ADVERTISEMENT

ಕತಾರ್‌ಗೆ ಅರಬ್‌ ದೇಶಗಳ ಬಹಿಷ್ಕಾರ; ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಲು ಟರ್ಕಿ, ಕುವೈತ್ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜೂನ್ 2017, 6:31 IST
Last Updated 6 ಜೂನ್ 2017, 6:31 IST
ಕೃಪೆ:ಎಎಫ್‍ಪಿ
ಕೃಪೆ:ಎಎಫ್‍ಪಿ   

ದುಬೈ: ಇಸ್ಲಾಮಿಕ್ ಸ್ಟೇಟ್ ಉಗ್ರರಿಗೆ ನೀಡುತ್ತಿರುವ ನೆರವು ಹಾಗೂ ಇರಾನ್ ಜೊತೆಗಿನ ಬಾಂಧವ್ಯವನ್ನು ಖಂಡಿಸಿ ಕತಾರ್ ಜತೆ ಆರು ದೇಶಗಳು ಸಂಬಂಧ ಕಡಿದುಕೊಂಡಿವೆ. ಅರಬ್‌ ದೇಶಗಳ ನಡುವಿನ ಸಂಬಂಧದಲ್ಲಿ ಮೂಡಿರುವ ಈ ಬಿರುಕು ಸರಿಪಡಿಸಲು ನೆರೆಯ ರಾಷ್ಟ್ರಗಳು ಪ್ರಯತ್ನ ಆರಂಭಿಸಿವೆ. ಈಗಾಗಲೇ ಟರ್ಕಿ ಮತ್ತು ಕುವೈತ್ ಮಧ್ಯಸ್ಥಿಕೆ ವಹಿಸಲು ಮುಂದೆ ಬಂದಿವೆ.

ಮಾತುಕತೆ ಮೂಲಕ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಉಭಯ ರಾಷ್ಟ್ರಗಳು ಸಿದ್ಧರಾಗಬೇಕು ಎಂದು ಟರ್ಕಿ ಹೇಳಿದೆ.

ಈ ಸಮಸ್ಯೆಯನ್ನು ಪರಿಹರಿಸಲು ಕುವೈತ್‍ ಸರ್ಕಾರ ಮುಂದಾಬೇಕು ಎಂದು ಅಲ್ಲಿನ ಸಂಸದೀಯ ಸದಸ್ಯರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಅದೇ ವೇಳೆ ಅಮೆರಿಕ ಮತ್ತು ರಷ್ಯಾ ಕೂಡಾ ಕತಾರ್- ಅರಬ್ ರಾಷ್ಟ್ರಗಳ ನಡುವಿನ ಸಮಸ್ಯೆ ಬಗೆಹರಿಸಲು ಮುಂದಾಗಿದೆ.

ADVERTISEMENT

ಈಜಿಪ್ಟ್, ಬಹರೇನ್, ಸೌದಿ ಅರೇಬಿಯಾ, ಸಂಯುಕ್ತ ಅರಬ್ ಒಕ್ಕೂಟ (ಯುಎಇ), ಯೆಮನ್‌ ಅಲ್ಲದೆ ಮಾಲ್ಡೀವ್ಸ್‌  ದೇಶಗಳು ಕತಾರ್‌ ಜತೆ ಸಂಬಂಧ ಕಡಿದುಕೊಂಡಿದ್ದು, ತಮ್ಮ ದೇಶದಿಂದ ಕತಾರ್‌ ರಾಜತಾಂತ್ರಿಕ ಸಿಬ್ಬಂದಿಯನ್ನು ಹಿಂದಕ್ಕೆ ಕಳುಹಿಸುವ ನಿರ್ಧಾರವನ್ನೂ ತೆಗೆದುಕೊಂಡಿವೆ. ಆದರೆ ಈ ನಿರ್ಧಾರದ ಬಗ್ಗೆ ಜನರು ಆತಂಕ ಪಡಬೇಕಾಗಿಲ್ಲ, ಜನ ಸಾಮಾನ್ಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುವುದು.

ಕತಾರ್ ಜತೆಗಿನ ಭೂಗಡಿಯನ್ನು ಮುಚ್ಚುವುದಾಗಿ ಸೌದಿ ಅರೇಬಿಯಾ ಘೋಷಿಸಿದೆ. ಭೂಗಡಿ ಮುಚ್ಚಿದರೂ ಆಹಾರ ಕೊರತೆ ಉಂಟಾಗಲ್ಲ ಎಂದು ಕತಾರ್ ಹೇಳಿದೆ.

ಆದರೆ ಸೌದಿ ಅರೇಬಿಯಾದ ಈ ಘೋಷಣೆಯಿಂದ ಕತಾರ್‍‍ನ ಜನರು ಆತಂಕಕ್ಕೊಳಗಾಗಿದ್ದಾರೆ. ಆಹಾರ ಕ್ಷಾಮ ಉಂಟಾಗುವ ಸಾಧ್ಯತೆ ಇದೆ ಎಂಬ ಭಯದಲ್ಲಿ ಇಲ್ಲಿನ ಸೂಪರ್ ಮಾರ್ಕೆಟ್‍ಗಳಲ್ಲಿ ಜನರು ಆಹಾರ ಉತ್ಪನ್ನಗಳನ್ನು ಖರೀದಿಸಲು ಮುಗಿಬೀಳುತ್ತಿರುವ ದೃಶ್ಯ ಎಲ್ಲೆಡೆ ಕಾಣುತ್ತಿತ್ತು. ಈಗಾಗಲೇ ಇಲ್ಲಿನ ಜನರು ಹಾಲು, ಮೊಟ್ಟೆ, ಸಕ್ಕರೆ, ಅಕ್ಕಿ ಮೊದಲಾದ ಆಹಾರ ವಸ್ತುಗಳನ್ನು ಸಂಗ್ರಹ ಮಾಡಿಡುತ್ತಿದ್ದಾರೆ.

ಸಂಬಂಧ ಕಡಿದುಕೊಂಡ ಬೆನ್ನಲ್ಲೇ ಕತಾರ್‍‍ಗೆ ಇರುವ ಸಕ್ಕರೆ ರಫ್ತು ಮಾಡುವುದನ್ನು ಸೌದಿ ಅರೇಬಿಯಾ ಮತ್ತು ಯುಎಇ ಸ್ಥಗಿತಗೊಳಿಸಿದ. ಕತಾರ್ ಜತೆಗಿನ  ಭೂಗಡಿಯನ್ನು ಸೌದಿ ಮುಚ್ಚಿರುವುದರಿಂದ 2022 ರಲ್ಲಿ ನಡೆಯಲಿರುವ ವಿಶ್ವಕಪ್ ಫುಟ್ಬಾಲ್‍ಗಿರುವ ಸಿದ್ಧತೆ ಕಾರ್ಯಗಳ ಮೇಲೂ ಇದು ಬಾಧಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.