅದಕ್ಕೆ ಪ್ರತಿಯಾಗಿ ಪೊಲೀಸರು ನಡೆಸಿದ ಗುಂಡಿನ ದಾಳಿಗೆ ಮೊದಲ ಆರೋಪಿ ಟೆಮರ‌್ಲಾನ್ ಸಾವನ್ನಪ್ಪಿದ್ದ. ಈ ವೇಳೆ ಝೋಖರ್ ತಪ್ಪಿಸಿಕೊಂಡಿದ್ದನಾದರೂ, ನಂತರದ ಕಾರ್ಯಾಚರಣೆಯಲ್ಲಿ ಸೆರೆ ಸಿಕ್ಕ.

ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಗಾಯಗೊಂಡಿರುವ ಝೋಖರ್ ಸ್ಥಿತಿ ಗಂಭೀರವಾಗಿದ್ದು, ಬಾಸ್ಟನ್‌ನ ಆಸ್ಪತ್ರೆಯೊಂದರಲ್ಲಿ ಆತನಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಬಾಸ್ಟನ್ ಪೊಲೀಸ್ ಆಯುಕ್ತ ಎಡ್ ಡೇವಿಸ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

`ಆರೋಪಿಗೆ ಧ್ವನಿವರ್ಧಕದ ಮೂಲಕ ಶಸ್ತ್ರ ತ್ಯಜಿಸಿ ಶರಣಾಗುವಂತೆ ಎಚ್ಚರಿಕೆ ನೀಡಲಾಯಿತಲ್ಲದೆ, ಆತನ ಎಲ್ಲಾ ಚಲನವಲನಗಳನ್ನು ಹೆಲಿಕಾಪ್ಟರ್‌ನಲ್ಲಿ ಥರ್ಮಲ್ ಇಮೇಜಿಂಗ್ ಕ್ಯಾಮೆರಾದ ಮೂಲಕ ಗಮನಿಸಲಾಗುತ್ತಿತ್ತು. ಈ ವೇಳೆ ಆತ ಗುಂಡಿನ ದಾಳಿಯಿಂದ ರಕ್ತದ ಮಡುವಿನಲ್ಲಿದ್ದದ್ದು ಕಂಡುಬಂತು' ಎಂದು ಘಟನೆ ಕುರಿತು ಡೇವಿಸ್ ನೀಡಿರುವ ವಿವರಗಳನ್ನು ಸಿಎನ್‌ಎನ್ ವರದಿ ಮಾಡಿದೆ.

ಬಾಸ್ಟನ್ ನಗರದಲ್ಲಿ ಸೋಮವಾರ ನಡೆದ `ಬಾಸ್ಟನ್ ಮ್ಯಾರಥಾನ್' ವೇಳೆ ಅವಳಿ ಬಾಂಬ್ ಸ್ಫೋಟ  ಸಂಭವಿಸಿತ್ತು. ಘಟನೆಯಲ್ಲಿ ಮೂವರು ಸತ್ತು, 170ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.