ADVERTISEMENT

ಕಿಶನ್‌ಗಂಗಾ ಯೋಜನೆಗೆ ಒಪ್ಪಿಗೆ

ಭಾರತದ ವಾದಕ್ಕೆ ವಿಶ್ವಬ್ಯಾಂಕ್‌ ಸಮ್ಮತಿ

ಪಿಟಿಐ
Published 2 ಆಗಸ್ಟ್ 2017, 19:30 IST
Last Updated 2 ಆಗಸ್ಟ್ 2017, 19:30 IST
ಕಿಶನ್‌ಗಂಗಾ ಯೋಜನೆಗೆ ಒಪ್ಪಿಗೆ
ಕಿಶನ್‌ಗಂಗಾ ಯೋಜನೆಗೆ ಒಪ್ಪಿಗೆ   

ವಾಷಿಂಗ್ಟನ್‌: ಜಮ್ಮು ಮತ್ತು ಕಾಶ್ಮೀರದ ಕಿಶನ್‌ಗಂಗಾ ಮತ್ತು ರಾಟ್ಲೆಯಲ್ಲಿ ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮತಿ ನೀಡಲಾಗಿದೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

ಝೇಲಂ ಮತ್ತು ಚೆನಬ್‌ ನದಿ ವ್ಯಾಪ್ತಿಯ ಕಿಶನ್‌ಗಂಗಾದಲ್ಲಿ 330 ಮೆಗಾವಾಟ್‌ ಮತ್ತು ರಾಟ್ಲೆಯಲ್ಲಿ 850 ಮೆಗಾವಾಟ್‌ ಸಾಮರ್ಥ್ಯದ ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಉದ್ದೇಶಿಸಿದ್ದು ಕೆಲವು ಷರತ್ತುಗಳೊಂದಿಗೆ ಈ ಯೋಜನೆಗಳಿಗೆ ಒಪ್ಪಿಗೆ ಸೂಚಿಸಲಾಗಿದೆ.

ವಿಶ್ವಬ್ಯಾಂಕ್‌ನ ಈ ನಿರ್ಧಾರ ಪ್ರಸ್ತುತ ಸನ್ನಿವೇಶದಲ್ಲಿ ಭಾರತಕ್ಕೆ ಮಹತ್ವದ್ದಾಗಿದೆ ಎಂದು ವಿಶ್ಲೇಷಿಸಲಾಗಿದೆ.

ADVERTISEMENT

ಪಾಕಿಸ್ತಾನವು ಈ ಯೋಜನೆಗಳ ಅನುಷ್ಠಾನಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಈ ಯೋಜನೆಯ ವಿನ್ಯಾಸದ ಬಗ್ಗೆ ಆತಂಕ ವ್ಯಕ್ತಪಡಿಸಿ ಕಳೆದ ವರ್ಷ ಪಾಕಿಸ್ತಾನ ವಿಶ್ವ ಬ್ಯಾಂಕ್‌ ಮೊರೆ ಹೋಗಿತ್ತು.

ಈ ಎಲ್ಲ ಅಂಶಗಳ ಕುರಿತು ವಿವರಗಳನ್ನು ಬಿಡುಗಡೆ ಮಾಡಿರುವ ವಿಶ್ವಬ್ಯಾಂಕ್‌, ಪಾಕಿಸ್ತಾನವು ಈ ಯೋಜನೆ ಸಂಬಂಧ ಮಧ್ಯಸ್ಥಿಕೆ ನ್ಯಾಯಾ
ಲಯ ಸ್ಥಾಪಿಸುವಂತೆ ಒತ್ತಾಯಿಸಿತ್ತು. ಭಾರತ ಸಹ ಈ ವಿಷಯದ ಬಗ್ಗೆ ಪರಿಶೀಲಿಸಲು ತಟಸ್ಥ ರಾಷ್ಟ್ರಗಳ ತಜ್ಞರನ್ನು ನೇಮಿಸುವಂತೆ ಆಗ್ರಹಿಸಿತ್ತು. ಪಾಕಿಸ್ತಾನದ ಆಕ್ಷೇಪಗಳು ಕೇವಲ ತಾಂತ್ರಿಕತೆಗೆ ಸಂಬಂಧಿಸಿದ್ದಾಗಿವೆ ಎಂದು ಭಾರತ ವಾದ ಮಂಡಿಸಿತ್ತು.

