ADVERTISEMENT

ಕುಲಭೂಷಣ್ ಜಾಧವ್‌ಗೆ ದೂತಾವಾಸ ಕಚೇರಿ ಸಂಪರ್ಕ ಕಲ್ಪಿಸಲು ಪಾಕಿಸ್ತಾನ ನಿರಾಕರಣೆ

ಏಜೆನ್ಸೀಸ್
Published 2 ಜುಲೈ 2017, 14:36 IST
Last Updated 2 ಜುಲೈ 2017, 14:36 IST
ಕುಲಭೂಷಣ್ ಜಾಧವ್‌ಗೆ ದೂತಾವಾಸ ಕಚೇರಿ ಸಂಪರ್ಕ ಕಲ್ಪಿಸಲು ಪಾಕಿಸ್ತಾನ ನಿರಾಕರಣೆ
ಕುಲಭೂಷಣ್ ಜಾಧವ್‌ಗೆ ದೂತಾವಾಸ ಕಚೇರಿ ಸಂಪರ್ಕ ಕಲ್ಪಿಸಲು ಪಾಕಿಸ್ತಾನ ನಿರಾಕರಣೆ   

ಇಸ್ಲಾಮಾಬಾದ್: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ದೂತಾವಾಸ ಕಚೇರಿ ಸಂಪರ್ಕಿಸಲು ಅನುವು ಮಾಡಿಕೊಡಬೇಕು ಎಂಬ ಭಾರತದ ಮನವಿಯನ್ನು ಪಾಕಿಸ್ತಾನ ಸರ್ಕಾರ ತಿರಸ್ಕರಿಸಿದೆ. ಅಲ್ಲದೆ, ಭಾರತದ ವಿರುದ್ಧವೇ ಆರೋಪ ಮಾಡಿದೆ.

‘ಪಾಕಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಭಾರತ ಕುಮ್ಮಕ್ಕು ನೀಡುತ್ತಿದೆ. ಇದೇ ಉದ್ದೇಶಕ್ಕೆ ಭಾರತದ ಪರ ಕಾರ್ಯನಿರ್ವಹಿಸುತ್ತಿದ್ದ ಜಾಧವ್ ಬಲೂಚಿಸ್ತಾನಕ್ಕೆ ಬಂದಿದ್ದರು’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ನಫೀಸ್ ಜಕಾರಿಯಾ ಆರೋಪಿಸಿದ್ದಾರೆ. ಜಾಧವ್‌ಗೆ ದೂತಾವಾಸ ಕಚೇರಿ ಸಂಪರ್ಕಕ್ಕೆ ಅನುವು ಮಾಡಿಕೊಡುವ ಪ್ರಶ್ನೆಯೇ ಇಲ್ಲ ಎಂದೂ ಅವರು ಹೇಳಿದ್ದಾರೆ.

ಕುಲಭೂಷಣ್ ಜಾಧವ್ ಅವರನ್ನು ಭಾರತದ ಬೇಹುಗಾರ ಎಂದು ಪರಿಗಣಿಸಿದ್ದ ಪಾಕಿಸ್ತಾನದ ಸೇನಾ ನ್ಯಾಯಾಲಯ ಕೆಲ ತಿಂಗಳುಗಳ ಹಿಂದೆ ಅವರಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಇದರ ವಿರುದ್ಧ ಭಾರತ ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು. ಭಾರತದ ಮನವಿಯ ವಿಚಾರಣೆ ನಡೆಸಿದ್ದ ಅಂತರರಾಷ್ಟ್ರೀಯ ನ್ಯಾಯಾಲಯ ಜಾಧವ್ ಶಿಕ್ಷೆಗೆ ತಡೆಯಾಜ್ಞೆ ನೀಡಿತ್ತು. ಅಲ್ಲದೆ, ವಿಚಾರಣೆ ಸಂಪೂರ್ಣವಾಗಿ ಮುಕ್ತಾಯವಾಗುವವರೆಗೂ ಶಿಕ್ಷೆ ಜಾರಿ ಮಾಡುವಂತಿಲ್ಲ ಎಂದು ಆದೇಶಿಸಿತ್ತು. ನಂತರ, ಜಾಧವ್‌ಗೆ ಭಾರತೀಯ ರಾಯಭಾರ ಕಚೇರಿಯ ಸಂಪರ್ಕ ಕಲ್ಪಿಸಲು ಅನುವು ಮಾಡಿಕೊಡಬೇಕು ಎಂದು ಪಾಕಿಸ್ತಾನಕ್ಕೆ ಮನವಿ ಸಲ್ಲಿಸಲಾಗಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.