ADVERTISEMENT

ಎರಡನೇ ಸುತ್ತಿನಲ್ಲಿ ಒಬಾಮ ಮೇಲುಗೈ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2012, 19:30 IST
Last Updated 17 ಅಕ್ಟೋಬರ್ 2012, 19:30 IST
ಎರಡನೇ ಸುತ್ತಿನಲ್ಲಿ ಒಬಾಮ ಮೇಲುಗೈ
ಎರಡನೇ ಸುತ್ತಿನಲ್ಲಿ ಒಬಾಮ ಮೇಲುಗೈ   

ಹೆಮ್‌ಸ್ಟೀಡ್ (ನ್ಯೂಯಾರ್ಕ್): ಎರಡನೇ ಬಾರಿ ಅಮೆರಿಕ ಅಧ್ಯಕ್ಷರಾಗಲು ಬಯಸಿರುವ  ಬರಾಕ್ ಒಬಾಮ ಎರಡನೇ ಸುತ್ತಿನ ಸಾರ್ವಜನಿಕ ಚುನಾವಣಾ ಚರ್ಚೆಯಲ್ಲಿ ಮೇಲುಗೈ ಸಾಧಿಸಿದ್ದಾರೆ.

ಹೋಫ್‌ಸ್ಟ್ರಾ ವಿಶ್ವವಿದ್ಯಾಲಯದಲ್ಲಿ ನಡೆದ ಚರ್ಚೆಯಲ್ಲಿ ಒಬಾಮ, ಅಮೆರಿಕವನ್ನು ಬಾಧಿಸುತ್ತಿರುವ `ಹೊರಗುತ್ತಿಗೆ, ತೆರಿಗೆ ಯೋಜನೆ ಮತ್ತು ಲಿಬಿಯಾ ದಂಗೆ~ಯಂತಹ ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಪರಿಸ್ಥಿತಿಯನ್ನು ತಮ್ಮ ಕಡೆ ವಾಲಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಆ ಮೂಲಕ ರಿಪಬ್ಲಿಕನ್ ಪಕ್ಷದ ಪ್ರತಿಸ್ಪರ್ಧಿ ಮಿಟ್ ರೋಮ್ನಿ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಒಬಾಮ ಯಶಸ್ವಿಯಾದರು. 

ಅಮೆರಿಕ ಅಧ್ಯಕ್ಷೀಯ ಚುನಾವಣೆಗಾಗಿ ಅಕ್ಟೋಬರ್ 3ರಂದು ಡೆನ್ವರ್‌ನಲ್ಲಿ ನಡೆದ ಮೊದಲ ಸುತ್ತಿನ ಚರ್ಚಾಸ್ಪರ್ಧೆಯಲ್ಲಿ ತೀವ್ರ ಒತ್ತಡಕ್ಕೆ ಒಳಗಾಗಿದ್ದ ಒಬಾಮ ಹಿನ್ನಡೆ ಅನುಭವಿಸಿದ್ದರು. ಒಬಾಮ ವಿರುದ್ಧ ಗದಾ ಪ್ರಹಾರ ನಡೆಸಿದ್ದ ರೋಮ್ನಿ ಮೇಲುಗೈ ಸಾಧಿಸಿದ್ದರು.

ಮೊದಲ ಸುತ್ತಿನಲ್ಲಿ ಮಾಡಿದ ತಪ್ಪುಗಳನ್ನು ತಿದ್ದಿಕೊಂಡ ಒಬಾಮ, ರಕ್ಷಣಾತ್ಮಕ ನೀತಿಯ ಬದಲು ರೋಮ್ನಿ ವಿರುದ್ಧ ವಾಗ್ದಾಳಿ ನಡೆಸಿದರು. ಎಲ್ಲ ಪ್ರಶ್ನೆಗಳಿಗೂ ನೇರ ಉತ್ತರ ನೀಡಿದರು. 

ಸಿಎನ್‌ಎನ್/ಒಆರ್‌ಸಿ ಸಂಸ್ಥೆ ರಾಷ್ಟದಾದ್ಯಂತ ನಡೆಸಿದ ಸಮೀಕ್ಷೆಯಲ್ಲಿ ಶೇ 46 ಮತದಾರರು ಒಬಾಮ ಪರ ಮತ್ತು ಶೇ 39ರಷ್ಟು ಮತದಾರರು ರೋಮ್ನಿ ಪರ ಒಲವು ತೋರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.