ಈ ಬಗ್ಗೆ ವಿವರ ನೀಡಿರುವ ವಿಶ್ವಬ್ಯಾಂಕ್‌, ಉಭಯ ದೇಶಗಳು ತಮ್ಮದೇ ಆದ ಅಭಿಪ್ರಾಯ ಮಂಡಿಸಿವೆ. ಸಿಂಧೂ ಜಲ ಒಪ್ಪಂದದ ಅನ್ವಯ ಈ ಎರಡು ನದಿಗಳನ್ನು ‘ಪಶ್ಚಿಮದ ನದಿಗಳು’ ಎಂದು ಪರಿಗಣಿಸಲಾಗಿದೆ. ಹೀಗಾಗಿ ಈ ನದಿಗಳ ನೀರನ್ನು ಪಾಕಿಸ್ತಾನ ಸಹ ಯಾವುದೇ ಷರತ್ತುಗಳು ಇಲ್ಲದೆ ಬಳಸಬಹುದು.  ಆದ್ದರಿಂದ ಎರಡು ಜಲ ವಿದ್ಯುತ್‌ ಘಟಕಗಳನ್ನು ನಿರ್ಮಿಸಲು ಭಾರತಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಿದೆ.

ಭಾರತ ಮತ್ತು ಪಾಕಿಸ್ತಾನ ಸತತ ಒಂಬತ್ತು ವರ್ಷಗಳ ಮಾತುಕತೆ ನಡೆಸಿದ ಬಳಿಕ 1960ರಲ್ಲಿ ವಿಶ್ವಬ್ಯಾಂಕ್‌ ಮಧ್ಯಸ್ಥಿಕೆಯಲ್ಲಿ ಸಿಂಧೂ ಜಲ ಒಪ್ಪಂದಕ್ಕೆ ಸಹಿ ಹಾಕಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

ಮುಂದಿನ ತಿಂಗಳು ಮಾತುಕತೆ: 

ಸಿಂಧೂ ಜಲ ಒಪ್ಪಂದದ ಕುರಿತು ಭಾರತ ಮತ್ತು ಪಾಕಿಸ್ತಾನ ಮುಂದಿನ ತಿಂಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿವೆ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

ಈ ಒಪ್ಪಂದದ ಕುರಿತು ಉಭಯ ದೇಶಗಳ ಕಾರ್ಯದರ್ಶಿಗಳ ಮಟ್ಟದ ಮಾತುಕತೆ ಇತ್ತೀಚೆಗೆ ಮುಕ್ತಾಯವಾದ ನಂತರ ವಿಶ್ವಬ್ಯಾಂಕ್‌ ಈ ಹೇಳಿಕೆ ನೀಡಿದೆ.

‘ಕಾರ್ಯದರ್ಶಿಗಳ ನಡುವೆ ಸೌಹಾರ್ದಯುತ ವಾತಾವರಣದಲ್ಲಿ ಮಾತುಕತೆ ನಡೆದಿದೆ. ಮತ್ತೆ ಈ ಮಾತುಕತೆಯನ್ನು ಮುಂದುವರಿಸಲು ಮುಂದಿನ ತಿಂಗಳು ಸಭೆ ಕರೆಯಲು ಉಭಯ ದೇಶಗಳು ಒಪ್ಪಿಗೆ ಸೂಚಿಸಿವೆ’ ಎಂದು ವಿಶ್ವಬ್ಯಾಂಕ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.