ADVERTISEMENT

ಕಲ್ಲಂಗಡಿಯಿಂದ ಹೃದಯಾಘಾತ ದೂರ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2012, 19:30 IST
Last Updated 5 ಅಕ್ಟೋಬರ್ 2012, 19:30 IST

ಲಂಡನ್ (ಪಿಟಿಐ): ಬೇಸಿಗೆಯ ಬಾಯಾರಿಕೆ ನೀಗಿಸಲು  ಹೆಸರಾಗಿದ್ದ ಕಲ್ಲಂಗಡಿ ಹಣ್ಣು ಹೃದಯ ಸಂಬಂಧಿ ಕಾಯಿಲೆಗಳನ್ನೂ ದೂರ ಇಡುವುದರ ಜೊತೆಗೆ ದೇಹದ ತೂಕ ಮತ್ತು ಕೊಬ್ಬನ್ನೂ ಕಡಿಮೆ ಮಾಡುತ್ತದೆ.

ಪ್ರತಿದಿನ ಕಲ್ಲಂಗಡಿ ಹಣ್ಣು ಸೇವಿಸುವುದರಿಂದ ಕೊಬ್ಬು ಕಡಿಮೆಯಾಗಿ, ಹೃದಯಾಘಾತ, ಅಧಿಕ ರಕ್ತದೊತ್ತಡ ಮೊದಲಾದ ಹೃದಯ ಸಂಬಂಧಿ ಕಾಯಿಲೆಗಳು ಬರುವುದನ್ನು ನಿಯಂತ್ರಿಸುತ್ತದೆ ಎಂದು ಅಮೆರಿಕದ ಪುರ್ಡ್ಯು ವಿವಿ ನಡೆಸಿದ ಸಂಶೋಧನೆ ತಿಳಿಸಿದೆ.  ಕಲ್ಲಂಗಡಿ ಹಣ್ಣಿನ ರಸ ಕುಡಿಯುವ ಬದಲು ಹೋಳುಗಳ ರೂಪದಲ್ಲಿ ಸೇವಿಸುವುದು ಹೆಚ್ಚು ಪರಿಣಾಮಕಾರಿ. ಅಲ್ಲದೇ ರಕ್ತದೊತ್ತಡವನ್ನು ಇದು ಕೂಡಲೇ ಶಮನ ಮಾಡುವಂತಹ ಗುಣವನ್ನು ಹೊಂದಿದೆ. ನೀರಿಗಿಂತ ಈ ಹಣ್ಣು ಹೆಚ್ಚು ಪರಿಣಾಮಕಾರಿ ಎನ್ನಲಾಗಿದೆ.

`ಸಂಶೋಧನೆಗೆ ಒಂದಷ್ಟು ಜನರನ್ನು ಎರಡು ಗುಂಪುಗಳಾಗಿ ವಿಂಗಡಿಸಿ, ಕೆಲವು ತಿಂಗಳಕಾಲ ಒಂದು ಗುಂಪಿಗೆ ನೀರನ್ನೂ, ಇನ್ನೊಂದು ಗುಂಪಿಗೆ ಕಲ್ಲಂಗಡಿ ರಸವನ್ನು ಸೇವಿಸಲು  ಕೊಡಲಾಯಿತು. ಕಲ್ಲಂಗಡಿ ರಸ ಸೇವಿಸಿದ ಗುಂಪಿನವರ ದೇಹಸ್ಥಿತಿ, ನೀರು ಸೇವಿಸಿದವರಿಗಿಂತ ಶೇ 50ರಷ್ಟು ಸಮತೋಲನ ಕಾಯ್ದುಕೊಂಡಿತ್ತು~ ಎಂದು ತಮ್ಮ ಸಂಶೋಧನೆ ಕುರಿತು ವಿವರಿಸುತ್ತಾರೆ ಡಾ. ಶುಬಿನ್ ಶಾಹ.

ಒಟ್ಟಾರೆ ಕಲ್ಲಂಗಡಿಯಲ್ಲಿನ ಸಿಟ್ರುಲಿನ್ ಅಂಶ ದೇಹ ಸಮಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ ಎನ್ನುತ್ತದೆ ನೂತನ ಸಂಶೋಧನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.