ADVERTISEMENT

ಐಫೋನ್ ಬಳಸುತ್ತಿದ್ದ ಮಹಿಳೆ ಸಾವು

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 16 ಜುಲೈ 2013, 19:59 IST
Last Updated 16 ಜುಲೈ 2013, 19:59 IST

ಬೀಜಿಂಗ್(ಪಿಟಿಐ): ಐಫೋನ್ ಬಳಸುತ್ತಿದ್ದಾಗ ವಿದ್ಯುತ್ ಪ್ರವಹಿಸಿ ಚೀನಾದ 23 ವರ್ಷದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.
ವಾಯವ್ಯ ಜಿಜಿಯಾಂಗ್ ಉಯ್‌ಗರ್ ಪ್ರಾಂತದಲ್ಲಿ ಈ ಘಟನೆ ನಡೆದಿದೆ. 

`ಐಫೋನ್ ಚಾರ್ಜ್ ಆಗುತ್ತಿದ್ದಾಗಲೇ ಕರೆಯೊಂದನ್ನು ಸ್ವೀಕರಿಸಿದ್ದರಿಂದ ಮಹಿಳೆ ಮೃತಪಟ್ಟಿದ್ದಾರೆ' ಎಂದು ಇವರ ಸಹೋದರಿ ತಿಳಿಸಿದ್ದಾರೆ.

ಸೆ.6ಕ್ಕೆ ಪಾಕ್ ಅಧ್ಯಕ್ಷೀಯ ಚುನಾವಣೆ?
ಇಸ್ಲಾಮಾಬಾದ್(ಪಿಟಿಐ):
ಪಾಕಿಸ್ತಾನ ನೂತನ ಅಧ್ಯಕ್ಷರ ಆಯ್ಕೆಗೆ ಸೆಪ್ಟೆಂಬರ್ 6 ರಂದು ಚುನಾವಣೆ ನಡೆಯುವ ಸಾಧ್ಯತೆ ಇದೆ. ಈಗೀನ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ಅಧಿಕಾರಾವಧಿ ಮುಗಿಯುವ ಎರಡು ದಿನಗಳ ಮೊದಲು ಚುನಾವಣೆ ನಡೆಯಲಿದೆ.

ದುಬೈ ಹಾಗೂ ಲಂಡನ್ ಪ್ರವಾಸದಲ್ಲಿರುವ ಜರ್ದಾರಿ, ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ವಕ್ತಾರ  ಫರ‌್ಹತ್ ಉಲ್ಲಾ ಬಾಬರ್ ಸೋಮವಾರ ತಿಳಿಸಿದ್ದರು. ಅಧಿಕೃತ ಮೂಲಗಳ ಪ್ರಕಾರ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಕೊನೆ ದಿನ ಜುಲೈ 24.

ಜೈಲಿನಿಂದ ತಪ್ಪಿಸಿಕೊಂಡ ನಾಲ್ವರು ಉಗ್ರರು
ಕ್ವಾಲಾಲಂಪುರ (ಪಿಟಿಐ):
  ಕಳೆದ ವಾರ ಇಲ್ಲಿ ನಡೆದ ಗಲಭೆಯಲ್ಲಿ ಇಂಡೊನೇಷ್ಯಾದ ನಾಲ್ವರು ಉಗ್ರರು ಜೈಲಿನಿಂದ ತಪ್ಪಿಸಿಕೊಂಡಿದ್ದು, ಮಲೇಷ್ಯಾದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

ತಾಂಜುಂಗ್ ಗುಸ್ತಾ ಕಾರಾಗೃಹದಲ್ಲಿರುವ 218 ಮಂದಿಯಲ್ಲಿ ಈ ನಾಲ್ವರೂ ಇದ್ದರು.

ಬ್ರಿಟನ್‌ನಲ್ಲಿ ಶೀಘ್ರವೇ ಚಾಲಕರಹಿತ ಕಾರು
ಲಂಡನ್ (ಪಿಟಿಐ):
ಮೊಟ್ಟ ಮೊದಲ ಬಾರಿ ಬ್ರಿಟನ್‌ನಲ್ಲಿ  ಚಾಲಕರಹಿತ ಕಾರಿನ ಪರೀಕ್ಷಾರ್ಥ ಸಂಚಾರ ಈ ವರ್ಷಾಂತ್ಯಕ್ಕೆ ನಡೆಯಲಿದೆ.
ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರು ಈ ನಿಟ್ಟಿನಲ್ಲಿ ಜಪಾನ್‌ನಿಸ್ಸಾನ್ ಕಂಪೆನಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಒಂದು ಸುತ್ತಿನ ಪರೀಕ್ಷೆ ಕೂಡ ಮುಗಿದಿದೆ.

ಬ್ರಿಟನ್‌ನ ವಾಹನ ದಟ್ಟಣೆ ಇರುವ ಪ್ರದೇಶದಲ್ಲಿ ಕಾರಿನ ಪರೀಕ್ಷಾರ್ಥ ಸಂಚಾರಕ್ಕೆ ಸಾರಿಗೆ ಇಲಾಖೆ ಅನುಮತಿ ನೀಡಿದೆ.
ಕಾರಿನಲ್ಲಿ ಸುರಕ್ಷತೆಯ ದೃಷ್ಟಿಯಿಂದ ಚಾಲಕರೊಬ್ಬರು ಇರುತ್ತಾರೆ.

ಭಯೋತ್ಪಾದನೆ ನಿಗ್ರಕ್ಕೆ ಕ್ರಮ: ರಾಘವನ್
ಇಸ್ಲಾಮಾಬಾದ್ (ಪಿಟಿಐ):
`ಭಯೋತ್ಪಾದಕ ಚಟುವಟಿಕೆಗಳನ್ನು ಹತ್ತಿಕ್ಕಲು ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು' ಎಂದು ಪಾಕಿಸ್ತಾನದಲ್ಲಿ ಭಾರತದ ನೂತನ ರಾಯಭಾರಿ ಟಿ.ಸಿ.ಎ. ರಾಘವನ್ ತಿಳಿಸಿದ್ದಾರೆ.

`ಭಾರತವು ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯ ಹೊಂದಲು ಬಯಸುತ್ತದೆ. ಇದರಿಂದ ಎರಡೂ ರಾಷ್ಟ್ರಗಳ ಜನರಿಗೆ ಅನುಕೂಲವಾಗುತ್ತದೆ' ಎಂದು ಸೋಮವಾರ ವಾಘಾ ಗಡಿ ಮೂಲಕ ಪಾಕಿಸ್ತಾನ ಪ್ರವೇಶಿಸಿದ ಬಳಿಕ ಸುದ್ದಿಗಾರರಿಗೆ ತಿಳಿಸಿದರು.
ರಾಘವನ್ ,  ಪಾಕ್‌ನಲ್ಲಿ  ಡೆಪ್ಯುಟಿ ಹೈ ಕಮಿಷನರ್ ಆಗಿ ಸೇವೆ ಸಲ್ಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT