ADVERTISEMENT

ಕನ್ನಡದ ಕೆಲಸ ವ್ರತವಾಗಲಿ: ದೊರಂಗೌ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2011, 19:30 IST
Last Updated 2 ಅಕ್ಟೋಬರ್ 2011, 19:30 IST

ಬಹರೇನ್: ಕನ್ನಡ ಉಳಿಸುವ ಕೆಲಸ ಈಗ ವ್ರತದಂತೆ ನಡೆಯಬೇಕು, ಅದಕ್ಕಾಗಿ ಎಲ್ಲ ಕನ್ನಡಿಗರೂ ಮುಂದಾಗಬೇಕು ಎಂದು ಕವಿ ದೊಡ್ಡರಂಗೇಗೌಡ ಅವರು ಕರೆ ನೀಡಿದರು.

 ಬಹರೇನ್ ರಾಷ್ಟ್ರದ ಮನಾಮದಲ್ಲಿ ಬಹರೇನ್ ಕನ್ನಡ ಸಂಘ ಏರ್ಪಡಿಸಿದ್ದ 8 ನೇ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನದಲ್ಲಿ ಸಮ್ಮೇಳನಾಧ್ಯಕ್ಷರಾಗಿ ಮಾತನಾಡಿದ ಅವರು, ಜಗತ್ತಿಗೇ ಅಪೂರ್ವ ಸಂಸ್ಕೃತಿಯನ್ನು ತೋರಿಸಿಕೊಟ್ಟ ಕನ್ನಡ ಭಾಷೆಗೆ ವಿಶಿಷ್ಟವಾದ ಸ್ಥಾನವಿದೆ ಎನ್ನುವುದನ್ನು ತಿಳಿದುಕೊಳ್ಳುವುದು ಅಗತ್ಯ ಎಂದರು .ಕನ್ನಡಕ್ಕೆ ಅಖಂಡ ಭವಿಷ್ಯ ಮತ್ತು ಪರಂಪರೆ ಇದೆ. 

ಕನ್ನಡದಲ್ಲಿ ಅಕ್ಷಯ ಸಾಹಿತ್ಯ ಭಂಡಾರವಿದ್ದು ಇದರ ಇತಿಹಾಸಕ್ಕೆ ಚೌಕಟ್ಟು ಇಲ್ಲವಾಗಿದೆ. ಭಾವನಾತ್ಮಕ ಸಂಸ್ಕೃತಿಯುಳ್ಳ ಕನ್ನಡದ ಭವಿಷ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ನೀಡಲು ತಮ್ಮ ಸಹಿಯನ್ನೂ ಕನ್ನಡದಲ್ಲಿಯೇ ಮಾಡಿ ಸರಸ್ವತಿ-ಲಕ್ಷ್ಮಿಯರ ಸೇವೆಗೂ ಪಾತ್ರರಾಗಿರಿ ಎಂದು ದೊಡ್ಡರಂಗೇಗೌಡ ಕರೆಯಿತ್ತರು.

ಕನ್ನಡದ ಸಂಸ್ಕೃತಿಯ ಬಗ್ಗೆ ಹೊರನಾಡ ಕನ್ನಡಿಗರ ಅಭಿಮಾನ ಅನನ್ಯವಾಗಿದೆ. ಕನ್ನಡದ ಬಗ್ಗೆ ಒಲವು, ಮನಸ್ಸುಗಳನ್ನು ಒಗ್ಗೂಡಿಸಿದೆ. ಇಂದು ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಭಾಷೆಯನ್ನು ಹುಡುಕುವಂತಹ ಪರಿಸ್ಥಿತಿ ಇದ್ದರೂ ಅನಿವಾಸಿ ಭಾರತೀಯರು, ಹೊರನಾಡ ಕನ್ನಡಿಗರು ಮಾತ್ರ ನಾಡು-ನುಡಿ-ನೆಲದ ಮೇಲೆ ಅಭಿಮಾನ ಹೊಂದಿದ್ದಾರೆ ಎಂದು ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ಕನ್ನಡಿಗರ ಸಮಿತಿಯ ಉಪಾಧ್ಯಕ್ಷ ಕ್ಯಾ. ಗಣೇಶ್ ಕಾರ್ಣಿಕ್ ಅವರು  ಅಭಿಪ್ರಾಯ ಪಟ್ಟರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಿಂದ ಬಹರೇನ್ ಕನ್ನಡ ಸಂಘ ಹಾಗೂ`ಹೃದಯವಾಹಿನಿ~ ಕನ್ನಡ ಮಾಸಿಕದ ಸಹಭಾಗಿತ್ವದಲ್ಲಿ ಸಮ್ಮೇಳನ  ಮನಾಮದಲ್ಲಿನ ಅಲ್ ರಾಜ ಶಾಲಾ ಸಭಾಂಗಣದಲ್ಲಿ ನಡೆಯಿತು.

 ವಿಶೇಷ ಆಮಂತ್ರಿತರಾಗಿ ಯು.ಕೆ ಕನ್ನಡ ಬಳಗದ ಅಧ್ಯಕ್ಷೆ  ಸುರೇಣು ಜಯರಾಂ ಮತ್ತು ಗೌರವ ಅಧ್ಯಕ್ಷ ಡಾ. ಕೆ.ಬಿ ನಾಗೂರು ಬಿಜಾಪುರ  ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ  ಅಧ್ಯಕ್ಷ ಗಂಗಾಧರ ಮೊದಲಿಯಾರ್ ಅವರಿಗೆ `ಅಂತರರಾಷ್ಟ್ರೀಯ ವಿಶ್ವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ~ಯನ್ನು ಇದೇ ಸಂದರ್ಭದಲ್ಲಿ ನೀಡಿ ಗೌರವಿಸಲಾಯಿತು. 

ಮಹಾರಾಷ್ಟ್ರದ ಕನ್ನಡ ಪತ್ರಕರ್ತರ ಸಂಘದ ಸಂಸ್ಥಾಪಕ ಗೌರವ ಕಾರ್ಯದರ್ಶಿ ರೋನ್ಸ್ ಬಂಟ್ವಾಳ ಅವರಿಗೆ `ಮಾಧ್ಯಮ ಪ್ರಶಸ್ತಿ ` ನೀಡಿ ಸನ್ಮಾನಿಸಲಾಯಿತು. ಖ್ಯಾತ ಭರತನಾಟ್ಯ ಕಲಾವಿದ ಟಿ.ಎಸ್. ಸಾಗರ್ ಪ್ರಸಾದ್, ಸಮಾಜ ಸೇವಕರುಗಳಾದ ಬೆಂಗಳೂರಿನ ಡಾ. ರಾಮ ರೆಡ್ಡಿ  ಹಾಗೂ ಶಿವಾನಂದ ಹೊಂಡದಕೇರಿ ಅವರನ್ನು ಸನ್ಮಾನಿಸಲಾಯಿತು. 

 ದೊಡ್ಡರಂಗೇಗೌಡ ಅವರ `ಕಾಡು-ಕಣಿವೆ-ಕಡಲು~ ಕೃತಿಯನ್ನು  ಸುರೇಣು ಜಯರಾಂ ಮತ್ತು  ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಅವರ ಸಂದೇಶವನ್ನು ನಾಗರಾಜ್ ಬಿ.ಜಮಖಂಡಿ ವಾಚಿಸಿದರು. ಬಳಿಕ ಸಚಿವರ ಉದ್ಯಮ ಮಾಧ್ಯಮ ಪುಸ್ತಿಕೆಯನ್ನು ಗಣೇಶ್ ಕಾರ್ಣಿಕ್ ಬಿಡುಗಡೆಗೊಳಿಸಿದರು. ಕವಿಯತ್ರಿ ಕೆ. ರಾಜೇಶ್ವರಿ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಿತು. ನಾಗರಾಜ ಕೋಟೆ ಅಧ್ಯಕ್ಷತೆಯಲ್ಲಿ ಹಾಸ್ಯಗೋಷ್ಠಿ ನಡೆಯಿತು.

ಬೆಂಗಳೂರಿನ ಗೊ.ನಾ. ಸ್ವಾಮಿ, ಎಲ್.ಗಿರೀಶ್, ಬಹರೇನ್ ಮತ್ತು ಮಂಜುನಾಥ್ ಪಾಂಡವಪುರ ಅವರು ಗೋಷ್ಠಿಯಲ್ಲಿ ಪಾಲ್ಗೊಂಡಿದ್ದರು. ಸಾಂಸ್ಕೃತಿಕ  ಕಾರ್ಯಕ್ರಮದ ಅಂಗವಾಗಿ ತುಮಕೂರಿನ ಸಾಯಿರಾಮನ್ ನೃತ್ಯ ಕೇಂದ್ರದ ಕಲಾವಿದರು ವಿಶ್ವ ವಿನಾಯಕ ನೃತ್ಯ ರೂಪಕವನ್ನು ಹಾಗೂ ಬಹರೇನ್‌ನ ಕನ್ನಡ ಸಂಘದ ಕಲಾವಿದರು `ಅತಿಕಾಯ ಮೋಕ್ಷ~ ಯಕ್ಷಗಾನ ಪ್ರಸ್ತುತಪಡಿಸಿದರು. ಬಹರೇನ್‌ನ ಕನ್ನಡ ಸಂಘದ ಅಧ್ಯಕ್ಷ ರಾಜ್ ಕುಮಾರ್ ಸ್ವಾಗತಿಸಿದರು. ಕೆ.ಪಿ. ಮಂಜುನಾಥ್ ಸಾಗರ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT